ಅಮೆರಿಕ ದಾಳಿಗೆ ಇರಾನ್‌ ಪ್ರತಿತಂತ್ರ – 700ಕ್ಕೂ ಹೆಚ್ಚು ತೈಲ ಟ್ಯಾಂಕರ್‌ಗಳು ಲಾಕ್‌

ಟೆಹ್ರಾನ್‌ : ಅಮೆರಿಕಾ ದಾಳಿಗೆ ಪ್ರತಿತಂತ್ರವಾಗಿ ಹಾರ್ಮೂಜ್‌ ಜಲಸಂಧಿಯನ್ನ ಇರಾನ್ ಮುಚ್ಚಿದೆ. ಇತ್ತ ಇರಾನ್ ನಿರ್ಧಾರದಿಂದ ಭಾರತದ ಸೇರಿ ಹಲವು ದೇಶಗಳಿಗೆ ಕಚ್ಚಾತೈಲ ಪೂರೈಕೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ದಟ್ಟವಾಗಿದೆ. ಪೆಟ್ರೋಲ್, ಡಿಸೇಲ್ ಕೊರತೆ. ಎಲ್‌ಪಿಜಿ ಗ್ಯಾಸ್‌ಗೂ ಬರಗಾಲ ಎದುರಾಗುವ ಆತಂಕವುಂಟಾಗಿದೆ.

700 ಕ್ಕೂ ಹೆಚ್ಚು ತೈಲ ಟ್ಯಾಂಕರ್‌ಗಳು ಲಾಕ್‌
ಅಮೆರಿಕ ಮತ್ತು ಅಮೆರಿಕ (USA) ಮಿತ್ರ ರಾಷ್ಟ್ರಗಳಿಗೆ ತಿರುಗೇಟು ಕೊಡಲು ಇರಾನ್‌ ಜಗತ್ತಿನ ಅತ್ಯಂತ ಪ್ರಮುಖ ತೈಲ ಮಾರ್ಗವಾದ ಹಾರ್ಮೂಜ್‌ ಜಲಸಂಧಿಯನ್ನೇ ಮುಚ್ಚಿದೆ. ಇದರಿಂದ ಇರಾನಿಯೇತರ 700ಕ್ಕೂ ಹೆಚ್ಚು ತೈಲ ಟ್ಯಾಂಕರ್‌ಗಳು ಜಲಸಂಧಿಯಲ್ಲೇ ಲಾಕ್‌ ಆಗಿವೆ. ಇದು ಭಾರತದ ಮೇಲೆ ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆಯಿದೆ.

ವಿಂಡ್‌ವರ್ಡ್ ಮತ್ತು ಕೆಪ್ಲರ್‌ನ ಕಡಲ ವಿಶ್ಲೇಷಣಾ ಸಂಸ್ಥೆಗಳ ಅಂಕಿ ಅಂಶಗಳ ಪ್ರಕಾರ, ಮಾರ್ಚ್‌ 1 ರಂದು 28 ಲಕ್ಷ ಬ್ಯಾರಲ್‌ಲ್‌ ತೈಲ ಹೊತ್ತ ಮೂರು ಟ್ಯಾಂಕರ್‌ಗಳು ಹಾರ್ಮೂಜ್‌ ಜಲಸಂಧಿಯನ್ನ ದಾಟಿದ್ದವು. ಆದರೂ ಇದು ಪ್ರಸಕ್ತ ವರ್ಷದಲ್ಲಿ ದೈನಂದಿನ ಸರಾಸರಿಗಿಂತ ಶೇ.86 ರಷ್ಟು ಕಡಿಮೆಯಾಗಿತ್ತು. ಮಾರ್ಚ್‌ 2ರ ಆರಂಭದ ವೇಳೆಗೆ ಒಂದು ಸಣ್ಣ ಟ್ಯಾಂಕರ್‌ ಮತ್ತು ಒಂದು ಸಣ್ಣ ಸರಕು ಹಡಗು ಮುಖ್ಯ ಲೇನ್‌ ಮೂಲಕ ಚಲಿಸಿದೆ. ಅದಾದ ಬಳಿಕ ಉಳಿದ ಟ್ಯಾಂಕರ್‌ಗಳು ಜಲಸಂಧಿಯಲ್ಲೇ ಲಾಕ್‌ ಆಗಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ತೈಲ ಮಾರ್ಗದಲ್ಲಿ ಒಟ್ಟು 706 ತೈಲ ಟ್ಯಾಂಕರ್‌ಗಳು ಎರಡೂ ಬದಿಗಳಲ್ಲಿ ಲಾಕ್‌ ಆಗಿವೆ. ಈ ಪೈಕಿ 334 ಕಚ್ಚಾ ವಾಹಕಗಳು, 109 ಮಂದ (ಕೊಳಕು) ಉತ್ಪನ್ನ ಟ್ಯಾಂಕರ್‌ಗಳು ಮತ್ತು 263 ಶುದ್ಧ ಉತ್ಪನ್ನ ಹಡಗುಗಳು ಸ್ಥಗಿತಗೊಂಡಿವೆ ಎಂದು ವರದಿಗಳು ತಿಳಿಸಿವೆ.

ಭಾರತದಲ್ಲಿ ಕಚ್ಚಾತೈಲದ ಸ್ಟಾಕ್
ಭಾರತವು ಶೇ. 55 ರಷ್ಟು ಕಚ್ಚಾತೈಲ ಆಮದು ಮಾಡಿಕೊಳ್ಳುತ್ತಿದ್ದು, 50% ಕ್ಕಿಂತ ಹೆಚ್ಚು ಮಧ್ಯಪ್ರಾಚ್ಯ ದೇಶಗಳಿಂದ ಬರುತ್ತಿದೆ. ಅರ್ಧದಷ್ಟು ಕಚ್ಚಾತೈಲ ಹಾರ್ಮೂಜ್‌ ಜಲಸಂಧಿಯಿಂದಲೇ ಸಪ್ಲೈ ಆಗಬೇಕು. ಭಾರತ ಪ್ರಸ್ತುತ 25-45 ದಿನಗಳಿಗಾಗುವಷ್ಟು ಕಚ್ಚಾತೈಲ ಹೊಂದಿದೆ. ಪೆಟ್ರೋಲ್ ಮತ್ತು ಡೀಸೆಲ್ ಉತ್ಪನ್ನಗಳು ಸಾಕಷ್ಟು ಇದೆ. ದೇಶವು 25-30 ದಿನಗಳ ಎಲ್‌ಪಿಜಿ ಸಂಗ್ರಹ ಹೊಂದಿದೆ. ಭಾರತದ ಬಳಿ ಸುಮಾರು 10 ಕೋಟಿ ಬ್ಯಾರೆಲ್‌ಗಳಿವೆ. ಇದು 40 ರಿಂದ 45 ದಿನಗಳ ಅಗತ್ಯಗಳನ್ನ ಪೂರೈಸಬಲ್ಲದು. ಒಂದು ವೇಳೆ 4 ವಾರಕ್ಕಿಂತ ಹೆಚ್ಚು ಸಂಘರ್ಷ ನಡೆದರೆ ಭಾರತಕ್ಕೆ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ. ಈ ಮಧ್ಯೆ ಆಮದು ವೆಚ್ಚ ಹೆಚ್ಚಿದರೂ ತಾತ್ಕಾಲಿಕವಾಗಿ ಬೆಲೆ ಹೆಚ್ಚಿಸದಿರಲು ಚಿಂತನೆಯನ್ನು ಕೇಂದ್ರ ಸರ್ಕಾರ ನಡೆಸಿದೆ.

ವಿಮಾನಗಳ ಹಾರಾಟ ಶುರು
ಮಧ್ಯಪ್ರಾಚ್ಯದಲ್ಲಿ ಬಿಕ್ಕಟ್ಟು ಹೆಚ್ಚುತ್ತಿರುವ ಮಧ್ಯೆ ವಿಮಾನಗಳ ಹಾರಾಟಗಳು ಶುರುವಾಗಿದೆ. ಭಾರತೀಯ ವಿಮಾನಯಾನ ಸಂಸ್ಥೆಗಳಿಂದ ಒಟ್ಟು 58 ವಿಮಾನಗಳ ಕಾರ್ಯ ನಿರ್ವಹಿಸಲು ಯೋಜನೆ ರೂಪಿಸಲಾಗಿದೆ. ನಾಗರಿಕ ವಿಮಾನಯಾನ ಸಚಿವಾಲಯದ ಪ್ರಕಾರ, 30 ಇಂಡಿಗೋ ವಿಮಾನಗಳು, 23 ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನಗಳು ಕಾರ್ಯ ನಿರ್ವಹಿಸಲಿವೆ. ಇಲ್ಲಿಯವರೆಗೆ, 1,221 ಭಾರತೀಯ ಮತ್ತು 388 ಅಂತಾರಾಷ್ಟ್ರೀಯ ವಿಮಾನಗಳನ್ನ ರದ್ದುಗೊಳಿಸಲಾಗಿದೆ. ಏರ್ ಇಂಡಿಯಾ ಯುಎಇ, ಸೌದಿ ಅರೇಬಿಯಾ, ಇಸ್ರೇಲ್ ಮತ್ತು ಕತಾರ್‌ಗೆ ಹೆಚ್ಚಿನ ವಿಮಾನಗಳನ್ನು ಸ್ಥಗಿತಗೊಳಿಸಿದೆ. ದರಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ಸಿಕ್ಕಿಬಿದ್ದ ಪ್ರಯಾಣಿಕರಿಗೆ ಸಹಾಯ ಮಾಡಲು ಸರ್ಕಾರ ಸೂಚನೆಗಳನ್ನು ನೀಡಿದೆ.





















error: Content is protected !!
Scroll to Top