ದೆಹಲಿ : ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಯ ಬಗ್ಗೆ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮೌನಕ್ಕೆ ಖಂಡನೆ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಇದು ತಟಸ್ಥ ನಿಲುವಲ್ಲ, ಬದಲಿಗೆ ಶರಣಾಗತಿಯಾಗಿದೆ. ಇದು ಭಾರತದ ವಿದೇಶಾಂಗ ನೀತಿಯ ವಿಶ್ವಾಸಾರ್ಹತೆ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎಂದು ಹೇಳಿದ್ದಾರೆ.
indianexpress ನಲ್ಲಿ ಪ್ರಕಟವಾದ ತಮ್ಮ ಲೇಖನದಲ್ಲಿ ಸೋನಿಯಾ ಗಾಂಧಿ, ಅಂತಾರಾಷ್ಟ್ರೀಯ ಶಾಂತಿ ಸುವ್ಯವಸ್ಥೆಯ ಕುಸಿತದಂತಹ ಗಂಭೀರ ವಿಷಯಗಳಲ್ಲಿ ಕೇಂದ್ರ ಸರಕಾರ ಮೌನವಾಗಿರುವುದು ಸರಿಯಲ್ಲ. ಸಂಸತ್ತಿನ ಬಜೆಟ್ ಅಧಿವೇಶನದ ಎರಡನೇ ಅವಧಿ ಆರಂಭವಾದಾಗ, ಈ ಕುರಿತು ಮುಕ್ತವಾಗಿ ಚರ್ಚೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಖಮೇನಿಯವರ ಸಾವಿನ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ಹೇಳಿಕೆ ನೀಡಿಲ್ಲ. ಆದರೆ, ಮಧ್ಯಪ್ರಾಚ್ಯ ಪ್ರದೇಶದಲ್ಲಿ ಸಂಯಮ ಮತ್ತು ಉದ್ವಿಗ್ನತೆಯನ್ನು ಕಡಿಮೆ ಮಾಡಲು ಕರೆ ನೀಡಿದೆ. ಮಾ.1 ರಂದು, ಇರಾನ್ ತನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಹೊಸೇನಿ ಖಮೇನಿ ಅವರನ್ನು ಅಮೆರಿಕ ಮತ್ತು ಇಸ್ರೇಲ್ ಹಿಂದಿನ ದಿನ ನಡೆಸಿದ ಗುರಿ ದಾಳಿಯಲ್ಲಿ ಹತ್ಯೆ ಮಾಡಲಾಗಿದೆ ಎಂದು ದೃಢಪಡಿಸಿತು. ನಡೆಯುತ್ತಿರುವ ಮಾತುಕತೆಗಳ ಮಧ್ಯೆ ಹಾಲಿ ರಾಷ್ಟ್ರದ ಮುಖ್ಯಸ್ಥರ ಹತ್ಯೆಯು ಸಮಕಾಲೀನ ಅಂತರರಾಷ್ಟ್ರೀಯ ಸಂಬಂಧಗಳಲ್ಲಿ ಗಂಭೀರ ಬಿರುಕು ಮೂಡಿಸುತ್ತದೆ ಎಂದ ಸೋನಿಯಾ ಗಾಂಧಿ ಭಾರತದ ಮೌನವು ಅಷ್ಟೇ ಸ್ಪಷ್ಟವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.




















