ರಾಜ್ಯದಲ್ಲಿ 16 ವರ್ಷದೊಳಗಿನವರಿಗೆ ಮೊಬೈಲ್‌ ನಿಷೇಧ – ಸಿಎಂ ಸಿದ್ದರಾಮಯ್ಯ

ಬೆಂಗಳೂರು : ರಾಜ್ಯದಲ್ಲಿ 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ವಿದ್ಯಾರ್ಥಿಗಳಲ್ಲಿ ಮೊಬೈಲ್ ಫೋನ್ ಬಳಕೆಯನ್ನು ನಿಷೇಧಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ. ಸಾಮಾಜಿಕ ಮಾಧ್ಯಮದ ಬಗ್ಗೆ ಹೆಚ್ಚುತ್ತಿರುವ ಗೀಳು ಮತ್ತು ಯುವ ಮನಸ್ಸುಗಳ ಮೇಲೆ ಅದರ ಪ್ರಭಾವವನ್ನು ಉಲ್ಲೇಖಿಸಿ ಸರ್ಕಾರ ಈ ಕುರಿತ ಕ್ರಮಕ್ಕೆ ಮುಂದಾಗಿದೆ. ಈ ಕುರಿತ ಪ್ರಸ್ತಾವನೆಯು ಚರ್ಚೆಯಲ್ಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಕ್ಯಾಂಪಸ್‌ಗಳಲ್ಲಿ ಅಪ್ರಾಪ್ತ ವಯಸ್ಕರು ಮೊಬೈಲ್ ಫೋನ್‌ಗಳ ಬಳಕೆಯನ್ನು ನಿಷೇಧಿಸಬೇಕೇ ಎಂಬ ಕುರಿತು ಸರ್ಕಾರಿ ಸ್ವಾಮ್ಯದ ವಿಶ್ವವಿದ್ಯಾಲಯಗಳ ಕುಲಪತಿಗಳಿಂದ ಅವರು ಪ್ರತಿಕ್ರಿಯೆ ಪಡೆದಿದ್ದಾರೆ.

ಕೊರೋನಾ ಕಾಲದಿಂದ ಆರಂಭವಾದ ಈ ಆನ್‌ಲೈನ್ ಟೀಚಿಂಗ್ ಪದ್ಧತಿ ವಿದ್ಯಾರ್ಥಿಗಳು ಮೊಬೈಲ್‌ಗೆ ಅಡಿಕ್ಟ್ ಆಗುವಂತೆ ಮಾಡಿದೆ. ಆದರೆ ಈಗ ಈ ಗೀಳಿನಿಂದ ವಿದ್ಯಾರ್ಥಿಗಳನ್ನು ಹೇಗೆ ಹೊರಗೆ ತರುವುದು ಎಂಬುದು ಗೊತ್ತಾಗುತ್ತಿಲ್ಲ. ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಮಾಧ್ಯಮದ ಬಗ್ಗೆ ಹೆಚ್ಚುತ್ತಿರುವ ಗೀಳಿನಿಂದ ನಡವಳಿಕೆ, ಶಿಕ್ಷಣದ ಫಲಿತಾಂಶಗಳು ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಮಾದಕ ದ್ರವ್ಯಗಳಿಗೆ ಒಡ್ಡಿಕೊಳ್ಳುವ ದುರ್ಬಲತೆಯನ್ನು ಹೆಚ್ಚಿಸುತ್ತದೆ. ಹೀಗಾಗಿ ರಾಜ್ಯದಲ್ಲಿ ವಿದ್ಯಾರ್ಥಿಗಳ ಮೊಬೈಲ್ ಬಳಕೆಗೆ ಕಡಿವಾಣ ಹಾಕುವ ಬಗ್ಗೆ ವಿಷಯ ಪ್ರಸ್ತಾಪವಾಗಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ಕೆಲವು ದೇಶಗಳಲ್ಲಿ ಶಾಲಾ ಮಕ್ಕಳಿಗೆ ಮೊಬೈಲ್ ನಿಷೇಧಿಸಲಾಗಿದೆ. ಆಸ್ಟ್ರೇಲಿಯಾದಲ್ಲಿ ಶಾಲಾ ಸಮಯದಲ್ಲಿ ಫೋನ್ ಬಳಕೆಗೆ ನಿಯಂತ್ರಣ ಹೇರಲಾಗಿದೆ. ಅದೇ ರೀತಿಯಲ್ಲಿ ರಾಜ್ಯದಲ್ಲಿ ಬ್ಯಾನ್ ಮಾಡುವ ಬಗ್ಗೆ ಸಲಹೆ ನೀಡಿ ಎಂದು ಕುಲಪತಿಗಳಿಂದ ಅಭಿಪ್ರಾಯವನ್ನು ಮುಖ್ಯಮಂತ್ರಿಗಳು ಕೇಳಿದ್ದಾರೆ. ಸಭೆಯಲ್ಲಿ ಭಾಗವಹಿಸಿದ್ದ ಕೆಲವು ವಿಶ್ವವಿದ್ಯಾಲಯಗಳ ಕುಲಪತಿಗಳು ಈ ಪ್ರಸ್ತಾಪಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

ಇತರ ರಾಜ್ಯಗಳಲ್ಲಿ ಇದೇ ರೀತಿಯ ಚರ್ಚೆಗಳ ನಡುವೆ ಕರ್ನಾಟಕವೂ ಇಂತಹ ನಿರ್ಧಾರಕ್ಕೆ ಮುಂದಾಗಿದೆ. ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ಮತ್ತು ಎಕ್ಸ್‌ನಂತಹ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳನ್ನು ಪ್ರವೇಶಿಸದಂತೆ 16 ವರ್ಷದೊಳಗಿನ ಮಕ್ಕಳನ್ನು ನಿರ್ಬಂಧಿಸುವ ಪ್ರಸ್ತಾಪವನ್ನು ಗೋವಾ ಸರ್ಕಾರ ಪರಿಶೀಲಿಸುತ್ತಿದೆ ಎಂದು ವರದಿಯಾಗಿದೆ. ಆಂಧ್ರಪ್ರದೇಶದಲ್ಲಿ ಅಪ್ರಾಪ್ತ ಮಕ್ಕಳ ಸಾಮಾಜಿಕ ಮಾಧ್ಯಮ ಬಳಕೆ ಮೇಲೆ ಕಠಿಣ ನಿರ್ಬಂಧ ಹೇರಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಶಿಕ್ಷಣ ಸಚಿವ ನಾರಾ ಲೋಕೇಶ್ ತಿಳಿಸಿದ್ದಾರೆ.









































































































error: Content is protected !!
Scroll to Top