ಕುಂದಾಪುರ : ಶೆಟ್ರಕಟ್ಟೆಯಲ್ಲಿ ಟಿಪ್ಪರ್ ಲಾರಿ ಮತ್ತು ಸರ್ಕಾರಿ ಬಸ್ ನಡುವೆ ಡಿಕ್ಕಿ ಸಂಭವಿಸಿ 14ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿರುವ ಭೀಕರ ಅಪಘಾತ ಪ್ರಕರಣ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರು ನಿರ್ಣಾಯಕ ಕ್ರಮ ಕೈಗೊಂಡಿದ್ದು, ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ನಾಸೀರ್ ಹುಸೇನ್ ಅವರನ್ನು ಅಜೆಕಾರು ಪೊಲೀಸ್ ಠಾಣೆಗೆ ಅನ್ಯ ಕರ್ತವ್ಯದ ಮೇಲೆ ನಿಯೋಜಿಸಲಾಗಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಠಾಣೆಯ ಬೀಟ್ ಪೊಲೀಸ್ ಯಾದವ್ ಅವರನ್ನು ಅಮಾನತುಗೊಳಿಸಲಾಗಿದೆ. ಗ್ರಾಮಾಂತರ ಠಾಣೆಯ ಕಾನೂನು ಸುವ್ಯವಸ್ಥೆ ವಿಭಾಗದ ಜವಾಬ್ದಾರಿಯನ್ನು ಶಂಕರನಾರಾಯಣದ ಕುಂದಾಪುರ ಗ್ರಾಮಾಂತರ ವೃತ್ತದ ಸಿಪಿಐ ಸಂತೋಷ್ ಕಾಯ್ಕಿಣಿ ಅವರಿಗೆ ಹೆಚ್ಚುವರಿಯಾಗಿ ನೀಡಲಾಗಿದೆ. ಈ ಬಗ್ಗೆ ಎಸ್‌ಪಿ ಹರಿರಾಮ್ ಶಂಕರ್ ಮಾಧ್ಯಮದವರಿಗೆ ಮಾಹಿತಿ ನೀಡಿದ್ದಾರೆ.
ಸೋಮವಾರ ಸಂಜೆ ಗುಲ್ವಾಡಿ ಗ್ರಾಮದ ಶೆಟ್ರಕಟ್ಟೆ ಎಂಬಲ್ಲಿ ಕೇರಳ ನೋಂದಣಿಯ ಟಿಪ್ಪರ್ ಲಾರಿ (ಕೆಎಲ್-27 ಎ 7100) ಕುಂದಾಪುರದಿಂದ ಅಜ್ರಿಗೆ ತೆರಳುತ್ತಿದ್ದ ಸರ್ಕಾರಿ ಬಸ್‌ಗೆ ಮುಖಾಮುಖಿ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು. ಲಾರಿ ಚಾಲಕನ ನಿರ್ಲಕ್ಷ್ಯ, ಅಕ್ರಮ ಮಣ್ಣು ಸಾಗಣೆ ಮತ್ತು ಟಿಪ್ಪರ್ ಲಾರಿಯ ದಾಖಲೆಯ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಭವಿಷ್ಯದಲ್ಲಿ ಸಂಭವಿಸಬಹುದಾದ ದುರಂತಗಳನ್ನು ತಡೆಯಲು ಟಿಪ್ಪರ್ ಟ್ರಕ್‌ಗಳಲ್ಲಿ ಸ್ಪೀಡ್ ಗವರ್ನರ್‌ಗಳನ್ನು ಕಡ್ಡಾಯವಾಗಿ ಅಳವಡಿಸಬೇಕೆಂಬ ಆಗ್ರಹಗಳು ಕೇಳಿ ಬಂದಿದ್ದವು. ದುರಂತ ನಡೆದ ಕೆಲವೇ ನಿಮಿಷಗಳಲ್ಲಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಗಂಭೀರ ಸ್ಥಿತಿಯನ್ನು ನೋಡಿಕೊಂಡು ಬಂದಿದ್ದ ಎಸ್ಪಿ ಹರಿರಾಮ್ ಶಂಕರ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವುದಾಗಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದರು.

ಪ್ರಕರಣದ ಪ್ರಮುಖ ಆರೋಪಿ ಟಿಪ್ಪರ್ ಚಾಲಕ ಬಿಡ್ಕಲ್ ಕಟ್ಟೆ ನಿವಾಸಿ ರಾಘವೇಂದ್ರ ಸದ್ಯ ಕುಂದಾಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಪೊಲೀಸ್ ಇಲಾಖೆ ಆತನ ಮೇಲೆ ನಿಗಾ ಇರಿಸಿದೆ. ಮಣ್ಣು ಸಾಗಾಟ ಗುತ್ತಿಗೆದಾರ ಬಳ್ಳೂರಿನ ಶ್ರೀಧರ್ ಅವರನ್ನು ಮಂಗಳವಾರ ಬಂಧಿಸಿ ನ್ಯಾಯಾಲಕ್ಕೆ ಹಾಜರುಪಡಿಸಲಾಗಿದ್ದು, ಆತ ನ್ಯಾಯಾಂಗ ಬಂಧನದಲ್ಲಿದ್ದಾನೆ. ಟಿಪ್ಪರ್ ಮಾಲಕಿ ಸುಮಾ ಅವರ ಮೇಲೂ ಪ್ರಕರಣ ದಾಖಲಾಗಿದೆ.
ಕುಂದಾಪುರ ಪೊಲೀಸ್ ಉಪವಿಭಾಗ ವ್ಯಾಪ್ತಿಯ ಅಮಾಸೆಬೈಲು, ಬೈಂದೂರು, ಕುಂದಾಪುರ, ಕೊಲ್ಲೂರು, ಶಂಕರನಾರಾಯಣ ಮುಂತಾದ ಕಡೆಯಲ್ಲಿ ಠಾಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ಎಸ್‌ಐ ನಾಸಿರ್ ಹುಸೇನ್ ಇತ್ತೀಚೆಗಷ್ಟೇ ಕಂಡೂರಿನ ಗ್ರಾಮಾಂತರ ಪೊಲೀಸ್ ಠಾಣೆಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಉಪನಿರೀಕ್ಷಕರಾಗಿ ಅಧಿಕಾರ ಸ್ವೀಕರಿಸಿದ್ದರು. ಅವರ ಕಾರ್ಯ ಶೈಲಿಯ ಬಗ್ಗೆ ಸಾರ್ವಜನಿಕ ಮೆಚ್ಚುಗೆಯೂ ವ್ಯಕ್ತವಾಗಿತ್ತು. ಇದೀಗ ಅವರ ಹಠಾತ್ ವರ್ಗಾವಣೆ ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾಗಿದೆ.























































































