ಸಭ್ಯತೆಯ ಎಲ್ಲೆ ಮೀರುತ್ತಿರುವ ಉದಯ ಕುಮಾರ್ ಶೆಟ್ಟಿ –‌ ನವೀನ್‌ ನಾಯಕ್ ವಿಷಾದ

ಕಾರ್ಕಳ : ಕಾರ್ಕಳ ವಿಧಾನಸಭಾ ಕ್ಷೇತ್ರವನ್ನು ರಾಜ್ಯದ ಶ್ರೇಷ್ಠ ಪ್ರವಾಸಿ ತಾಣವನ್ನಾಗಿ ಬೆಳೆಸಬೇಕೆಂಬ ದೃಷ್ಟಿಯಲ್ಲಿ ಶಾಸಕ ವಿ. ಸುನಿಲ್ ಕುಮಾರ್ ಅವರು ಬೈಲೂರಿನ ಉಮಿಕಲ್ ಬೆಟ್ಟದಲ್ಲಿ ನಿರ್ಮಾಣ ಮಾಡಿರುವ ಮಹತ್ವಾಕಾಂಕ್ಷಿ ಯೋಜನೆ ಪರಶುರಾಮ ಥೀಮ್ ಪಾರ್ಕ್ ಇಂದು ಕಾರ್ಕಳದ ಕಾಂಗ್ರೆಸ್ ಮುಖಂಡ ಉದಯ್ ಕುಮಾರ್ ಶೆಟ್ಟಿ ಅವರ ದ್ವೇಷ ಹಾಗೂ ಮತ್ಸರದ ರಾಜಕಾರಣದಿಂದಾಗಿ ಪಾಳು ಬೀಳುವಂತಾಗಿದೆ ಎಂದು ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್‌ ನಾಯಕ್‌ ವಿಷಾದ ವ್ಯಕ್ತಪಡಿಸಿದ್ದಾರೆ.

ದಿನನಿತ್ಯ ಪ್ರವಾಸಿಗರಿಂದ ತುಂಬಿ ತುಳುಕಬೇಕಾಗಿದ್ದ ಪರಶುರಾಮ ಥೀಮ್ ಪಾರ್ಕ್ ಇಂದು ಕಳ್ಳತನ, ಅನೈತಿಕ ಚಟುವಟಿಕೆಗಳು ನಡೆಯುವಂತಹ ಭೀತಿಯ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತೀಚೆಗೆ ಯಾರೋ ಕಿಡಿಗೇಡಿಗಳು ಪರಶುರಾಮ ಥೀಮ್ ಪಾರ್ಕ್ ಕಟ್ಟಡದ ಬೀಗ ಒಡೆದು ಮೇಲ್ಚಾವಣಿಯ ತಾಮ್ರದ ಹೊದಿಕೆಯನ್ನು ಕದ್ದೊಯುವ ಪರಿಸ್ಥಿತಿಗೆ ಬಂದಿದೆ ಇದಕ್ಕೆ ನೇರ ಹೊಣೆ ಉದಯ ಕುಮಾರ್ ಶೆಟ್ಟಿ ಎಂದು ನವೀನ್‌ ಆರೋಪಿಸಿದರು.

ಖೇದಕರ
ಥೀಮ್ ಪಾರ್ಕಿನಲ್ಲಿ ಕಳ್ಳತನವಾಗಿರುವ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಶಾಸಕರ ಬಗ್ಗೆ ಟೀಕೆ ಮಾಡುವ ಭರದಲ್ಲಿ ಉದಯ ಕುಮಾರ್ ಶೆಟ್ಟಿ ಅವರು ಶಾಸಕರ ಬಗ್ಗೆ ತೀರ ಕೆಟ್ಟ ಪದ ಬಳಕೆ ಮಾಡಿರುವುದು ಖೇದಕರ. ನಾಲ್ಕು ಬಾರಿ ಶಾಸಕರಾಗಿ ಒಂದು ಬಾರಿ ಸಚಿವರಾಗಿದ್ದು ಗೌರವಾನ್ವಿತ ಕುಟುಂಬದಿಂದ ಬಂದಿರುವ ಶಾಸಕರ ಬಗ್ಗೆ ನೀಚ ಎಂಬ ಪದ ಬಳಕೆ ಮಾಡಿರುವುದು ಅವರ ನಡವಳಿಕೆಯನ್ನು ಎತ್ತಿ ತೋರಿಸುತ್ತದೆ. ರಾಜಕಾರಣದ ಸಭ್ಯತೆಯನ್ನು ಮೀರುವ ಮೂಲಕ ಇಷ್ಟರವರೆಗೆ ಕಾರ್ಕಳದಲ್ಲಿ ನಡೆದುಕೊಂಡು ಬಂದಿರುವ ಸಂಸ್ಕಾರವನ್ನು ಹಾಳು ಮಾಡಿದ ಕೀರ್ತಿ ಉದಯ ಶೆಟ್ಟಿಯವರಿಗೆ ಸಲ್ಲುತ್ತದೆ ಎಂದು ತಿಳಿಸಿದರು.

ಯಾರು ಶಾಶ್ವತವಲ್ಲ
ಉದಯ ಕುಮಾರ್ ಶೆಟ್ಟಿ ಅವರೇ ರಾಜಕೀಯದಲ್ಲಿ ಯಾರು ಶಾಶ್ವತವಲ್ಲ, ನೀವು ಮಾಡಿರುವ ತಪ್ಪು ನಿಮಗೆ ಅರಿವಾಗಿದೆ. ಇದರಿಂದ ನೀವು ಹತಾಶರಾಗಿ ಏನೇನೋ ಮಾತನಾಡಬೇಡಿ. ನಿಮ್ಮ ತಪ್ಪಿಗೆ ಪ್ರಾಯಶ್ಚಿತ ಆಗಬೇಕಾದರೆ ಕಾರ್ಕಳ ಭಾರತೀಯ ಜನತಾ ಪಾರ್ಟಿ ಯಾವಾಗಲೂ ಆಗ್ರಹಿಸುವಂತೆ ಪರಶುರಾಮ ಥೀಮ್ ಪಾರ್ಕಿಗೆ ಬಿಡುಗಡೆಗೊಳಿಸಲು ಬಾಕಿ ಇರುವ ಅನುದಾನವನ್ನು ಬಿಡುಗಡೆಗೊಳಿಸಿ ಕಾಮಗಾರಿ ಪೂರ್ಣಗೊಳ್ಳಲು ಹಾಗೂ ಸಾರ್ವಜನಿಕರಿಗೆ ಭೇಟಿಗೆ ಮುಕ್ತಗೊಳಿಸಿ. ಇಷ್ಟು ಮಾಡಿದರೆ ನೀವು ಎರಡೂವರೆ ವರ್ಷಗಳಿಂದ ಮಾಡುತ್ತಾ ಬಂದಿರುವ ಪಾಪಕ್ಕೆ, ದುಡಿಯುವ ಬಿಜೆಪಿ ಕಾರ್ಯಕರ್ತರಿಗೆ ಮಾಡಿದ ಅನ್ಯಾಯಕ್ಕೆ ಪ್ರಾಯಶ್ಚಿತ ಸಿಗಬಹುದು. ಇಲ್ಲದಿದ್ದರೆ ನೀವು ಇದೇ ರೀತಿ ಪದೇ ಪದೆ ಮಾನಸಿಕವಾಗಿ ವಿಚಲಿತರಾದಂತೆ ವರ್ತಿಸಬಹುದು ಮತ್ತೆ ಅದಕ್ಕೂ ಸುನಿಲ್ ಕುಮಾರ್ ಕಾರಣ ಎಂದು ದೂರಬೇಡಿ ಎಂದು ನವೀನ್‌ ನಾಯಕ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.















































































































































































error: Content is protected !!
Scroll to Top