ಪುರಸಭಾ ಸದಸ್ಯರಾಗಿ 18 ವರ್ಷ ಕಾರ್ಯನಿರ್ವಹಿಸಿದ ಶುಭದ್‌ ರಾವ್‌ ಅವರಿಂದ ಸಾರ್ವಜನಿಕರಿಗೆ ಕೃತಜ್ಞತೆ

ಕಾರ್ಕಳ : ನಗರಾಡಳಿತ ವ್ಯವಸ್ಥೆಯಲ್ಲಿ ಪೌರಕಾರ್ಮಿಕರ ಸೇವೆಯನ್ನು ಕಡೆಗಣಿಸುವ ಹಾಗೇ ಇಲ್ಲ. ಆದರೆ ಅವರ ಸೇವೆಗೆ ಸಿಗಬೇಕಾದ ಮಾನ್ಯತೆಯು ಹೆಚ್ಚಿನ ಕಡೆಗಳಲ್ಲಿ ದೊರೆಯುವುದಿಲ್ಲ. ಅವರನ್ನು ಸನ್ಮಾನಿಸುವುದು ಅತ್ಯಂತ ಪವಿತ್ರವಾದ ಕಾರ್ಯ ಎಂದು ಕರ್ನಾಟಕ ವಿಧಾನ ಪರಿಷತ್ ಸದಸ್ಯ, ಮಂಗಳೂರಿನ ಸಹ್ಯಾದ್ರಿ ಕಾಲೇಜಿನ ಸ್ಥಾಪಕರೂ ಆದ ಡಾ. ಮಂಜುನಾಥ್ ಭಂಡಾರಿ ಅವರು ಅಭಿಪ್ರಾಯಪಟ್ಟರು.

ಅವರು ಕಾರ್ಕಳದ ಪುರಸಭೆಯ ಸದಸ್ಯ ಶುಭದ್ ರಾವ್ ಅವರು ತಮ್ಮ ಪುರಸಭೆಯ ಸದಸ್ಯತ್ವದ ಮೂರು ಅವಧಿಯನ್ನು ಪೂರ್ತಿ ಮಾಡಿದ (ಸತತ 18 ವರ್ಷ) ಸಲುವಾಗಿ ಏರ್ಪಡಿಸಿದ ಸಾರ್ವಜನಿಕರಿಗೆ ಕೃತಜ್ಞತಾ ಸಮರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಕಾರ್ಕಳ ಪುರಸಭೆಯ ಎಲ್ಲಾ 48 ಪೌರ ಕಾರ್ಮಿಕರು, ಪೌರ ನೌಕರರು, ಹಾಗೂ‌ ಪುರಸಭೆಯ ಮಾಜಿ ಅಧ್ಯಕ್ಷರು, ಸದಸ್ಯರನ್ನು ಒಂದೇ ವೇದಿಕೆಯಲ್ಲಿ ಸನ್ಮಾನಿಸಿದ್ದು ಅತ್ಯಂತ ಸ್ಮರಣೀಯವಾದ ಕಾರ್ಯ ಎಂದ ಅವರು ರಾಜಕೀಯ ನೇತಾರರಿಗೆ ನಿವೃತ್ತಿ ಎಂಬುದಿಲ್ಲ. ಸಹಾಯ ಕೇಳಿಬಂದ ಎಲ್ಲ ಪಕ್ಷದವರ ಕೆಲಸವನ್ನು ಮಾಡಿಕೊಡುವ ರಾಜಕೀಯ ನಾಯಕರು ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುತ್ತಾರೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ರಾಜ್ಯದ ಹಿಂದುಳಿದ ವರ್ಗದ ಆಯೋಗದ ಮಾಜಿ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಮಾತಾನಾಡಿ, 18 ವರ್ಷ ಪುರಸಭೆಯ ಸದಸ್ಯರಾಗಿ ಶುಭದ್ ಅವರು ಪಕ್ಷಾತೀತವಾಗಿ ಮಾಡಿದ ಸೇವೆಯು ಒಂದು ಅತ್ಯುತ್ತಮ ಮಾದರಿ ಎಂದರು.

ಸನ್ಮಾನ
ಕಾರ್ಯಕ್ರಮದಲ್ಲಿ 18 ವರ್ಷಗಳ ಅವಧಿಯಲ್ಲಿ ಕಾರ್ಕಳ ಪುರಸಭೆಯ ಅಧ್ಯಕ್ಷರಾಗಿ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸಿದ, ಮೂರು ಅವಧಿಯ ಎಲ್ಲ ಪುರಸಭೆಯ ಸದಸ್ಯರನ್ನು, ಎಲ್ಲಾ ಖಾಯಂ ಮತ್ತು ತಾತ್ಕಾಲಿಕ ನೌಕರರನ್ನು ಹಾಗೂ ಭಾರತದ ಅಂಡರ್ 15 ವಾಲಿಬಾಲ್ ತಂಡದ ಕ್ಯಾಪ್ಟನ್ ಆಗಿ ಚೀನಾದಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್ ಪಂದ್ಯದಲ್ಲಿ ಅತ್ಯುತ್ತಮವಾಗಿ ಆಡಿದ ಕಾರ್ಕಳ ಕ್ರೈಸ್ಟ್ ಕಿಂಗ್ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ಶಗುನ್ ವರ್ಮಾ ಎಸ್. ಹೆಗ್ಡೆ ಅವರನ್ನು ಸನ್ಮಾನಿಸಲಾಯಿತು.

ಕಾರ್ಕಳ ಕಾಂಗ್ರೆಸ್ ನಾಯಕ ಮುನಿಯಾಲು ಉದಯಕುಮಾರ್ ಶೆಟ್ಟಿ ಮಾತನಾಡಿ, ಪುರಸಭಾ ಸದಸ್ಯರಾಗಿ ಶುಭದ್ ರಾವ್ ಅವರು ಅತ್ಯುತ್ತಮ ಸೇವೆಯನ್ನು ಸಲ್ಲಿಸಿದ್ದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿಯೂ ಪಕ್ಷವನ್ನು ಬೆಳೆಸುತ್ತಿದ್ದಾರೆ. ಅವರ ಕಾರ್ಯವೈಖರಿ ಹೀಗೆ ಮುಂದುವರಿಯಲಿ ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಭುವನೇಂದ್ರ ಕಾಲೇಜಿನ ಪ್ರಾಚಾರ್ಯರಾದ ಡಾ. ಮಂಜುನಾಥ್ ಕೋಟ್ಯಾನ್, ಕೊಲ್ಲೂರು ದೇವಸ್ಥಾನದ ಟ್ರಸ್ಟೀ ಸುರೇಂದ್ರ ಶೆಟ್ಟಿ ಮತ್ತು ಕಾರ್ಕಳ ಜ್ಞಾನಸುಧಾ ಕಾಲೇಜಿನ ಸ್ಥಾಪಕರಾದ ಡಾ.ಸುಧಾಕರ್ ಶೆಟ್ಟಿಯವರು ಸಂದರ್ಭೊಚಿತವಾಗಿ ಮಾತನಾಡಿದರು. ಪುರಸಭೆಯ ಸದಸ್ಯರ ಪರವಾಗಿ ಅಷ್ಪಾಕ್ ಅಹಮದ್ ಮಾತನಾಡಿ ಶುಭಶಂಸನೆಗೈದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಶುಭದ ರಾವ್‌, ಇದು ನನ್ನ ಅಭಿನಂದನಾ ಕಾರ್ಯಕ್ರಮವಲ್ಲ. ಅಹಂಕಾರದ ಪ್ರದರ್ಶನವೂ ಅಲ್ಲ. ನನಗೆ ಮೂರು ಪೂರ್ಣ ಅವಧಿಗೆ ಪುರಸಭೆಯ ಸದಸ್ಯನಾಗಿ ದುಡಿಯಲು ಆಶೀರ್ವಾದ ಮಾಡಿದ ಎಲ್ಲ ನಾಗರಿಕರಿಗೆ ಪಕ್ಷಾತೀತವಾಗಿ ಕೃತಜ್ಞತೆ ಅರ್ಪಿಸಲು ಈ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು. ಎಸ್‌ವಿಟಿ ಕಾಲೇಜಿನ ನಿವೃತ್ತ ಪ್ರಾಚಾರ್ಯರಾದ ಮಿತ್ರಪ್ರಭಾ ಹೆಗ್ಡೆ, ಉದ್ಯಮಿ ಜಾನ್ ಡಿಸಿಲ್ವ, ಕಾಳಿಕಾಂಬಾ ದೇವಸ್ಥಾನದ ಧರ್ಮದರ್ಶಿ ಶಿಲ್ಪಿ ರಾಮಚಂದ್ರ ಆಚಾರ್ಯ, ಶುಭದ್ ಅವರ ಪತ್ನಿ ದಿವ್ಯಾ ರಾವ್, ಸಿವಿಲ್ ಇಂಜಿನಿಯರ್ ನವೀನ್ ರಾವ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಾಜೇಂದ್ರ ಭಟ್ ಕೆ. ಅವರು ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.









































































































error: Content is protected !!
Scroll to Top