ಸರಕಾರಿ ಸ್ಥಳಗಳಲ್ಲಿ ಖಾಸಗಿ ಸಂಘ ಸಂಸ್ಥೆಗಳ ಕಾರ್ಯಕ್ರಮಕ್ಕೆ ಅನುಮತಿ ಕಡ್ಡಾಯ ವಿಚಾರ – ತಡೆಯಾಜ್ಞೆ ಪ್ರಶ್ನಿಸಿದ್ದ ಸರ್ಕಾರದ ಅರ್ಜಿ ವಜಾ

ಬೆಂಗಳೂರು : ಆರ್​​ಎಸ್​ಎಸ್ ಚಟುವಟಿಕೆಗಳಿಗೆ ಪರೋಕ್ಷವಾಗಿ ನಿಷೇಧ ಹೇರುವ ಹಿನ್ನೆಲೆಯಲ್ಲಿ ಸರಕಾರ ಹೊರಡಿಸಿದ್ದ ಸರ್ಕಾರಿ ಸ್ಥಳಗಳಲ್ಲಿ ಖಾಸಗಿ ಸಂಸ್ಥೆಗಳ ಕಾರ್ಯಕ್ರಮಗಳಿಗೆ ನಿರ್ಬಂಧ ಹಾಗೂ ಅನುಮತಿ ಕಡ್ಡಾಯ ವಿಚಾರಕ್ಕೆ ಸಂಬಂಧಪಟ್ಟಂತಹ ಆದೇಶಕ್ಕೆ ಕರ್ನಾಟಕ ಹೈಕೋರ್ಟ್‌ ಪೀಠ ತಡೆಯಾಜ್ಞೆ ನೀಡಿತ್ತು. ಇದೀಗ, ಆ ತಡೆಯಾಜ್ಞೆಯ ತೆರವು ಕೋರಿ ಸರಕಾರ ಸಲ್ಲಿಸಿದ್ದ ಅರ್ಜಿಯನ್ನೂ ಹೈಕೋರ್ಟ್‌ ತಳ್ಳಿಹಾಕಿದೆ.

ಸರ್ಕಾರದ ಸುತ್ತೋಲೆಗೆ ತಡೆ ನೀಡಿದ್ದ ಏಕ ಸದಸ್ಯ ಪೀಠದ ಆದೇಶ ತೆರವುಗೊಳಿಸುವಂತೆ ಕೋರಿ ದ್ವಿಸದಸ್ಯ ಪೀಠಕ್ಕೆ ಸರ್ಕಾರ ಮೇಲ್ಮನವಿ ಸಲ್ಲಿಸಲಾಗಿತ್ತು. ನ್ಯಾಯಮೂರ್ತಿ ಎಸ್. ಜಿ. ಪಂಡಿತ್ ಮತ್ತು ಗೀತಾ ಕೆ. ಬಿ ಅವರಿದ್ದ ದ್ವಿಸದಸ್ಯ ಪೀಠ ವಿಚಾರಣೆ ನಡೆಸಿ ಅರ್ಜಿ ವಜಾಗೊಳಿಸಿ ಆದೇಶಿಸಿದೆ.

ಸರ್ಕಾರ ಅರ್ಜಿಯನ್ನು ಹೈಕೋರ್ಟ್ ದ್ವಿಸದಸ್ಯ ಪೀಠ ವಜಾ ಮಾಡಿದೆ. ಜೊತೆಗೆ ಸಾರ್ವಜನಿಕ ಸ್ಥಳಗಳಲ್ಲಿ ಅನುಮತಿ ಕಡ್ಡಾಯಕ್ಕೆ ತಡೆಯಾಜ್ಞೆ ನೀಡಿದ್ದ ಆದೇಶ ತೆರವುಗೊಳಿಸುವ ಬಗ್ಗೆ ಮತ್ತೆ ಏಕಸದಸ್ಯ ಪೀಠಕ್ಕೆ ಅರ್ಜಿ ಸಲ್ಲಿಸಿ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ ಎಂದು ಸಾರ್ವಜನಿಕ ಅರ್ಜಿದಾರರ ಪರ ವಕೀಲ ಮಲ್ಲಿಕಾರ್ಜುನ ಹಿರೇಮಠ ತಿಳಿಸಿದ್ದಾರೆ.

ಸರ್ಕಾರದ ಜಾಗವನ್ನು ನಾವು ರಕ್ಷಣೆ ಮಾಡ್ತೀವಿ ಎನ್ನುವ ಕಾರಣಕ್ಕೆ ಅನುಮತಿ ಕಡ್ಡಾಯ ಮಾಡುವುದನ್ನು ಒಪ್ಪಿಕೊಳ್ಳಲ್ಲ ಎಂದು ಕೋರ್ಟ್ ತಿಳಿಸಿದೆ. ಇದರಿಂದ ಸರ್ಕಾರ ಮತ್ತೊಮ್ಮೆ ಏಕಸದಸ್ಯ ಪೀಠ ಹಾಗೂ ಸುಪ್ರೀಂಗೆ ಅರ್ಜಿ ಹಾಕಬಹುದು. ನ.17 ರಂದು ಏಕಸದಸ್ಯ ಪೀಠ ವಿಚಾರಣೆ ನಡೆಸಲಿದೆ ಎಂದು ವಕೀಲ ಹಿರೇಮಠ ಮಾಹಿತಿ ನೀಡಿದ್ದಾರೆ.

ಮೇಲ್ಮವಿಗೆ ಸಂಬಂಧಿಸಿದಂತೆ ಈ ಹಿಂದೆ ನಡೆದ ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು, ಅರ್ಜಿ ಸಲ್ಲಿಸಿದವರ ಪೈಕಿ ಇಬ್ಬರು ಸಂಸ್ಥೆಗಳನ್ನು ಹೊಂದಿದ್ದಾರೆ. ಅವರು ಸಾರ್ವಜನಿಕ ಸ್ಥಳದಲ್ಲಿ ಕಾರ್ಯಕ್ರಮ ಮಾಡುತ್ತಾರೆ. ಸಾರ್ವಜನಿಕ ಸ್ಥಳದಲ್ಲಿ ಅನುಮತಿ ಇಲ್ಲದೇ ಕಾರ್ಯಕ್ರಮ ಮಾಡಿದರೆ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಸರ್ಕಾರ ಆದೇಶ ಮಾಡಿದೆ. ಇದರಲ್ಲಿ ಯಾವುದೇ ದುರುದ್ದೇಶವಿಲ್ಲ. ಹೀಗಾಗಿ ತಡೆಯಾಜ್ಞೆಯನ್ನು ತೆರವುಗೊಳಿಸಬೇಕೆಂದು ಪೀಠಕ್ಕೆ ಮನವಿ ಮಾಡಿದ್ದರು. ಈ ವೇಳೆ ಪೀಠ, 10 ಜನರು ಸೇರಿದರೆ ಅನುಮತಿ ಬೇಕಾ? ಅದರ ಅವಶ್ಯಕತೆ ಇದೆಯಾ? ಯಾರೋ ಕೆಲವರು ಪಾರ್ಕ್​​ಗಳಲ್ಲಿ ಜೊತೆಯಾಗಿ ಹೋಗುತ್ತಾರೆ. ಅದಕ್ಕೂ ಕೂಡ ಅನುಮತಿ ಬೇಕಾ? ಎಂದು ಸರ್ಕಾರದ ಪರ ವಕೀಲರಿಗೆ ಪ್ರಶ್ನಿಸಿತ್ತು.

ಇದಕ್ಕೆ ವಕೀಲರು, ಸರ್ಕಾರಿ ರಸ್ತೆ ಇರುವುದು ಸಾರ್ವಜನಿಕರ ಓಡಾಟಕ್ಕೆ. ಹೀಗಾಗಿ ಅದು ಸಾರ್ವಜನಿಕರಿಗೆ ಉಪಯೋಗವಾಗಬೇಕು. ಖಾಸಗಿಯವರು ಕಾರ್ಯಕ್ರಮ ಮಾಡಲು ಬೇರೆ ಕಡೆ ಸ್ಥಳ ಬಾಡಿಗೆ ಪಡೆದು ಕಾರ್ಯಕ್ರಮ ಮಾಡಬಹುದು. ಸಾರ್ವಜನಿಕ ಆಸ್ತಿಗಳನ್ನು ಕಾಪಾಡಿಕೊಳ್ಳುವ ದೃಷ್ಟಿಯಿಂದ ಈ ಆದೇಶ ಮಾಡಲಾಗಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಇದನ್ನು ಮಾಡಲಾಗಿದೆ. ಇದರಲ್ಲಿ ಕಾಯ್ದೆ 19ಎ ಉಲ್ಲಂಘನೆಯಾಗಲ್ಲ ಎಂದು ಪೀಠಕ್ಕೆ ಹೇಳಿದ್ದರು. ಇನ್ನು ಸರ್ಕಾರಿ ವಕೀಲರ ವಾದಕ್ಕೆ ಪ್ರತಿವಾದ ಮಂಡಿಸಿದ ಅರ್ಜಿದಾರರ ಪರ ವಕೀಲರು, ಸರ್ಕಾರದ ಆದೇಶ ಸರಿಯಲ್ಲ. ಇದು ಸಂವಿಧಾನ ಬಾಹಿರವಾಗಲಿದೆ. ಸರ್ಕಾರಿ ಜಾಗ ಇರುವುದೇ ಸಾರ್ವಜನಿಕರ ಬಳಕೆಗಾಗಿಯಾಗಿದೆ. ಇದು ಸಾರ್ವಜನಿಕರ ಹಕ್ಕಿನ ಉಲ್ಲಂಘನೆಯಾಗುತ್ತದೆ. ಪಾರ್ಕುಗಳು ಸ್ಥಳೀಯ ಸಂಸ್ಥೆಗಳ ಒಡೆತನದಲ್ಲಿ ಇರುತ್ತವೆ. ಅವುಗಳಿಗೆ ನಿರ್ಬಂಧ ಹೇರುವುದು ಸಾರ್ವಜನಿಕರ ಹಕ್ಕಿನ ಉಲ್ಲಂಘನೆಯಾಗುತ್ತದೆ ಎಂದು ವಾದ ಮಂಡಿಸಿದರು.

ಏನಿದು ಪ್ರಕರಣ?
ಸರ್ಕಾರದ ಅನುಮತಿ ಪಡೆಯದೇ ನೋಂದಣಿಯಾಗಿರುವ ಅಥವಾ ನೋಂದಣಿಯಾಗದ ಸಂಘ, ಸಂಸ್ಥೆಗಳು, ಖಾಸಗಿ ಸಂಸ್ಥೆಗಳು, ಗುಂಪುಗಳು ಸರ್ಕಾರದ ಸ್ಥಳಗಳಾದ ರಸ್ತೆಗಳು, ಉದ್ಯಾನವನಗಳು, ಆಟದ ಮೈದಾನಗಳು ಅಥವಾ ಕಟ್ಟಡಗಳನ್ನು ಬಳಕೆ ಮಾಡುವುದನ್ನು ಅಕ್ರಮ ಕೂಟ ಎಂದು ಪರಿಗಣಿಸಲಾಗುವುದು ಎಂಬುದಾಗಿ 2025ರ ಅಕ್ಟೋಬರ್ 18ರಂದು ರಾಜ್ಯ ಸರ್ಕಾರದ ಗೃಹ ಇಲಾಖೆಯ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದರು.

ಈ ಆದೇಶ ರದ್ದು ಕೋರಿ ಹುಬ್ಬಳ್ಳಿಯ ಪುನಶ್ಚೇತನ ಸೇವಾ ಟ್ರಸ್ಟ್, ವಿ-ಕೇರ್ ಫೌಂಡೇಷನ್ ಸೇರಿ ನಾಲ್ವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಧಾರವಾಡ ಏಕ ಸದಸ್ಯ ಪೀಠವು, ಸರ್ಕಾರದ ಆದೇಶಕ್ಕೆ ತಡೆಯಾಜ್ಞೆ ನೀಡಿತ್ತು. ಇದನ್ನು ಪ್ರಶ್ನಿಸಿ ಸರ್ಕಾರವು ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಅರ್ಜಿ ಸಲ್ಲಿಸಿತ್ತು.









































































































error: Content is protected !!
Scroll to Top