ಕಾರ್ಕಳ : ಯಶಸ್ಸಿನ ಕೀಲಿ ಕೈಯನ್ನು ಎಲ್ಲೆಲ್ಲಿ ಹುಡುಕಬೇಕಿಲ್ಲ. ನಮ್ಮ ಉತ್ತಮ ಭವಿಷ್ಯ ರೂಪಿಸುವ ಎಲ್ಲಾ ಅವಕಾಶಗಳು ಕೂಡ ನಮ್ಮದೇ ಕೈಯಲ್ಲೇ ಇದೆ. ಆದರೆ ಆ ಅವಕಾಶಗಳನ್ನು ಹೇಗೆ ಸದುಪಯೋಗಪಡಿಸಿಕೊಳ್ಳಬೇಕೆಂಬ ವಿವೇಚನೆ ನಮ್ಮಲ್ಲಿರಬೇಕು ಎಂದು ಖ್ಯಾತ ವಾಗ್ಮಿ ಅಕ್ಷಯ ಗೋಖಲೆ ಹೇಳಿದರು.
ಅವರು ಎಸ್‌ವಿಟಿ ವನಿತಾ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಮೌಲ್ಯ ಸಂಗಮ ವರ್ಷದ ಸರಣಿ ಕಾರ್ಯಕ್ರಮದಲ್ಲಿ ಸಂಸ್ಕಾರ ಸಂಸ್ಕೃತಿ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.
ಪರಿಸ್ಥಿತಿ ಹೇಗಿದ್ದರೂ ತೊಂದರೆ ಇಲ್ಲ, ವ್ಯವಸ್ಥೆಗಳು ಹೇಗಿದ್ದರೂ ಪರವಾಗಿಲ್ಲ, ನಾಳೆಯ ದಿವಸ ಅಂತಹ ಪರಿಸ್ಥಿತಿಯನ್ನು, ಅಂತಹ ವ್ಯವಸ್ಥೆಯನ್ನು ಬದಲಾಯಿಸುವಂತಹ ಕೆಲಸ ನಾನು ಮಾಡುತ್ತೇನೆ ಎಂದಾದರೆ ಪ್ರತಿಯೊಬ್ಬರೂ ಹೊಸ ಇತಿಹಾಸವನ್ನು ಸೃಷ್ಟಿಸಲು ಸಾಧ್ಯವಿದೆ. ನಮ್ಮಿಂದ ನಮ್ಮ ಅಪ್ಪ, ಅಮ್ಮ, ಗುರು, ಹಿರಿಯರು ಮೆಚ್ಚುವ ಕೆಲಸ ಮಾಡಲು ಸಾಧ್ಯವಿಲ್ಲವೇ ? ಎಂದು ಕೇಳಿದ ಅವರು ನಮ್ಮ ಬದುಕು ಹೇಗಿದೆ ಎಂಬುದನ್ನು ಮೊದಲು ನಾವು ಅರ್ಥ ಮಾಡಿಕೊಳ್ಳಬೇಕು. ತನ್ಮೂಲಕ ಜೀವನವನ್ನು ಉತ್ತಮಗೊಳಿಸುವ ಜವಾಬ್ದಾರಿಯನ್ನು ನಿಭಾಯಿಸಬೇಕು. ಉತ್ತಮ ವ್ಯಕ್ತಿತ್ವ ನಿರ್ಮಾಣಕ್ಕೆ ಸಂಸ್ಕೃತಿ ಮತ್ತು ಸಂಸ್ಕಾರ ಅವಶ್ಯ. ವಿದ್ಯಾರ್ಥಿ ಜೀವನದಲ್ಲೆ ಇದನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಎಸ್‌ವಿ ಎಜುಕೇಶನ್ ಟ್ರಸ್ಟಿನ ಕಾರ್ಯದರ್ಶಿ ಕೆ.ಪಿ ಶೆಣೈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾಲೇಜಿನ ಪ್ರಾಚಾರ್ಯರಾದ ನೇಮಿರಾಜ ಶೆಟ್ಟಿ ಕೆ., ಮುಖ್ಯ ಶಿಕ್ಷಕ ಯೋಗೇಂದ್ರ ನಾಯಕ್, ಕಾಲೇಜಿನ ಅಧ್ಯಾಪಕ – ಪ್ರಾಧ್ಯಾಪಕ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಅಂಕಿತ ಸ್ವಾಗತಿಸಿದರು. ಬಿ. ಬಿ. ಆಯಿಷಾ ಅತಿಥಿಗಳ ಪರಿಚಯ ವಾಚಿಸಿದರು. ಸಾನ್ವಿ ಕಾರ್ಯಕ್ರಮ ನಿರೂಪಿಸಿ, ಸಂಧ್ಯಾ ವಂದಿಸಿದರು.

























