ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ – 2016

2006ರ ಡಿ.13ರಂದು ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಅಂಗವಿಕಲ ವ್ಯಕ್ತಿಗಳ ಹಕ್ಕುಗಳಿಗೆ ಸಂಬಂಧಿಸಿದ ಒಡಂಬಡಿಕೆಯನ್ನು 2007ರ ಅ.1ರಂದು ಭಾರತ ದೇಶವು ಸ್ಥಿರೀಕರಿಸಿರುವುದರಿಂದ ಮತ್ತು ಸದರಿ ಒಡಂಬಡಿಕೆಯನ್ನು ಅನುಷ್ಠಾನಗೊಳಿಸುವುದು ಅವಶ್ಯವೆಂದು ಪರಿಗಣಿಸಿರುವುದರಿಂದ ಕೇಂದ್ರ ಸರಕಾರವು ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ 2016 ಎಂಬ ಕಾನೂನನ್ನು ಜಾರಿಗೆ ತಂದಿರುತ್ತದೆ.
ಇದರ ಪ್ರಕಾರ ಅಂಗವಿಕಲ ವ್ಯಕ್ತಿಗಳು ಸಮಾನತೆಯ ಹಕ್ಕನ್ನು ಅನುಭವಿಸುವುದನ್ನು, ಘನತೆಯ ಜೀವನ ನಡೆಸುವುದನ್ನು ಮತ್ತು ಅವರ ಪ್ರಾಮಾಣಿಕತೆಯನ್ನು ಇತರರಂತೆಯೇ ಸಮಾನವಾಗಿ ಗೌರವಿಸುವುದನ್ನು ಸಮುಚಿತ ಸರಕಾರವು ಖಚಿತಪಡಿಸಿಕೊಳ್ಳಬೇಕಾಗುತ್ತದೆ.
ಸಮುಚಿತ ಸರಕಾರವು ಅಂಗವಿಕಲ ವ್ಯಕ್ತಿಗಳಿಗೆ ಸೂಕ್ತ ಪರಿಸರವನ್ನು ಕಲ್ಪಿಸುವ ಮೂಲಕ ಅವರ ಸಾಮರ್ಥ್ಯವನ್ನು ಬಳಸಿಕೊಳ್ಳುವುದಕ್ಕೆ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಕಾನೂನು ಸಮ್ಮತ ಉದ್ದೇಶವನ್ನು ಹೊರತುಪಡಿಸಿ ಯಾರೇ ಅಂಗವಿಕಲ ವ್ಯಕ್ತಿಗೆ ಆತನ ಅಂಗವಿಕಲತೆಯ ಕಾರಣದ ಮೇಲೆ ತಾರತಮ್ಯ ಮಾಡಬಾರದಾಗಿರುತ್ತದೆ. ಕೇವಲ ಅಂಗವಿಕಲತೆಯ ಕಾರಣದ ಮೇಲೆ ಆತನ ವೈಯಕ್ತಿಕ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಅಧಿಕಾರವನ್ನು ಹೊಂದಿರುವುದಿಲ್ಲ. ಸಮುಚಿತ ಸರಕಾರವು ಮತ್ತು ಸ್ಥಳೀಯ ಪ್ರಾಧಿಕಾರಗಳು ಅಂಗವಿಕಲ ಮಹಿಳೆಯರು ಮತ್ತು ಮಕ್ಕಳು ಸಮಾಜದಲ್ಲಿ ಇತರರೊಂದಿಗೆ ತಮ್ಮ ಹಕ್ಕುಗಳನ್ನು ಸಮವಾಗಿ ಅನುಭವಿಸುವುದನ್ನು ಖಚಿತಪಡಿಸಿಕೊಳ್ಳುವುದಕ್ಕೆ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಅಂಗವಿಕಲ ವ್ಯಕ್ತಿಗಳು ಸಮುದಾಯದಲ್ಲಿ ಎಲ್ಲರೊಂದಿಗೆ ಬೆರೆತು ಜೀವಿಸುವ ಹಕ್ಕನ್ನು ಹೊಂದಿರುತ್ತಾರೆ. ಅಂಗವಿಕಲ ವ್ಯಕ್ತಿಗಳು ಚಿತ್ರಹಿಂಸೆಗೆ, ಕ್ರೌರ್ಯಕ್ಕೆ, ಅಮಾನುಷ ಅಥವಾ ಅಗೌರವದ ವರ್ತನೆಗಳಿಗೆ ಈಡಾಗದಂತೆ ಅವರನ್ನು ರಕ್ಷಿಸುವ ಜವಾಬ್ದಾರಿಯನ್ನು ಸಮುಚಿತ ಸರಕಾರವು ಹೊಂದಿರುತ್ತದೆ. ಅಂಗವಿಕಲ ವ್ಯಕ್ತಿಗಳು ಯಾವುದೇ ರೀತಿಯಲ್ಲಿನ ದುರುಪಯೋಗಕ್ಕೆ, ಹಿಂಸೆಗೆ ಮತ್ತು ಶೋಷಣೆಗೆ ಒಳಗಾಗದಂತೆ ಸಮುಚಿತ ಸರಕಾರವು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಒಂದು ವೇಳೆ ಅಂಗವಿಕಲ ವ್ಯಕ್ತಿಯ ವಿರುದ್ಧ ಇಂತಹ ಯಾವುದೇ ಘಟನೆ ಸಂಭವಿಸಿದಲ್ಲಿ ಯಾವುದೇ ವ್ಯಕ್ತಿ ಅಥವಾ ಯಾವುದೇ ನೊಂದಾಯಿತ ಸಂಸ್ಥೆಯು ಘಟನೆಯನ್ನು ಸಂಬಂಧಪಟ್ಟ ವ್ಯಾಪ್ತಿಯೊಳಗಿನ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟರಿಗೆ ಮಾಹಿತಿಯನ್ನು ನೀಡಿದ ಸಂದರ್ಭದಲ್ಲಿ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟರರು ಕಾನೂನು ಪ್ರಕಾರದ ಸೂಕ್ತ ಕ್ರಮವನ್ನು ಕೈಗೊಂಡು ಭಾದಿತ ಅಂಗವಿಕಲ ವ್ಯಕ್ತಿಗೆ ಸೂಕ್ತ ರಕ್ಷಣೆಯನ್ನು ನೀಡಬೇಕಾಗುತ್ತದೆ.

ಅಂಗವಿಕಲ ವ್ಯಕ್ತಿಯು ದುರುಪಯೋಗಕ್ಕೆ, ಹಿಂಸೆಗೆ ಅಥವಾ ಶೋಷಣೆಗೆ ಗುರಿಯಾಗಿರುವ ಬಗ್ಗೆ ಯಾವುದೇ ದೂರು ಅಥವಾ ಮಾಹಿತಿಯನ್ನು ಸಂಬಂಧಪಟ್ಟ ಸರಹದ್ದಿನ ಪೊಲೀಸ್ ಅಧಿಕಾರಿಗೆ ನೀಡಿದಲ್ಲಿ ಅಥವಾ ಸ್ವಯಂ ಗಮನಕ್ಕೆ ಬಂದಲ್ಲಿ ಅಂತಹ ಪೊಲೀಸ್ ಅಧಿಕಾರಿಯು ಸಂಬಂಧಪಟ್ಟ ವ್ಯಾಪ್ತಿಯ ಕಾರ್ಯನಿರ್ವಾಹಕ ಮ್ಯಾಜಿಸ್ಟೇಟರರಿಗೆ ಕೃತ್ಯದ ಬಗ್ಗೆ ಸೂಕ್ತ ಮಾಹಿತಿಯನ್ನು ನೀಡಿ ಭಾದಿತ ವ್ಯಕ್ತಿಗೆ ಪುನರ್ವಸತಿಗಾಗಿ ಕೆಲಸಮಾಡುತ್ತಿರುವ ಹತ್ತಿರದ ಸಂಘ-ಸಂಸ್ಥೆಯ ವಿವರವನ್ನು, ಉಚಿತ ಕಾನೂನು ನೆರವು ಪಡೆಯಲು ಹೊಂದಿರುವ ಹಕ್ಕಿನ ಬಗ್ಗೆ ಮತ್ತು ಕಾನೂನು ಕ್ರಮಕ್ಕಾಗಿ ದೂರು ದಾಖಲಿಸುವ ಹಕ್ಕಿನ ಬಗ್ಗೆ ಸೂಕ್ತ ಮಾಹಿತಿಯನ್ನು ನೀಡಬೇಕಾಗಿರುತ್ತದೆ.

ಮಾನ್ಯತೆ ಪಡೆದಿರುವ ಎಲ್ಲಾ ಶೈಕ್ಷಣಿಕ ಸಂಸ್ಥೆಗಳು ಅಂಗವಿಕಲ ಮಕ್ಕಳಿಗೆ ಸಮ್ಮಿಳಿತ ಶಿಕ್ಷಣವನ್ನು ನೀಡುವುದಕ್ಕೆ ಪ್ರಯತ್ನಿಸಬೇಕಾಗುತ್ತದೆ. ಆ ನಿಟ್ಟಿನಲ್ಲಿ ಅಂಗವಿಕಲ ಮಕ್ಕಳೆಂದು ತಾರತಮ್ಯ ಮಾಡದೇ ಅವರಿಗೆ ಶಾಲೆಗೆ ಪ್ರವೇಶ ನೀಡಿ ಅವರು ಇತರ ಮಕ್ಕಳೊಂದಿಗೆ ಸಮಾನವಾಗಿ ಶಿಕ್ಷಣ ಪಡೆಯಲು ಮತ್ತು ಕ್ರೀಡೆ ಮತ್ತು ಇತರ ಮನೋರಂಜನೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅವಕಾಶಗಳನ್ನು ಕಲ್ಪಿಸಿ ಅಂತಹ ಮಕ್ಕಳಿಗೆ ವಿವಿಧ ಸೌಲಭ್ಯಗಳು ಲಭ್ಯವಾಗುವಂತೆ ನೋಡಿಕೊಂಡು ಆಯಾ ಮಕ್ಕಳ ಅಗತ್ಯಗಳಿಗೆ ಅನುಸಾರವಾಗಿ ಸಮಂಜಸ ಹೊಂದಾಣಿಕೆಯನ್ನು ಕಲ್ಪಿಸಬೇಕಾಗುತ್ತದೆ. ಮಾತ್ರವಲ್ಲದೇ ಮೇಲ್ಕಾಣಿಸಿದ ಕಾನೂನಿನ ನಿಯಮಾನುಸಾರದಂತೆ ಅಂಗವಿಕಲ ಮಕ್ಕಳ ಕೌಶಲ್ಯ ಸಂವರ್ಧನೆ ಮತ್ತು ಉದ್ಯೋಗಕ್ಕೆ ಸಂಬಂಧಪಟ್ಟಂತೆ ಸೂಕ್ತ ವೃತ್ತಿಪರ ತರಬೇತಿಯನ್ನು ಮತ್ತು ರಿಯಾಯಿತಿ ದರದ ಸಾಲ ಸೌಲಭ್ಯದ ಕುರಿತ ಯೋಜನೆಗಳನ್ನು ರೂಪಿಸಬೇಕಾಗುತ್ತದೆ. ಅವರಿಗೆ ಸಾಮಾಜಿಕ ಭದ್ರತೆ, ಆರೋಗ್ಯ, ಪುನರ್‌ವ್ಯವಸ್ಥೆ, ಮನೋರಂಜನೆ, ಆರೋಗ್ಯ ಪಾಲನೆ, ವಿಮಾ ಯೋಜನೆ ಮತ್ತಿತರ ಸವಲತ್ತುಗಳನ್ನು ಒದಗಿಸುವ ಕುರಿತು ವಿವಿಧ ಯೋಜನೆಗಳನ್ನು ಸಹ ಹಮ್ಮಿಕೊಂಡು ಕಾರ್ಯರೂಪಕ್ಕೆ ತರಬೇಕಾಗುತ್ತದೆ.

















































































error: Content is protected !!
Scroll to Top