500 ಕ್ಕೂ ಹೆಚ್ಚು ವಾಹನಗಳಿಂದ ಯಾತ್ರೆ ಆರಂಭ
ಬೆಂಗಳೂರು : ಧರ್ಮಸ್ಥಳ ಕ್ಷೇತ್ರದ ವಿರುದ್ಧ ಅಪಪ್ರಚಾರ ನಡೆಯುತ್ತಿದೆ ಎಂದು ಆರೋಪಿಸಿ ಬಿಜೆಪಿಯ ಮತ್ತೊಂದು ತಂಡ ಇಂದು ಧರ್ಮಸ್ಥಳ ಚಲೋ ರ‍್ಯಾಲಿ ಹಮ್ಮಿಕೊಂಡಿದೆ. ಬಿಜೆಪಿ ರಾಜ್ಯ ಕಾರ್ಯದರ್ಶಿ ತಮ್ಮೇಶ್ ಗೌಡ, ಬೆಂಗಳೂರು ಉತ್ತರ ಬಿಜೆಪಿ ಜಿಲ್ಲಾಧ್ಯಕ್ಷ ಎಸ್. ಹರೀಶ್ ನೇತೃತ್ವದಲ್ಲಿ ನಡೆಯುತ್ತಿರುವ ಈ ರ‍್ಯಾಲಿ ಬ್ಯಾಟರಾಯನಪುರ ಕ್ಷೇತ್ರದ ಬಿಜೆಪಿ ಘಟಕ ಕೊಡಿಗೆಹಳ್ಳಿ ಗೇಟ್‌ನ ಗುಂಡಾಂಜನೇಯ ದೇವಸ್ಥಾನದಿಂದ ಹೊರಟಿದೆ. ಸುಮಾರು 500ಕ್ಕೂ ಹೆಚ್ಚು ವಾಹನಗಳಿಂದ ಯಾತ್ರೆ ಆರಂಭ ಮಾಡಲಾಗಿದೆ.
ಈ ಬಗ್ಗೆ ಬಿಜೆಪಿ ಮುಖಂಡ ತಮ್ಮೇಶ್ ಗೌಡ ಮಾತನಾಡಿ, ಎಸ್ಐಟಿ ತನಿಖೆ ಮಾಡಲಿ ಅದಕ್ಕೇನು ಸಮಸ್ಯೆಯಿಲ್ಲ. ಆದರೆ, ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಸಹಿಸೋದಿಲ್ಲ. ನಮ್ಮ ಧರ್ಮದ ಮೇಲೆ ಎಷ್ಟೋ ಅಪಪ್ರಚಾರಗಳು ಮೊದಲಿನಿಂದಲೂ ಆಗಿದೆ. ಆದರೆ, ನಮ್ಮ ಧರ್ಮ ಅದಕ್ಕೆಲ್ಲ ಜಗ್ಗಿಲ್ಲ. ಈಗಾಗಲೇ ಧರ್ಮಸ್ಥಳದಲ್ಲಿ ಆಗುತ್ತಿರುವ ಬೆಳವಣಿಗೆ ಬಗ್ಗೆ ಗೊತ್ತು. ಇದರ ಹಿಂದೆ ನಡೆಯುತ್ತಿರುವ ಷಡ್ಯಂತ್ರದ ಬಗ್ಗೆ ಗೊತ್ತಾಗಬೇಕು. ನಾವು ಧರ್ಮಯಾತ್ರೆ ಮಾಡುತ್ತಿದ್ದೇವೆ. ಧರ್ಮಸ್ಥಳಕ್ಕೆ ಹೋಗಿ ಅಲ್ಲಿ ಒಂದು ಸಭೆ ಮಾಡುತ್ತಿದ್ದೇವೆ. ನಾವು ಧರ್ಮಸ್ಥಳದ ಜೊತೆಗೆ ಇದ್ದೇವೆ ಎಂದಿದ್ದಾರೆ.








































