ಕ್ರಿಯೇಟಿವ್ ಪುಸ್ತಕಧಾರೆ – 22 ಕೃತಿಗಳ ಅನಾವರಣ

ಕಾರ್ಕಳ : ಪುಸ್ತಕವೆಂದರೆ ಕೇವಲ ಹಾಳೆಗಳ ಗುಚ್ಛವಲ್ಲ. ಅದು ಕಾಲದ ಸ್ಮರಣೆ, ಸಮಾಜದ ಕನ್ನಡಿ, ಮನಸ್ಸಿನ ಆಳದಿಂದ ಹೊರ ಹೊಮ್ಮುವ ಭಾವಧಾರೆ ಮತ್ತು ಮಾನವನ ಮನಸ್ಸಿನ ನಕ್ಷೆ ಎಂದು ಖ್ಯಾತ ಸಾಹಿತಿಗಳು ಹಾಗೂ ಚಿತ್ರ ನಿರ್ದೇಶಕ ಡಾ. ನಾಗತಿಹಳ್ಳಿ ಚಂದ್ರಶೇಖರ್ ಅಭಿಪ್ರಾಯಪಟ್ಟರು.

ಅವರು ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನಲ್ಲಿ ಆ. 13ರಂದು ನಡೆದ ಕ್ರಿಯೇಟಿವ್ ಪುಸ್ತಕ ಧಾರೆ – 2025 ಮುಂಗಾರಿನ ಹನಿಗಳ ಜೊತೆಗೆ ಪುಟಗಳ ಪಯಣ ಕಾರ್ಯಕ್ರಮ ಹಾಗೂ ಕ್ರಿಯೇಟಿವ್ ಪುಸ್ತಕಮನೆ ಪ್ರಕಾಶನದ ವತಿಯಿಂದ 22 ಕೃತಿಗಳ ಅನಾವರಣ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಕೆ. ಚಿನ್ನಪ್ಪ ಗೌಡ ಮಾತನಾಡಿ, ಪುಸ್ತಕವೆಂದರೆ ಕೇವಲ ಅಕ್ಷರಗಳ ಸಂಗ್ರಹವಲ್ಲ. ಅದು ಕಾಲ, ಸಮಾಜ ಮತ್ತು ಮಾನವನ ಭಾವನೆಗಳ ಪ್ರತಿಬಿಂಬ. ಪುಸ್ತಕಧಾರೆಯಂತಹ ಕಾರ್ಯಕ್ರಮಗಳು ಓದುವ ಅಭ್ಯಾಸವನ್ನು ಪುನರುಜ್ಜೀವನಗೊಳಿಸುತ್ತವೆ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕಾಲೇಜಿನ ಸಹ ಸಂಸ್ಥಾಪಕ ಅಶ್ವತ್ ಎಸ್.ಎಲ್., ಲೇಖಕರು ತಮ್ಮ ವಿಚಾರಧಾರೆಯ ನದಿಗಳನ್ನು ಕೃತಿಗಳಲ್ಲಿ ಹರಿಸಿದ್ದಾರೆ. ಓದುಗರು ಅದರ ತೀರದಲ್ಲಿ ನಿಂತು ಚಿಂತನೆಗಳ ನೀರನ್ನು ಕುಡಿಯುವಂತಿದೆ. ಇಂತಹ ಸಾಹಿತ್ಯವು ಕಾಲವನ್ನು ಮೀರಿ ನೆನಪಿನ ಮಡಿಲಿನಲ್ಲಿ ಉಳಿಯುತ್ತವೆ ಎಂದರು.

ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ ಮಾತನಾಡಿ, ಇಂದಿನ ಯಾಂತ್ರಿಕ ಜೀವನದಲ್ಲಿ ಓದಿನ ಮಹತ್ವವನ್ನು ಮರೆಯುತ್ತಿರುವಾಗ, ಇಂತಹ ಪುಸ್ತಕ ಬಿಡುಗಡೆಗಳು ಸಾಹಿತ್ಯ ಪ್ರೇಮಿಗಳಿಗೆ ಹೊಸ ಚೈತನ್ಯ ತುಂಬುತ್ತವೆ ಎಂದು ಹೇಳಿದರು.
ಮಹಾಕಾವ್ಯಗಳ ಲೇಖಕ ಡಾ. ಪ್ರದೀಪ ಕುಮಾರ ಹೆಬ್ರಿ ಮಾತನಾಡಿ, ಪುಸ್ತಕದ ಜೀವನ ಅದರ ಓದುಗರ ಕೈಯಲ್ಲಿ ಪ್ರಾರಂಭವಾಗುತ್ತದೆ. ಉಳಿಸಿ ಬೆಳೆಸಬೇಕಾದದ್ದು ಸಹೃದಯರ ಕರ್ತವ್ಯ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಸಹ ಸಂಸ್ಥಾಪಕ ವಿದ್ವಾನ್ ಗಣಪತಿ ಭಟ್ ಸಾಹಿತ್ಯವು ಜನರ ಬದುಕಿಗೆ ಕನ್ನಡಿಯಂತೆ. ಓದುಗರು ಪುಸ್ತಕದಿಂದ ಕಥೆಗಳನ್ನು ಮಾತ್ರವಲ್ಲ, ಬದುಕಿನ ಮೌಲ್ಯಗಳನ್ನು, ಸಂಬಂಧಗಳ ಅರ್ಥವನ್ನು, ಮನುಷ್ಯತ್ವದ ಸಾರವನ್ನು ಪಡೆದುಕೊಳ್ಳುತ್ತಾರೆ ಎಂದರು.

ಸನ್ಮಾನ
ಕ್ರಿಯೇಟಿವ್ ಪುಸ್ತಕ ಮನೆಯ ವತಿಯಿಂದ ಡಾ. ನಾಗತಿಹಳ್ಳಿ, ಡಾ.ಕೆ.ಚಿನ್ನಪ್ಪ ಗೌಡ ಹಾಗೂ 22 ಕೃತಿಗಳ ಕರ್ತೃಗಳನ್ನು ಸನ್ಮಾನಿಸಲಾಯಿತು.

ಅನಾವರಣಗೊಂಡ ಕೃತಿಗಳು
ಯಾತ್ರೆ – ಚಂದ್ರಕಾಂತ ಪೋಕಳೆ, ವಿಜ್ಞಾನ ಕೌತುಕಗಳ ಮಹಾಯಾನ – ಎಲ್. ಪಿ ಕುಲಕರ್ಣಿ, ಹರ್ಷ ರಾಗ – ಪೌಝಿಯಾ ಸಲೀಂ, ಹಿತಶತ್ರು – ಪದ್ಮಲತಾ ಮೋಹನ್, ಪುಟ್ಟ ದೇವರ ಕಣ್ಣೀರು – ಸದಾಶಿವ ಸೊರಟೂರು, ಬದುಕು ಮಾಯೆಯ ಮಾಟ – ಕುಮಾರಸ್ವಾಮಿ ತೆಕ್ಕುಂಜ, ಕಾವ್ಯ ಧ್ಯಾನ – ನಾಗೇಶ್ ಜೆ. ನಾಯಕ, ನಿನಗೆ ನೀನೇ ಬೆಳಕು – ಪ್ರಜ್ವಲಾ ಶೆಣೈ, ನಿನ್ನ ಇಚ್ಛೆಯಂತೆ ನಡೆವೆ – ಮನು ಗುರುಸ್ವಾಮಿ, ಕಣ್ಣ ಬಾಗಿಲಿಗೆ ಬಂದ ನೀರು – ಸಂತೆಬೆನ್ನೂರು ಫೈಜ್ನಟರಾಜ್, ಸ್ವಾತಿ ಬೊಂಬಾಟ್ – ಎಂ. ಮನೋಹರ ಪೈ, ಗ್ಯಾಂಗ್ ಸ್ಟರ್ ಮತ್ತು ಅವಳು – ಮಂಜುನಾಥ್ ಕುಂಬಾರ್, ಇದೊಳ್ಳೆ ವರಸೆ – ಸಂದೇಶ್ ಎಚ್. ನಾಯ್ಕ್, ಮಾಂಡವ್ಯ ದೀಪ – ಡಾ. ಪ್ರದೀಪ ಕುಮಾರ ಹೆಬ್ರಿ, ಬೆಳ್ದೀಪ – ಡಾ. ಪ್ರದೀಪ ಕುಮಾರ ಹೆಬ್ರಿ, ನಿಲುಕದ ನಕ್ಷತ್ರ – ಡಾ. ಸುಮತಿ ಪಿ., ಸಿಹಿಜೀವಿ ಕಂಡ ಅಂಡಮಾನ್ – ಸಿಹಿಜೀವಿ ಸಿ.ಜಿ. ವೆಂಕಟೇಶ್ವರ, ಅನುಭವ ದೀಪ್ತಿ – ಶುಭಲಕ್ಷ್ಮಿ ಆರ್. ನಾಯಕ್, ಈ ಪಯಣದಲ್ಲಿ – ಶ್ಯಾಮಲಾ ಗೋಪಿನಾಥ್, ಸಂಗೀತ ಶರಧಿ – ರಾಜೇಂದ್ರ ಭಟ್ ಕೆ., ಅಸಂಗತ – ಅಕ್ಷತಾ ರಾಜ್ ಪೆರ್ಲ ಮತ್ತು ವಿಜ್ಞಾನ ವಿಶಾರದರು – ಎಲ್‌.ಪಿ ಕುಲಕರ್ಣಿ.

ಸಂವಾದ
ಮಧ್ಯಾಹ್ನ ನಾಗತಿಹಳ್ಳಿ ಚಂದ್ರಶೇಖರ ಅವರ ಚಲನಚಿತ್ರಗಳಲ್ಲಿ ಬಳಸಿರುವ ಭಾವಗೀತೆಗಳ ಗಾಯನದ ಜೊತೆಗೆ ಸಂವಾದ ಕಾರ್ಯಕ್ರಮ ನಡೆಯಿತು. ಖ್ಯಾತ ನಿರೂಪಕ ಅವಿನಾಶ್ ಕಾಮತ್ ಕಾರ್ಯಕ್ರಮ ನಿರ್ವಹಿಸಿದರು. ಜೀ ಸರಿಗಮಪ ಮತ್ತು ಗೋಲ್ಡನ್ ಬುಕ್ ಆಫ್ ವರ್ಲ್ಡ್‌ ರೆಕಾರ್ಡ್‌ ಖ್ಯಾತಿಯ ಯಶವಂತ್ ಎಂ.ಜಿ. ಅವರಿಂದ ಗೀತೆಗಳ ಗಾಯನ ಕಾರ್ಯಕ್ರಮ ನಡೆಯಿತು.

ಸಹ ಸಂಸ್ಥಾಪಕರಾದ ಅಮೃತ್ ರೈ, ಗಣನಾಥ ಶೆಟ್ಟಿ ಬಿ., ಗಣಪತಿ ಭಟ್ ಕೆ.ಎಸ್., ವಿಮಲ್ ರಾಜ್ ಜಿಲ, ಆದರ್ಶ ಎಂ. ಕೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕ – ಉಪನ್ಯಾಸಕೇತರ ವರ್ಗದವರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಜೀವಶಾಸ್ತ್ರ ವಿಭಾಗ ಮುಖ್ಯಸ್ಥ ಲೋಹಿತ್ ಎಸ್.ಕೆ. ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.





























































































































error: Content is protected !!
Scroll to Top