ಕಾಲ್ತುಳಿತ ಪ್ರಕರಣ : ವರದಿ ಸಲ್ಲಿಕೆಗೆ ಒಂದು ತಿಂಗಳ ಕಾಲಾವಕಾಶ ಕೋರಿದ ರಾಜ್ಯ ಸರಕಾರ

ಬೆಂಗಳೂರು : ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದಿದ್ದ ಕಾಲ್ತುಳಿತದಲ್ಲಿ ಆರ್​ಸಿಬಿಯ 11 ಅಭಿಮಾನಿಗಳ ಸಾವು ಪ್ರಕರಣ ಸಂಬಂಧಿಸಿದಂತೆ ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮಾಡಿದ ಹೈಕೋರ್ಟ್‌ ಸರಕಾರದ ಪ್ರತಿಕ್ರಿಯೆ ಬಂದ ಬಳಿಕ ಮಧ್ಯಂತರ ಅರ್ಜಿ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಯಾವುದೇ ನಿರ್ದೇಶನ ನೀಡದೇ ಅರ್ಜಿಗಳ ವಿಚಾರಣೆಯನ್ನು ಜೂ.12ರ ಮಧ್ಯಾಹ್ನ 2.30ಕ್ಕೆ ಮುಂದೂಡಿದೆ.

ದುರಂತದ ಬಳಿಕ ಯಾವುದೇ ಪ್ರಕರಣಗಳು ದಾಖಲಾಗಿರಲಿಲ್ಲ. ಹೈಕೋರ್ಟೇ ಸ್ವಯಂಪ್ರೇರಿತವಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲಿಸಿಕೊಂಡಿತ್ತು. ಜೂನ್‌ 5ರಂದು ನಡೆದ ವಿಚಾರಣೆಯಲ್ಲಿ ಘಟನೆಯ ಸಂಪೂರ್ಣ ವರದಿ ಸಲ್ಲಿಸುವಂತೆ ಸರಕಾರಕ್ಕೆ ಕೋರ್ಟ್ ಸೂಚಿಸಿತ್ತು. ಇಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿ.ಕಾಮೇಶ್ವರ ರಾವ್ ಹಾಗೂ ನ್ಯಾಯಮೂರ್ತಿ ಸಿ.ಎಂ.ಜೋಶಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಆದರೆ ಸರಕಾರ ಯಾವುದೇ ವರದಿ ಸಲ್ಲಿಸಿಲ್ಲ. ವಿಚಾರಣೆ ವೇಳೆ ಸರಕಾರದಿಂದ ಇನ್ನೂ ವರದಿ ಏಕೆ ಸಲ್ಲಿಸಿಲ್ಲ ಎಂದು ಹೈಕೋರ್ಟ್ ಪ್ರಶ್ನೆ ಮಾಡಿದೆ. ಈ ವೇಳೆ ಹೈಕೋರ್ಟ್​ಗೆ ಎಜಿ ಶಶಿಕಿರಣ್ ಶೆಟ್ಟಿ ಉತ್ತರಿಸಿದ್ದು, ನಾವು ನ್ಯಾಯಾಂಗ ತನಿಖೆಗೆ ಆದೇಶ ನೀಡಿದ್ದೇವೆ ಎಂದರು.

ಮ್ಯಾಜಿಸ್ಟೀರಿಯಲ್ ತನಿಖೆ, ನ್ಯಾಯಾಂಗ ತನಿಖೆ ವರದಿ ಸಲ್ಲಿಸುತ್ತೇವೆ. ತನಿಖೆಗೆ ಮೊದಲೇ ಸರಕಾರ ತೀರ್ಮಾನಿಸಿದೆ ಎಂದು ವಿವಾದ ಬೇಡ. ಹೀಗಾಗಿ ಒಂದು ತಿಂಗಳು ಕಾಲಾವಕಾಶ ನೀಡುವಂತೆ ಎಜಿ ಶಶಿಕಿರಣ್ ಶೆಟ್ಟಿ ಮನವಿ ಮಾಡಿದರು. ಜೂನ್ 12ರೊಳಗೆ ಮುಚ್ಚಿದ ಲಕೋಟೆಯಲ್ಲಿ ವರದಿ ನೀಡುವಂತೆ ಹೈಕೋರ್ಟ್​ ಸೂಚಿಸಿದೆ.









































































































error: Content is protected !!
Scroll to Top