ವಿಶ್ವದ ಅತಿ ಎತ್ತರದ ಚೆನಾಬ್‌ ರೈಲ್ವೆ ಸೇತುವೆ ಲೋಕಾರ್ಪಣೆ

ಶ್ರೀನಗರ : ಪಹಲ್ಗಾಮ್‌ ಭಯೋತ್ಪಾದಕ ದಾಳಿ ಬಳಿಕ ಜಮ್ಮು ಮತ್ತು ಕಾಶ್ಮೀರಕ್ಕೆ ಇಂದು ಮೊದಲ ಬಾರಿ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ವಿಶ್ವದ ಅತಿ ಎತ್ತರದ ಚೆನಾಬ್‌ ರೈಲ್ವೆ ಸೇತುವೆಯನ್ನು ಉದ್ಘಾಟಿಸಿದರು. ಜೊತೆಗೆ ಅಂಜಿ ನದಿಯ ಮೇಲೆ ನಿರ್ಮಿಸಲಾದ ಭಾರತದ ಮೊಟ್ಟ ಮೊದಲ ಕೇಬಲ್-ಸ್ಟೇಡ್ ರೈಲು ಸೇತುವೆಗೂ ಚಾಲನೆ ನೀಡಿದರು. ಇದರೊಂದಿಗೆ ಜಮ್ಮು ಮತ್ತು ಕಾಶ್ಮೀರದ ಕತ್ರಾ-ಶ್ರೀನಗರ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿಗೆ ಹಸಿರು ನಿಶಾನೆ ತೋರಿದರು.

ಚೆನಾಬ್‌ ಸೇತುವೆ ವಿಶೇಷತೆ
ಜಮ್ಮು ಕಾಶ್ಮೀರದ ಚೇನಾಬ್ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಚೆನಾಬ್‌ ಸೇತುವೆ ಪ್ಯಾರಿಸ್‌ನ ಐಫೆಲ್ ಟವರ್‌ಗಿಂತಲೂ ಎತ್ತರವಾಗಿ ನಿರ್ಮಾಣವಾಗಿರುವ, ವಿಶ್ವದಲ್ಲೇ ಅತಿ ಎತ್ತರದ ರೈಲ್ವೆ ಸೇತುವೆ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ. 2021ರಲ್ಲಿ ಸೇತುವೆಯ ಕಮಾನು ಕೆಲಸ ಪೂರ್ಣಗೊಂಡಿತ್ತು. ಈ ಸೇತುವೆಯನ್ನು ಅಂದಾಜು 1,486 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಚೆನಾಬ್ ಸೇತುವೆ ಚೆನಾಬ್ ನದಿ ಮಟ್ಟದಿಂದ 359 ಮೀ. ಎತ್ತರದಲ್ಲಿ ನಿರ್ಮಾಣವಾಗಿದ್ದು, 1.3 ಕಿ.ಮೀ. ಉದ್ದವಿದೆ. ಇದರ ಉಕ್ಕಿನ ಕಮಾನುಗಳು ಭೂಕಂಪನ, ಬಲವಾದ ಗಾಳಿಯನ್ನೂ ತಡೆಯುವ ಸಾಮರ್ಥ್ಯ ಹೊಂದಿದೆ, ಆ ರೀತಿ ಕಮಾನುಗಳನ್ನು ವಿನ್ಯಾಸಗೊಳಿಸಲಾಗಿದೆ.

ರೈಲ್ವೇ ಮಾರ್ಗದ 111 ಕಿ.ಮೀ ನಲ್ಲಿ 97 ಕಿ.ಮೀ ನಷ್ಟು ಸುರಂಗ ಮಾರ್ಗವೇ ಇದೆ. ಇಷ್ಟು ದೂರದ ಸುರಂಗ ಮಾರ್ಗ ದೇಶದ ಬೇರೆ ಯಾವ ಭಾಗಗಳಲ್ಲೂ ಮಾಡಲಾಗಿಲ್ಲ. ಸೇತುವೆ ನಿರ್ಮಾಣಕ್ಕೆ 17 ಕಂಬಗಳನ್ನು ನಿರ್ಮಿಸಲಾಗಿದ್ದು, ಒಟ್ಟು 28,660 ಮೆಟ್ರಿಕ್ ಟನ್‌ನಷ್ಟು ಉಕ್ಕನ್ನು ಬಳಸಲಾಗಿದೆ. ಕಮಾನಿನ ತೂಕ 10,619 ಮೆಟ್ರಿಕ್ ಟನ್ ಇದೆ. ಸೇತುವೆಗೆ ಬಳಸಲಾದ ಉಕ್ಕು 10 ಡಿಗ್ರಿ ಸೆಲ್ಸಿಯಸ್‌ನಿಂದ ಮೈನಸ್ 40 ಡಿಗ್ರಿ ಸೆಲ್ಸಿಯಸ್‌ವರೆಗಿನ ತಾಪಮಾನಕ್ಕೆ ಸೂಕ್ತವಾಗಿದೆ. ಕನಿಷ್ಠ 120 ವರ್ಷಗಳ ಜೀವಿತಾವಧಿ ಈ ರಚನೆಗಿದ್ದು, ಗಂಟೆಗೆ 266 ಕಿ.ಮೀ ವೇಗದ ಗಾಳಿಯನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ.

ಕಾಶ್ಮೀರಕ್ಕೆ ರೈಲು ಮಾರ್ಗವನ್ನು ಹಾಕುವ ಯೋಜನೆಯನ್ನು 1990ರ ದಶಕದಲ್ಲಿ ಆಗಿನ ಪ್ರಧಾನಿ ಪಿ.ವಿ ನರಸಿಂಹರಾವ್ ಅವರು ಪ್ರಕಟಿಸಿದ್ದರು. 2002ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ಆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಕರೆದಿದ್ದರು.















































































error: Content is protected !!
Scroll to Top