ಯಾವ ಯಾವ ಕಾಲದಲ್ಲಿ ಯಾವ ಯಾವ ಹಣ್ಣುಗಳು ಬೆಳೆಯುತ್ತವೆಯೋ ಅದನ್ನು ಸೇವಿಸಿದರೆ ಉತ್ತಮ ಎಂದು ಆಯುರ್ವೇದ ಹೇಳುತ್ತದೆ. ಏಕೆಂದರೆ ಪ್ರಕೃತಿಯು ನಮ್ಮ ಆರೋಗ್ಯಕ್ಕೆ ಅಗತ್ಯವಿರುವ ಆಯಾ ಕಾಲಕ್ಕೆ ಆಯಾ ವಸ್ತುಗಳನ್ನು ದೊರಕಿಸಿಕೊಡುತ್ತದೆ. ಅದನ್ನು ಸರಿಯಾಗಿ ಉಪಯೋಗಿಸುವುದು ನಮ್ಮ ದೇಹಕ್ಕೆ ಒಳ್ಳೆಯದು. ಯಾವ ಕಾಲಕ್ಕೆ ಏನು ಅಗತ್ಯವಿರುವುದೋ ಅದನ್ನು ಪ್ರಕೃತಿ ನಮಗೆ ನೀಡುತ್ತದೆ. ಅಂತೆಯೇ ಗ್ರೀಷ್ಮ ಋತುವಿನಲ್ಲಿ ಬೆಳೆಯುವಂತಹ ಮಾವಿನ ಹಣ್ಣು ಬೇಸಿಗೆಯಲ್ಲಿ ಕಾಡುವ ಅನೇಕ ಸಮಸ್ಯೆಗಳಿಗೆ ಪರಿಹಾರವನ್ನು ನೀಡುತ್ತದೆ. ಹಣ್ಣುಗಳ ರಾಜ ಎನಿಸಿಕೊಂಡಿರುವ ಮಾವಿನ ಹಣ್ಣಿನ ಗುಣಗಳ ಬಗ್ಗೆ ಹಾಗೂ ಆರೋಗ್ಯ ಲಾಭದ ಬಗ್ಗೆ ತಿಳಿದುಕೊಳ್ಳೋಣ.
ಆಯುರ್ವೇದದಲ್ಲಿ ಮಾವಿನ ಮರದ ಎಲ್ಲಾ ಭಾಗಗಳನ್ನು ಅಂದರೆ ಮಾವಿನ ಬೀಜ, ಹೂವು, ತೊಗಟೆ, ಎಲೆ, ಬೇರುಗಳನ್ನು ವಿವಿಧ ರೋಗಗಳಲ್ಲಿ ಉಪಯೋಗಿಸುತ್ತಾರೆ. ಕೂದಲು ಉದುರುವಿಕೆಗೆ ಮಾವಿನ ಬೀಜದ ಎಣ್ಣೆಯನ್ನು ಉಪಯೋಗಿಸುತ್ತಾರೆ. ಹೊಟ್ಟೆನೋವು, ವಾಂತಿ, ಬೇಧಿಗಳಿಗೆ ಮಾವಿನ ಎಲೆಯನ್ನು ಉಪಯೋಗಿಸುತ್ತಾರೆ. ತ್ವಚೆಯ ಸಂಬಂಧಿ ಸಮಸ್ಯೆಗಳಿಗೆ ಮಾವಿನ ಹೂವು ಅಥವಾ ಎಲೆಗಳ ಕಣಕವನ್ನು ಉಪಯೋಗಿಸುತ್ತಾರೆ. ತೊಗಟೆ ಹಾಗೂ ಬೇರನ್ನು ಬೇದಿಯಲ್ಲಿ ಉಪಯೋಗಿಸುತ್ತಾರೆ.
ಮಾವಿನ ಕಾಯಿಯ ಹಾಗೂ ಮಾವಿನ ಹಣ್ಣುಗಳ ಗುಣಗಳು ಬೇರೆ ಬೇರೆ.
ಮಾವಿನ ಕಾಯಿಯ ಗುಣಗಳು- ಮಾವಿನಕಾಯಿಯು ಖಾರ, ಕಷಾಯ, ಆಮ್ಲ ರಸ ಹೊಂದಿದೆ. ಬಾಯಿರುಚಿಯನ್ನು ಹೆಚ್ಚಿಸುತ್ತದೆ. ಪಿತ್ತವನ್ನು ಪ್ರಕುಪಿತಗೊಳಿಸುತ್ತದೆ ಹಾಗೂ ವಾತ ದೋಷವನ್ನು ಸಮತೋಲನದಲ್ಲಿಡುತ್ತದೆ. ಕಫವನ್ನು ವೃದ್ಧಿಸುತ್ತದೆ.

ಮಾವಿನ ಕಾಯಿಯ ಉಪಯೋಗಗಳು
ತ್ವಚೆ ಹೊಳಪನ್ನು ಹೆಚ್ಚಿಸುತ್ತದೆ. ಹೃದಯಕ್ಕೆ ಹಿತಕರ, ರುಚಿಯನ್ನು ಹೆಚ್ಚಿಸುತ್ತದೆ, ದೇಹಬಲವನ್ನು ವೃದ್ಧಿಸುತ್ತದೆ, ಮಾಂಸಖಂಡಗಳಿಗೆ ಶಕ್ತಿಯನ್ನು ನೀಡುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮಾವಿನಕಾಯಿಯ ಜ್ಯೂಸ್, ಚಟ್ನಿ, ಪಚಡಿ ಮಾಡಿ ಸೇವಿಸಬಹುದು. ಆದರೆ ಅಧಿಕ ಪ್ರಮಾಣದಲ್ಲಿ ಸೇವಿಸಬೇಡಿ. ಮಾವಿನಕಾಯಿಯ ಜ್ಯೂಸ್ ಮಾಡುವಾಗ ಏಲಕ್ಕಿ ಪುಡಿಯನ್ನು ಬೆರೆಸಿ ಸೇವಿಸಿ ಇದು ಪಿತ್ತವನ್ನು ಕಡಿಮೆ ಮಾಡುತ್ತದೆ.
ಯಾರು ಮಾವಿನ ಕಾಯನ್ನು ಸೇವಿಸಬಾರದು
ಮಾವಿನಕಾಯಿಯೂ ಪಿತ್ತವನ್ನು ವೃದ್ಧಿ ಮಾಡುವುದರಿಂದ ಯಾವುದೇ ರಕ್ತಸ್ರಾವ ಆಗುವ ಕಾಯಿಲೆಗಳಲ್ಲಿ, ರಕ್ತಪಿತ್ತ, ಮೂಗಿನಿಂದ ರಕ್ತ ಸೋರುವುದು, ಮಹಿಳೆಯರಲ್ಲಿ ಮುಟ್ಟಾದಾಗ ಅಧಿಕ ರಕ್ತಸ್ರಾವಾದಾಗ ಸೇವಿಸಕೂಡದು.
ಮಾವಿನ ಹಣ್ಣಿನ ಗುಣಗಳು
ಕಷಾಯ ರಸ ಹೊಂದಿದೆ. ಮಾವಿನ ಹಣ್ಣು ದೇಹಕ್ಕೆ ತಂಪನ್ನು ನೀಡುತ್ತದೆ. ಬೇಗ ಜೀರ್ಣವಾಗುತ್ತದೆ, ವಾತದೋಷವನ್ನು ಸಮತೋಲನದಲ್ಲಿಡುತ್ತದೆ. ಪಿತ್ತವನ್ನು ಹೆಚ್ಚಿಸುವುದಿಲ್ಲ, ಬಲವನ್ನು ನೀಡುತ್ತದೆ. ಮಲಬದ್ಧತೆಯನ್ನು ದೂರ ಮಾಡುತ್ತದೆ. ಪ್ಯಾರಲಿಸಿಸ್, ನರಸಂಬಂಧಿ ರೋಗಗಳಿಗೆ ಒಳ್ಳೆಯದು. ಅಧಿಕ ಪ್ರಮಾಣದಲ್ಲಿ ಸೇವಿಸಿದರೆ ಅಜೀರ್ಣ, ಮಲಬದ್ಧತೆಗೆ ಕಾರಣವಾಗುತ್ತದೆ. ಆಯಾಸವನ್ನು ಹಾಗೂ ಬಾಯಾರಿಕೆಯನ್ನು ದೂರಮಾಡುತ್ತದೆ.
ಬೇಸಿಗೆಯಲ್ಲಿ ದಿನಕ್ಕೆ ಒಂದು ಮಾವಿನ ಹಣ್ಣನ್ನು ಸೇವಿಸಿ, ಬೇಸಿಗೆಯ ಬಳಲಿಕೆ ಹಾಗೂ ಧಗೆಯಿಂದ ದೂರವಿರಿ.




