ಅಪ್ರಾಪ್ತ ವಯಸ್ಕರು – ಅಸ್ವಸ್ಥ ಮನಸ್ಸಿನ ವ್ಯಕ್ತಿಗಳಿಂದ ಅಥವಾ ಅವರ ವಿರುದ್ದ ಸಿವಿಲ್ ದಾವೆ – ಕಾನೂನು ಮಾಹಿತಿ

ಯಾವುದೇ ಸಿವಿಲ್ ಸ್ವರೂಪದ ವಿವಾದಗಳಿಗೆ ಅಥವಾ ವ್ಯವಹಾರಗಳಿಗೆ ಸಂಬಂಧಪಟ್ಟಂತೆ ನ್ಯಾಯಾಲಯಗಳ ಪ್ರಕ್ರಿಯೆಗೆ ಸಂಬಂಧಿಸಿದ ಸಿವಿಲ್ ಪ್ರಕ್ರಿಯೆ ಸಂಹಿತೆ 1908 (ಸಿವಿಲ್ ಪ್ರೊಸೀಜರ್ ಕೋಡ್ 1908) ಎಂಬ ಕಾನೂನನ್ನು ರಚಿಸುವ ಸಂದರ್ಭದಲ್ಲಿ ಅಪ್ರಾಪ್ತ ವಯಸ್ಕರು ಮತ್ತು ಅಸ್ವಸ್ಥ ಮನಸ್ಸಿನ ವ್ಯಕ್ತಿಗಳ ಹೆಸರಿನಲ್ಲಿ ಸಿವಿಲ್ ದಾವೆಯನ್ನು ಹೂಡುವುದಕ್ಕಾಗಿ ಅಥವಾ ಅಂತಹ ವ್ಯಕ್ತಿಗಳ ವಿರುದ್ಧ ಬೇರೆಯವರು ದಾವೆಯನ್ನು ಹೂಡುವುದಕ್ಕಾಗಿ ಸಿವಿಲ್ ಪ್ರಕ್ರಿಯೆ ಸಂಹಿತೆಯ ಕ್ರಮಾದೇಶ ಸಂಖ್ಯೆ 32ರಂತೆ ಒಂದು ಪ್ರತ್ಯೇಕ ಕ್ರಮಾದೇಶವನ್ನು ರಚಿಸಲಾಗಿರುತ್ತದೆ. ಇದರಂತೆ ಯಾವುದೇ ಅಪ್ರಾಪ್ತ ವಯಸ್ಕನ (ಮೈನರ್) ಹೆಸರಿನಲ್ಲಿ ದಾವೆಯನ್ನು ಹೂಡಬೇಕಾದರೆ ಸದರಿ ದಾವೆಯನ್ನು ಆತನ ವಾದ ಮಿತ್ರ ನೆಂದು ಕರೆಯಲ್ಪಡುವ ವ್ಯಕ್ತಿಯ ಮುಖಾಂತರ ದಾಖಲು ಮಾಡಬೇಕಾಗಿರುತ್ತದೆ. ವಾದ ಮಿತ್ರನೆಂದರೆ ಸ್ವಸ್ಥ ಮನಸ್ಕನಾಗಿರುವ ಮತ್ತು ಪ್ರಾಪ್ತ ವಯಸ್ಕನಾಗಿರುವ ಪಾಲಕ ಅಥವಾ ಅಪ್ರಾಪ್ತ ವಯಸ್ಕನ ಹಿತಾಸಕ್ತಿಯನ್ನು ಹೊಂದಿರುವ ವ್ಯಕ್ತಿ. ಸಂದರ್ಭಕ್ಕನುಸಾರವಾಗಿ ದಾವೆ ಹೂಡುವ ಅಪ್ರಾಪ್ತ ವಯಸ್ಕನ ವಾದಮಿತ್ರ ಅಥವಾ ಪಾಲಕನನ್ನು ನ್ಯಾಯಾಲಯವು ನೇಮಿಸಬೇಕಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಅಪ್ರಾಪ್ತ ವಯಸ್ಕನ ಪರವಾಗಿ ವ್ಯವಹರಿಸಲು ಯೋಗ್ಯನಾದ ಮತ್ತು ಸಮ್ಮತಿವುಳ್ಳ ಯಾವುದೇ ವ್ಯಕ್ತಿಯು ಅಲಭ್ಯವಾದಲ್ಲಿ ನ್ಯಾಯಾಲಯವು ತನ್ನ ಅಧಿಕಾರಿಗಳ ಪೈಕಿ ಯಾರಾನ್ನಾದರೂ ಆತನ ಪಾಲಕನನ್ನಾಗಿ ನೇಮಿಸಬಹುದಾಗಿದೆ. ಈ ರೀತಿ ಅಪ್ರಾಪ್ತ ವಯಸ್ಕನನ್ನು ಪ್ರತಿನಿಧಿಸಲು ಸೂಕ್ತ ವಾದಮಿತ್ರನನ್ನು ನೇಮಿಸುವ ಬಗ್ಗೆ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಬೇಕಾಗಿರುತ್ತದೆ. ಈ ರೀತಿಯಾಗಿ ಅಪ್ರಾಪ್ತ ವಯಸ್ಕನ ಹೆಸರಿನಲ್ಲಿ ದಾಖಲಿಸಿರುವ ಅಥವಾ ಆತನ ವಿರುದ್ಧ ದಾಖಲು ಮಾಡಿರುವ ದಾವೆಯು ವಿಚಾರಣೆಯ ಹಂತದಲ್ಲಿ ಬಾಕಿ ಇರುವ ಸಂದರ್ಭದಲ್ಲಿ ಅಪ್ರಾಪ್ತ ವಯಸ್ಕ ವಾದಿ ಅಥವಾ ಪ್ರತಿವಾದಿಯು ಪ್ರಾಪ್ತ ವಯಸ್ಕನಾದ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವ ಮೂಲಕ ಆತನ ಪರವಾಗಿ ನೇಮಿಸಲ್ಪಟ್ಟಿರುವ ಪಾಲಕ ಅಥವಾ ವಾದ ಮಿತ್ರನ ಅಧಿಕಾರವನ್ನು ನ್ಯಾಯಾಲಯವು ರದ್ದುಗೊಳಿಸಿ ದಾವೆಯನ್ನು ನೇರವಾಗಿ ವ್ಯವಹರಿಸುವ ಬಗ್ಗೆ ಸೂಕ್ತ ಆದೇಶವನ್ನು ನ್ಯಾಯಾಲಯವು ಮಾಡಬಹುದಾಗಿದೆ. ಅಪ್ರಾಪ್ತ ವಯಸ್ಕನ ಹೆಸರಿನಲ್ಲಿ ದಾವೆಯನ್ನು ದಾಖಲು ಮಾಡಲು ಅಥವಾ ಎದುರಿಸಲು ಪಾಲಕನನ್ನು ನೇಮಿಸುವ ಸಂದರ್ಭದಲ್ಲಿ ಅಪ್ರಾಪ್ತ ವಯಸ್ಕನಿಗೆ ಪಾಲಕರಿದ್ದಲ್ಲಿ ಪಾಲಕರ ಪೈಕಿ ತಂದೆ ಅಥವಾ ತಾಯಿಯನ್ನು ಅಥವಾ ಅಪ್ರಾಪ್ತ ವಯಸ್ಕನಿಗೆ ತಂದೆ ಮತ್ತು ತಾಯಿ ಇಬ್ಬರೂ ಇಲ್ಲದಿರುವಲ್ಲಿ ಆತನ ಇತರ ಸಹಜ ಪಾಲಕರನ್ನು ನ್ಯಾಯಾಲಯವು ಪಾಲಕನಾಗಿ ನೇಮಿಸಬಹುದಾಗಿದೆ. ಅಪ್ರಾಪ್ತ ವಯಸ್ಕನ ಅಥವಾ ಅಸ್ವಸ್ತ ಮನಸ್ಸಿನ ವ್ಯಕ್ತಿಗೆ ಸಂಬಂಧಪಟ್ಟ ದಾವೆಯಲ್ಲಿ ರಾಜಿ ಒಪ್ಪಂದ ಮಾಡಿಕೊಳ್ಳುವ ಸಂದರ್ಭದಲ್ಲಿ ಅಥವಾ ದಾವೆಯನ್ನು ಹಿಂತೆಗೆದುಕೊಳ್ಳುವ ಸಂದರ್ಭದಲ್ಲಿ ಈ ರೀತಿಯ ಒಪ್ಪಂದವು ಅಪ್ರಾಪ್ತ ವಯಸ್ಕನ ಅಥವಾ ಅಸ್ವಸ್ಥ ವ್ಯಕ್ತಿಯ ಹಿತಾಸಕ್ತಿಗೆ ವಿರುದ್ಧವಾಗಿರುವುದಿಲ್ಲ ಮತ್ತು ಅದು ಅವರ ಪ್ರಯೋಜನಕ್ಕಾಗಿರುವ ನಿರ್ಧಾರ ಎಂಬುದಾಗಿ ಅಪ್ರಾಪ್ತ ವಯಸ್ಕನ ಮತ್ತು ಅಸ್ವಸ್ಥ ವ್ಯಕ್ತಿಯ ವಕೀಲರು ನ್ಯಾಯಾಲಯಕ್ಕೆ ಮನದಟ್ಟು ಮಾಡಿ ಈ ಕುರಿತು ಸೂಕ್ತ ಪ್ರಮಾಣ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕಾಗಿರುತ್ತದೆ.



































































































error: Content is protected !!
Scroll to Top