ಕಾಂಗ್ರೇಸ್ ನೇತೃತ್ವದ ರಾಜ್ಯ ಸರಕಾರಕ್ಕೆ ದಿಕ್ಕಾರ
ಕಾರ್ಕಳ : ಶಿವಮೊಗ್ಗದ ಆದಿಚುಂಚನಗಿರಿ ಕಾಲೇಜಿನಲ್ಲಿ ಸಿಇಟಿ ಪರೀಕ್ಷೆಯ ಸಂದರ್ಭ ಬ್ರಾಹ್ಮಣ ವಿದ್ಯಾರ್ಥಿಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿರುವುದು ಖಂಡನೀಯ ಎಂದು ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಧಾರ್ಮಿಕ ಭಾವನೆಗಳ ರಕ್ಷಣೆಯು ಸರಕಾರದ, ಶಿಕ್ಷಣ ಸಂಸ್ಥೆಗಳ ಪ್ರಾಥಮಿಕ ಹೊಣೆಗಾರಿಕೆ. ಆದರೆ ಇಲ್ಲಿ ಅದಕ್ಕೆ ಘಾಸಿ ಮಾಡಲಾಗಿದೆ. ಗಾಯತ್ರಿ ದೀಕ್ಷೆಯೊಂದಿಗೆ ಧರಿಸುವ ಕಾಶಿದಾರ ಮತ್ತು ಜನಿವಾರವನ್ನು ಪರೀಕ್ಷಾಧಿಕಾರಿಗಳು ಬಲವಂತವಾಗಿ ತೆಗೆಸಿರುವ ವರದಿ ಇದೊಂದು ಭೀಕರ ಧಾರ್ಮಿಕ ಅನಾಚಾರವಾಗಿದೆ. ಕೇವಲ ವಿದ್ಯಾರ್ಥಿಗಳ ಉಡುಪು ಕುರಿತ ವಿಚಾರವಲ್ಲ, ನಿರ್ದಿಷ್ಟ ಒಂದು ಸಮುದಾಯದ ಧರ್ಮಾನುಷ್ಠಾನದ ಮೇಲೆ ನಡೆದ ದಾಳಿಯಾಗಿದೆ ಎಂದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಹಿಸಲಸಾಧ್ಯ
ಸಂವಿಧಾನ ನೀಡಿರುವ ಧಾರ್ಮಿಕ ಸ್ವಾತಂತ್ರ್ಯವನ್ನು ನಿರ್ಲಕ್ಷಿಸಿ, ಭಾವನೆಗಳ ಮೇಲೆ ಘಾಸಿ ಮಾಡಿರುವ ಸರಕಾರದ ಇಂತಹ ವರ್ತನೆ ಸಹಿಸಲು ಸಾಧ್ಯವಿಲ್ಲ. ಪರೀಕ್ಷಾಧಿಕಾರಿಗಳ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕು. ಪುನರಾವರ್ತನೆ ಆಗದಂತೆ ಕಟ್ಟುನಿಟ್ಟಿನ ಮಾರ್ಗ ಜಾರಿಗೊಳಿಸಬೇಕು ಎಂದು ನವೀನ್ ನಾಯಕ್ ಆಗ್ರಹಿಸಿದ್ದಾರೆ.
ಅಪರಾಧ
ಉಪನಯನ ಎಂಬುದು ಕೇವಲ ಧಾರ್ಮಿಕ ಆಚರಣೆ ಅಲ್ಲ. ಅದು ಜೀವನ ಶೈಲಿ, ಜ್ಞಾನಾರ್ಜನೆಯ ಪ್ರಾರಂಭ, ಧರ್ಮ ಮತ್ತು ಕರ್ತವ್ಯದ ದಾರಿ. ಇದರ ಭಾಗವಾಗಿ ಧರಿಸಲಾಗುವ ಜನಿವಾರವನ್ನು ಜ್ಞಾನದ ಕಣ್ಣು ಎಂದು ಬಣ್ಣಿಸಲಾಗುತ್ತದೆ. ಅಂತಹ ಪುಣ್ಯ ಆಚರಣೆಯ ಪ್ರತೀಕವಾದ ಜನಿವಾರವನ್ನು, ಶಿಕ್ಷಣ ಕೇಂದ್ರವೆಂಬ ಜ್ಞಾನ ಮಂದಿರದಲ್ಲಿಯೇ ಬಲವಂತವಾಗಿ ತೆಗೆಸಲಾಗಿದೆ ಎಂದರೆ ಅದು ಕೇವಲ ತಪ್ಪು ಅಲ್ಲ, ಬಲು ದೊಡ್ಡ ಅಪರಾಧ. ಇಲ್ಲಿ ಅಧಿಕಾರಿಗಳ ಮೂಲಕ ಜ್ಞಾನದ ಕಣ್ಣಿಗೆ ಕತ್ತರಿ ಇಡಲಾಗಿದೆ. ಜನಿವಾರವನ್ನು ಬಲವಂತವಾಗಿ ಉದ್ದೇಶ ಪೂರ್ವಕವಾಗಿ ತೆಗೆಸಲಾಗಿದೆ ಎಂದವರು ಹೇಳಿದರು.

ತಕ್ಕ ಪಾಠ ಕಲಿಸಬೇಕಾಗಿದೆ
ಬ್ರಾಹ್ಮಣ ವಿದ್ಯಾರ್ಥಿಗಳ ಉಪನಯನದ ಭಾಗವಾಗಿರುವ ಜನಿವಾರವು ಅವರ ಧಾರ್ಮಿಕ ಮತ್ತು ವೈದಿಕ ಜೀವನದ ಸಂಕೇತ. ಉಪನಯನವು ಜ್ಞಾನೋದಯದ ದ್ವಾರ. ಅದೇ ಜ್ಞಾನದ ಕಚೇರಿಯಂತೆ ಇರಬೇಕಾದ ಪರೀಕ್ಷಾ ಕೊಠಡಿಯಲ್ಲಿ, ವಿದ್ಯಾರ್ಥಿಗಳಿಂದ ಬಲವಂತವಾಗಿ ಜನಿವಾರ ತೆಗೆಸಿದ್ದಾರೆ. ಇದು ಕೇವಲ ಧಾರ್ಮಿಕ ಆಚರಣೆಯ ನಿರಾಕರಣೆ ಅಲ್ಲ, ಜ್ಞಾನದ ಪವಿತ್ರತೆಯ ಅವಮಾನವೂ ಆಗಿದೆ. ಜಾತಿ ಹೆಸರಿನಲ್ಲಿ ರಾಜಕೀಯದ ತೀಟೆ ತೀರಿಸಿಕೊಳ್ಳಲು ಹೊರಟಿರುವ ಕಾಂಗ್ರೆಸ್ ಈಗ ಧರ್ಮದ ಗೌರವದ ಮೇಲೆ ಧುಮುಕಲು ಮುಂದಾಗಿದ್ದಾರೆ. ಇವರಿಗೆ ತಕ್ಕ ಪಾಠ ಕಲಿಸಬೇಕಾಗಿದೆ ಎಂದು ನವೀನ್ ನಾಯಕ್ ತಿಳಿಸಿದ್ದಾರೆ.









