ಆಕೆಯ ಕಥೆಯನ್ನು ಅವಳದ್ದೇ ಮಾತುಗಳಲ್ಲಿ ಕೇಳುತ್ತಾ ನಾನಂತೂ ಕಣ್ಣೀರು ಹಾಕಿದ್ದೇನೆ. ತುಂಬಾನೇ ಸ್ಮಾರ್ಟ್ ಆಗಿರುವ ಮತ್ತು ಅಷ್ಟೇ ಉತ್ಸಾಹಿಯಾಗಿರುವ ಅವಳು ತನ್ನ ಬದುಕಿನ ಕಥೆಯನ್ನು ಹೀಗೆ ಹೇಳುತ್ತಾಳೆ.
ಆಕೆ ವಿರಾಲಿ ಮೋದಿ – ಹುಟ್ಟು ಹೋರಾಟಗಾರ್ತಿ
ನಾನು 14 ವರ್ಷಗಳವರೆಗೆ ಅಮೆರಿಕಾದ ಪೆನ್ಸಿಲ್ವೇನಿಯಾ ನಗರದಲ್ಲಿ ನನ್ನ ಹೆತ್ತವರೊಂದಿಗೆ ನೆಲೆಸಿದ್ದೆ. ಆಕ್ಟಿಂಗ್ ಮತ್ತು ಮಾಡೆಲಿಂಗ್ ನನ್ನ ಕನಸಾಗಿತ್ತು. 2006ರಲ್ಲಿ ಒಂದು ತಿಂಗಳ ರಜೆಯಲ್ಲಿ ಮುಂಬಯಿಯ ನನ್ನ ಅಜ್ಜನ ಮನೆಗೆ ಬಂದಿದ್ದೆ. ರಜೆ ಮುಗಿದು ಮತ್ತೆ ನಾನು ಅಮೇರಿಕಾಕ್ಕೆ ತೆರಳಿದಾಗ ನನಗೆ ತೀವ್ರ ಜ್ವರ ಆರಂಭವಾಯಿತು. ಮಲೇರಿಯ ಇರಬೇಕೆಂದು ವೈದ್ಯರು ಮಾತ್ರೆ ಕೊಟ್ಟು ಕಳಿಸಿದರು. ಮತ್ತೆ ಜ್ವರ ಮತ್ತು ತಲೆನೋವು ಹೆಚ್ಚಾದಾಗ ಕೋಮಾಕ್ಕೆ ತಲುಪಿದೆ.
ಎಂಆರ್‌ಐ ಮತ್ತು ಬೆನ್ನುಮೂಳೆಯ ಪರೀಕ್ಷೆಗಳನ್ನು ವೈದ್ಯರು ಮಾಡಿದರೂ ಯಾವ ಕಾಯಿಲೆ ನನ್ನಲ್ಲಿ ಪತ್ತೆ ಆಗಲಿಲ್ಲ. ಒಮ್ಮೆಯಂತೂ ವೈದ್ಯರು ಬದುಕುವುದು ಕಷ್ಟವೇ ಎಂದು ಘೋಷಣೆ ಕೂಡ ಮಾಡಿದ್ದರು.

ಹಲವು ಬಾರಿ ಸತ್ತು ಬದುಕಿದ್ದೆ
23 ದಿನಗಳ ಕಾಲ ತೀವ್ರವಾದ ಕೋಮಾದಲ್ಲಿ ಮಲಗಿದ್ದೆ. ಬಳಿಕ ಆರೋಗ್ಯದಲ್ಲಿ ಚೇತರಿಕೆ ಕಂಡುಬಂತು. ನನ್ನ ಹುಟ್ಟುಹಬ್ಬದ ದಿನ ನಾನು ಕೋಮಾ ಸ್ಥಿತಿಯಿಂದ ಹೊರಬಂದೆ. ಆದರೆ ನನ್ನ ದುರದೃಷ್ಟ ನೋಡಿ.
ನನ್ನ ಕುತ್ತಿಗೆಯ ಕೆಳಗಿನ ಭಾಗವು ಪೂರ್ತಿ ಪಾರಾಲೈಸ್ ಆಗಿತ್ತು. ಅದು ಮೆದುಳು ಬಳ್ಳಿಯ ವಿಚಿತ್ರವಾದ ಕಾಯಿಲೆ ಎಂದು ವೈದ್ಯರಿಗೆ ತಡವಾಗಿ ಅರಿವಿಗೆ ಬಂತು. ಜೀವನವಿಡೀ ವೀಲ್ ಚೇರ್‌ನಲ್ಲಿ ಕಳೆಯಬೇಕಾದ ಅನಿವಾರ್ಯತೆ. ನನ್ನ ಆಕ್ಟಿಂಗ್, ಮಾಡೆಲಿಂಗ್ ಕನಸುಗಳು ಸುಟ್ಟು ಬೂದಿಯಾಗಿ ಹೋಗಿದ್ದವು. ನನ್ನ ಗೆಳೆಯ, ಗೆಳತಿಯರು ನನ್ನನ್ನು ದೂರ ಮಾಡಿದರು. ಎಷ್ಟೋ ಸಲ ಖಿನ್ನತೆಯಿಂದ ಸಾಯಲು ಹೊರಟಿದ್ದೆ.
ಆದರೆ ನನ್ನ ಅಮ್ಮ ಪ್ರತೀ ಬಾರಿ ಹೇಳುತ್ತಾ ಇದ್ದದ್ದು ಒಂದೇ ಮಾತು – ACCEPT YOURSELF AS YOU ARE. LOVE YOURSELF FIRST! ಮತ್ತೆ ಬದುಕಬೇಕೆಂದು ತೀರ್ಮಾನಕ್ಕೆ ಬರಲು ಅಮ್ಮನ ಇಂತಹ ಮಾತುಗಳೇ ಪ್ರೇರಣೆಯಾದವು. ಮತ್ತೆ ಪೋಷಕರೊಂದಿಗೆ ಭಾರತಕ್ಕೆ ಬಂದು ಇಲ್ಲೇ ನೆಲೆಸುವ ತೀರ್ಮಾನಕ್ಕೆ ಬಂದೆ.
ಟರ್ನಿಂಗ್ ಪಾಯಿಂಟ್
ಒಮ್ಮೆ ನಾನು ದೆಹಲಿಯಿಂದ ಮುಂಬಯಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಹೊತ್ತು ಒಂದು ಘಟನೆ ನಡೆಯಿತು. ವೀಲ್ ಚೇರ್ ಮೇಲೆ ಕುಳಿತಿದ್ದ ನನ್ನನ್ನು ರೈಲಿಂದ ಕೆಳಗಿಳಿಸುವ ಸಂದರ್ಭದಲ್ಲಿ ಅಮ್ಮ ಸಹಾಯಕ್ಕೆ ಕರೆದ ಇಬ್ಬರು ಕೂಲಿಗಳು ನನ್ನ ಮೈಮೇಲೆ ಕೈಹಾಕಿದರು. ನನ್ನ ಜೊತೆ ಅಸಭ್ಯವಾಗಿ ನಡೆದುಕೊಂಡರು. ನನಗೆ ಕಣ್ಣೀರು ಬಂದಿತು. ಭಾರತದಲ್ಲಿ 27 ಮಿಲಿಯನ್ ಮಂದಿ ನನ್ನ ಹಾಗೆ ವಿಶೇಷ ಚೇತನರು ಇದ್ದಾರೆ. ಆದರೆ ಅವರಿಗೆ ನಮ್ಮ ದೇಶದ ರೈಲ್ವೇ ನಿಲ್ದಾಣದಲ್ಲಿ, ಬಸ್ಸು ನಿಲ್ದಾಣಗಳಲ್ಲಿ ರಾಂಪ್ ಅಥವಾ ವೀಲ್ ಚೇರ್ ಸೌಲಭ್ಯಗಳು ಇಲ್ಲ! ಅಂತವರನ್ನು ಕೀಳಾಗಿ ನೋಡುವುದು ತಪ್ಪು. ಅದಕ್ಕಾಗಿ ಸೋಷಿಯಲ್ ಮೀಡಿಯಾದಲ್ಲಿ ‘MY TRAIN TOO’ ಎಂಬ ಹ್ಯಾಷ್ ಟ್ಯಾಗ್ ಸಹಿತ ಒಂದು ಅಭಿಯಾನವನ್ನು ನಾನು ಆರಂಭ ಮಾಡಿದೆ. ಆಗ 10 ಲಕ್ಷ ಮಂದಿ ನನ್ನ ಬೆಂಬಲಕ್ಕೆ ನಿಂತರು. ಪೋಷಕರು ನನ್ನ ಹೆಸರಲ್ಲಿ ಕೋರ್ಟಲ್ಲಿ ಅರ್ಜಿ ಹಾಕಿದರು. ಅಲ್ಲಿಯೂ ನನಗೆ ಜಯ ದೊರೆಯಿತು. ಈಗ ಭಾರತದ ಹೆಚ್ಚಿನ ರೈಲು ನಿಲ್ದಾಣ, ವಿಮಾನ ನಿಲ್ದಾಣಗಳಲ್ಲಿ ಮತ್ತು ಆಯ್ದ ಬಸ್ಸು ನಿಲ್ದಾಣಗಳಲ್ಲಿ ಉಚಿತವಾದ ರಾಂಪ್ ಮತ್ತು ವೀಲ್ ಚೇರ್ ಸೌಲಭ್ಯಗಳನ್ನು ಭಾರತ ಸರಕಾರವು ಮಾಡಲೇಬೇಕಾಯಿತು.
ಇದು ದೇಶದಾದ್ಯಂತ ಎಲ್ಲ ಕಡೆಗಳಲ್ಲಿ ಆಗಬೇಕೆಂದು ನನ್ನ ಪ್ರಯತ್ನ ನಡೆದಿದೆ. ಈ ಅಭಿಯಾನದ ಎರಡನೇ ಭಾಗವಾಗಿ MY RESTAURANT TOO ಅಭಿಯಾನ ಜಾರಿಯಲ್ಲಿದೆ. ಇದರಲ್ಲೂ ಜಯ ದೊರೆಯುವುದು ಖಂಡಿತ ಎಂದು ನನ್ನ ಅಭಿಪ್ರಾಯ.
ಮತ್ತೆ ಜೀವ ಪಡೆದ ಆಕ್ಟಿಂಗ್ ಕನಸು
ನಟಿಸುವ ನನ್ನ ಕನಸನ್ನು ನಾನು ಸಾಯಲು ಬಿಡಲಿಲ್ಲ. 2014ರ ‘ಮಿಸ್ ಇಂಡಿಯಾ ವೀಲ್ ಚೇರ್’ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನವನ್ನು ಗೆದ್ದಿದ್ದೇನೆ. ಮಾಡೆಲಿಂಗ್ ಕ್ಷೇತ್ರದಲ್ಲಿ ಅತ್ಯುತ್ತಮ ಅವಕಾಶ ದೊರೆಯುತ್ತಿವೆ. ಸ್ಟಾರ್ ನಟ ಸಲ್ಮಾನ್ ಖಾನ್ ಅವರ ಸಿನೆಮಾದಲ್ಲಿ ಅಭಿನಯಿಸಿ ಗೆದ್ದು ಬಂದಿದ್ದೇನೆ. ಸ್ಟಾರ್ ನಟರಾದ ಶಾರೂಖ್ ಖಾನ್ ನನ್ನನ್ನು ಸನ್ಮಾನ ಮಾಡಿದ್ದಾರೆ. ಅಮಿತಾಬ್ ಬಚ್ಚನ್ ಅವರ ಕೌನ್ ಬನೆಗಾ ಕರೋಡ್ ಪತಿ ಶೋದಲ್ಲಿ ಭಾಗವಹಿಸಿದ್ದೇನೆ.
2017ರ ಮಹಿಳಾ ಸಾಧಕಿ ಪ್ರಶಸ್ತಿ ಮತ್ತು ರೈಸಿಂಗ್ ಸ್ಟಾರ್ ಪ್ರಶಸ್ತಿಗಳು ನನಗೆ ದೊರೆತಿವೆ. ಬಿಬಿಸಿಯು ತಯಾರಿಸಿದ ಜಗತ್ತಿನ ಅತೀ ಶ್ರೇಷ್ಠ 100 ಮಹಿಳಾ ಸಾಧಕಿಯರ ಪಟ್ಟಿಯಲ್ಲಿ ನನ್ನ ಹೆಸರು ಸೇರ್ಪಡೆ ಆಗಿದೆ. ವೀಲ್ ಚೇರ್ ಮೇಲೆ ಕೂತು ದೇಶದುದ್ದಕ್ಕೂ ಹೋಗುವಾಗ ಪ್ರೌಡ್ ಫೀಲ್ ಆಗುತ್ತದೆ. ನನ್ನ ಅಮ್ಮನ ಒಂದು ಮಾತು ಯಾವಾಗಲೂ ಕಿವಿಯಲ್ಲಿರುತ್ತದೆ “ಬೇಟೀ, ಹಾರ್ ಮತ್ ಮಾನಿಯೆ” ವಿರಾಲಿ ಮೋದಿ ಎಂಬ ಹುಟ್ಟು ಹೋರಾಟದ ಹುಡುಗಿಯ ಸಾಧನೆಯು ನಿಜಕ್ಕೂ ಅಭಿನಂದನೀಯ.











