ಮೇ 18 – 19 : ಅತ್ತೂರು ಕಲ್ಕುಡ ಕ್ಷೇತ್ರದಲ್ಲಿ ಶಿಲಾಮಯ ಗರ್ಭಗೃಹ ಸಮರ್ಪಣೆ

ಹಿಂದೂ ಸಮಾಜ ಒಗ್ಗಟ್ಟಾದಾಗ ಸಮಾಜ ಉದ್ಧಾರ – ಎಂ. ಕೆ. ವಿಜಯ ಕುಮಾರ್‌

ಕಾರ್ಕಳ : ಸಮಾಜದ ಏಳಿಗೆಗಾಗಿ, ಆಧ್ಯಾತ್ಮಿಕ ಜೀವನದ ಕಡೆಗೆ ಪ್ರೇರೇಪಿಸುವ ಸಲುವಾಗಿ, ನಮ್ಮ‌ ನಂಬಿಕೆಯ ಉಳಿವಿಗಾಗಿ ಹಿಂದೂ ಯುವಜನತೆ ಒಗ್ಗಟ್ಟಾಗಬೇಕಾದ ಅಗತ್ಯ ಅತಿಯಾಗಿದೆ. ಹಿಂದೂ ಸಮಾಜ ಜೊತೆಯಾದಾಗ ಮಾತ್ರ ಸಮಾಜ ಉದ್ಧಾರವಾಗುವುದು ಎಂದು ಹಿರಿಯ ನ್ಯಾಯವಾದಿ ಎಂ. ಕೆ. ವಿಜಯ ಕುಮಾರ್‌ ಅಭಿಪ್ರಾಯಪಟ್ಟರು.

ಅತ್ತೂರು ಕೃಷ್ಣಗಿರಿ ಶ್ರೀ ಕಲ್ಕುಡ ದೈವಸ್ಥಾನ ಟ್ರಸ್ಟ್‌, ಅತ್ತೂರು ಪರ್ಪಲೆಗಿರಿ ಪುನರುತ್ಥಾನ ಸಮಿತಿ ನೇತೃತ್ವದಲ್ಲಿ ಮೆ 18 ಹಾಗೂ 19ರಂದು ನಡೆಯಲಿರುವ ಶಿಲಾಮಯ ಗರ್ಭಗೃಹ ಸಮರ್ಪಣೆ ಮತ್ತು ದೈವಬಿಂಬ ಪುನ:ಪ್ರತಿಷ್ಠೆ, ಸಾನಿಧ್ಯ ಕಲಶೋತ್ಸವ ಹಾಗೂ ನೇಮೋತ್ಸವ ಪ್ರಯುಕ್ತ ಎ. 17ರಂದು ಬಂಡಿಮಠ ಶ್ರೀ ಮೂಡು ಮಹಾಗಣಪತಿ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಮಸ್ತ ಹಿಂದೂ ಸಮಾಜವಿದೆ
ಭಾರತಕ್ಕೆ ಬಂದ ವಿದೇಶಿಯರು ಇಲ್ಲಿನ ಧಾರ್ಮಿಕ ಶ್ರದ್ಧಾಕೇಂದ್ರಗಳನ್ನು ಕೆಡವಿದರು. ಗಿರಿಯ ಮೇಲೆಲ್ಲಾ ತಮ್ಮ ಧ್ಚಜ ಸ್ಥಾಪಿಸಿದರು. ಇಂತಹ ಪರಿಸ್ಥಿತಿಯೇ ಅತ್ತೂರು ಪರ್ಪಲೆಯಲ್ಲೂ ನಿರ್ಮಾಣವಾಗಿತ್ತು. ಇದು ಅತಿರೇಕವಾಗಿ ಸರಕಾರಿ ಜಾಗವನ್ನು ಕಬಳಿಸುವ ಮಟ್ಟಕ್ಕೆ ಸಾಗಿತು. ಇದನ್ನೆಲ್ಲಾ ಕಡಿವಾಣ ಹಾಕಬೇಕೆಂಬ ನಿಟ್ಟಿನಲ್ಲಿ‌ ಸುಭಾಷ್ ಚಂದ್ರ ಹೆಗ್ಡೆ ಸೇರಿದಂತೆ ಅನೇಕರು ದಿಟ್ಟ ನಿರ್ಧಾರ ಕೈಗೊಂಡಿದ್ದು, ಅವರೊಂದಿಗೆ ಸಮಸ್ತ ಹಿಂದೂ ಸಮಾಜವಿದೆ ಎಂದು ಎಂ. ಕೆ. ವಿಜಯ ಕುಮಾರ್‌ ಹೇಳಿದರು.

ಪರ್ಪಲೆಗಿರಿ ಪುನರುತ್ಥಾನ ಸಮಿತಿ ಅಧ್ಯಕ್ಷ ರವೀಂದ್ರ ಶೆಟ್ಟಿ ಬಜಗೋಳಿ ಮಾತನಾಡಿ, ಪ್ರಸ್ತುತ ಕಾಲಘಟ್ಟದಲ್ಲಿ ಬಹುತೇಕ ದೇವಸ್ಥಾನಗಳು ಜೀರ್ಣೋದ್ಧಾರಗೊಳ್ಳುತ್ತಿದೆ. ಸಮಸ್ತ ಹಿಂದೂ ಸಮಾಜ ರಾಜಕೀಯ, ಜಾತಿಯನ್ನು ಬದಿಗಿರಿಸಿ ದೈವಸ್ಥಾನದ ಪುನರುತ್ಥಾನ ಕಾರ್ಯದಲ್ಲಿ ಭಾಗಿಗಳಾಗೋಣ ಎಂದರು.

ಎ. 20ರಂದು ಆಮಂತ್ರಣ ಬಿಡುಗಡೆ
ಎ. 20ರಂದು ಪರ್ಪಲೆಗಿರಿಯಲ್ಲಿ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಿದ್ದಾರೆ. ಮೇ 18-19 ರಂದು ಕ್ಷೇತ್ರಕ್ಕೆ ಕಾರ್ಕಳದವರು ಮಾತ್ರವಲ್ಲದೇ ವಿವಿಧೆಡೆಯಿಂದ ಭಕ್ತಾದಿಗಳು ಆಗಮಿಸುತ್ತಾರೆ. ಈ ನಿಟ್ಟಿನಲ್ಲಿ ಪೂರಕ ಕ್ರಮಗಳನ್ನು ವಹಿಸುವುದು ಅವಶ್ಯವೆಂದರು.

ಹಿಂದೂಗಳ ಐಕ್ಯತೆ
ಅತ್ತೂರು ಕೃಷ್ಣಗಿರಿ ಶ್ರೀ ಕಲ್ಕುಡ ದೈವಸ್ಥಾನದ ಟ್ರಸ್ಟ್ ಅಧ್ಯಕ್ಷ ಸುಭಾಷ್ ಚಂದ್ರ ಹೆಗ್ಡೆ ಮಾತನಾಡಿ, 2011ರಲ್ಲಿ ಹಿಂದೂ ಸಮಾಜದ ಸಹಕಾರದಿಂದ ದೈವಸ್ಥಾನಕ್ಕೆ ಜಾಗ ಖರೀದಿಸಲಾಗಿತ್ತು. ಆ ಬಳಿಕ ಸೇವಾ ರೂಪದಲ್ಲಿ ಭಕ್ತಾದಿಗಳು ದೊಡ್ಡ ಪ್ರಮಾಣದಲ್ಲಿ ಸಹಕಾರ ನೀಡುತ್ತಿದ್ದಾರೆ. ದೈವಸ್ಥಾನ ನಿರ್ಮಾಣದೊಂದಿಗೆ ಹಿಂದೂಗಳ ಐಕ್ಯತೆ ಸಾಧ್ಯವಾಗಲಿದೆ ಎಂದರು.

ಪರ್ಪಲೆಗಿರಿ ಕಲ್ಕುಡ ದೈವಸ್ಥಾನ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಸತ್ಯೆಂದ್ರ ಭಟ್, ಸದಸ್ಯರಾದ ಮನ್ಮಥ ಶೆಟ್ಟಿ, ಕಲ್ಕುಡ ಪುನರುತ್ಥಾನ ಸಮಿತಿ ಕಾರ್ಯಾಧ್ಯಕ್ಷ ಬೋಳ ಪ್ರಶಾಂತ್ ಕಾಮತ್, ಕೋಶಾಧಿಕಾರಿ ನಿತ್ಯಾನಂದ ಪೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರೇಷ್ಮಾ, ಜಯಲಕ್ಷ್ಮೀ, ಪ್ರೀತಿ ಪ್ರಾರ್ಥಿಸಿದರು. ನಂದ ಕುಮಾರ್ ಸ್ವಾಗತಿಸಿ, ಕಾರ್ಯಕ್ರಮ‌ ನಿರ್ವಹಿಸಿದರು.



































































































error: Content is protected !!
Scroll to Top