ಸಿವಿಲ್ ನ್ಯಾಯಾಲಯಗಳ ತೀರ್ಪು ಮತ್ತು ಆದೇಶಗಳ ಪರಿಪಾಲನೆ

ಸಿವಿಲ್ ವ್ಯವಹಾರ ಮತ್ತು ಸಿವಿಲ್ ನ್ಯಾಯಾಲಯಗಳ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಸಿವಿಲ್ ಪ್ರಕ್ರಿಯಾ ಸಂಹಿತೆ 1908 (ಸಿವಿಲ್ ಪ್ರೊಸೀಜರ್ ಕೋಡ್) ಎಂಬ ಕಾನೂನನ್ನು 1909 ಜನವರಿ 1 ರಿಂದ ನಮ್ಮ ದೇಶದಲ್ಲಿ ಜಾರಿಗೆ ತರಲಾಗಿದೆ. ಈ ಕಾನೂನು ನಾಗಾರಿಕಾ ವಿವಾದಗಳನ್ನು ಬಗೆಹರಿಸಲು ಕಾನೂನು ಕ್ರಮಕ್ಕೆ ಉಪಕ್ರಮಿಸಲು ಅವಕಾಶವನ್ನು ಒದಗಿಸಿ ಒಂದು ನ್ಯಾಯಿಕ ಉದ್ಗೋಷದಲ್ಲಿ ಕೊನೆಗೊಳ್ಳುತ್ತದೆ. ಈ ಕಾನೂನಿನ ಪ್ರಕಾರ ಸಿವಿಲ್ ನ್ಯಾಯಾಲಯಗಳು ದಾವೆಯಲ್ಲಿ ವಿವಾದಾಸ್ಪಕವಾಗಿರುವ ಯಾವುದೇ ಮತ್ತು ಎಲ್ಲಾ ವಿಷಯಗಳಿಗೆ ಸಂಬಂಧಿಸಿದಂತೆ ಹಾಗೂ ಪಕ್ಷಕಾರರ ಹಕ್ಕುಗಳನ್ನು ನಿರ್ಣಾಯಕವಾಗಿ ನಿರ್ಧರಿಸಿ ಔಪಚಾರಿಕವಾಗಿ ಪ್ರಕಟಿಸುವ ತೀರ್ಮಾನಕ್ಕೆ ‘ಡಿಕ್ರಿ’ ಎನ್ನುತ್ತಾರೆ.

ಸಿವಿಲ್ ನ್ಯಾಯಾಲಯಗಳು ಪ್ರಕಟಿಸುವ ಡಿಕ್ರಿ ಮತ್ತು ಆದೇಶಗಳನ್ನು ಅನುಷ್ಠಾನಗೊಳಿಸುವ ಕಾನೂನಿನ ಪ್ರಕ್ರಿಯೆಯನ್ನು ‘ಅಮಲ್ಜಾರಿ’ (ಎಕ್ಸಿಕ್ಯೂಷನ್) ಎನ್ನುತ್ತಾರೆ. ಸಿವಿಲ್ ನ್ಯಾಯಾಲಯಗಳ ಡಿಕ್ರಿ ಮತ್ತು ಆದೇಶಗಳನ್ನು ಯಾವ ರೀತಿಯಲ್ಲಿ ಅಮಲ್ಜಾರಿ ಮಾಡಬೇಕು ಎಂಬುವುದನ್ನು ಸಿವಿಲ್ ಪ್ರಕ್ರಿಯಾ ಸಂಹಿತೆಯ ಕ್ರಮಾಂಕ 21ರಲ್ಲಿನ ನಿಯಮ 1ರಿಂದ 106ರಲ್ಲಿ ವಿವರಿಸಲಾಗಿರುತ್ತದೆ. ಇದರಲ್ಲಿ ಸಿವಿಲ್ ನ್ಯಾಯಾಲಯಗಳು ಜಾರಿಗೊಳಿಸಬಹುದಾದ ಡಿಕ್ರಿಗಳು, ಡಿಕ್ರಿಗಳ ವರ್ಗಾವಣೆ, ಡಿಕ್ರಿಯನ್ನು ಅಮಲ್ಜಾರಿಗೊಳಿಸುವಾಗ ಉಂಟಾಗಬಹುದಾದ ಅಡ್ಡಿ ಆತಂಕಗಳ ನಿವಾರಣೆ, ಡಿಕ್ರಿಯನ್ನು ಜಾರಿಗೊಳಿಸಲು ಅನುಸರಿಸಬೇಕಾದ ಕ್ರಮ, ಜಪ್ತಿ, ಮಾರಾಟ, ಆಸ್ತಿಯ ಹಂಚಿಕೆ ಇತ್ಯಾದಿಗಳ ಬಗ್ಗೆ ವಿವರವಾಗಿ ತಿಳಿಸಲಾಗಿದೆ.

ಯಾವುದೇ ಒಂದು ಡಿಕ್ರಿಯನ್ನು, ಅದನ್ನು ಮಾಡಿದ ನ್ಯಾಯಾಲಯವಾಗಲೀ ಅಥವಾ ಅದನ್ನು ಅಮಲ್ಜಾರಿಗಾಗಿ ಕಳುಹಿಸಲಾದ ನ್ಯಾಯಾಲಯವಾಗಲೀ ಅಮಲ್ಜಾರಿ ಮಾಡಬಹುದು. ಡಿಕ್ರಿಯನ್ನು ಮಾಡಿದ ನ್ಯಾಯಾಲಯವು, ಡಿಕ್ರಿದಾರನ ಅರ್ಜಿಯ ಮೇರೆಗೆ ಮೇಲ್ಕಾಣಿಸಿದ ಕಾನೂನಿನಲ್ಲಿ ವಿವರಿಸಿದ ಸಂದರ್ಭಕ್ಕನುಸಾರವಾಗಿ ರಾಜ್ಯದ ಒಳಗಿನ ಅಥವಾ ದೇಶದ ಯಾವುದೇ ರಾಜ್ಯದಲ್ಲಿರುವ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಬಹುದಾಗಿದೆ. ಮಾತ್ರವಲ್ಲದೆ ಅಗತ್ಯವಿದ್ದಲ್ಲಿ ಕೇಂದ್ರ ಸರಕಾರದ ಪ್ರಾಧಿಕಾರದಿಂದ ಭಾರತ ದೇಶದ ಹೊರಗಡೆ ಸ್ಥಾಪಿತವಾಗಿರುವ ಯಾವುದೇ ನ್ಯಾಯಾಲಯಕ್ಕೆ ಮೇಲ್ಕಾಣಿಸಿದ ಕಾನೂನಿನ ನಿಯಮಗಳಿಗನುಸಾರವಾಗಿ ಡಿಕ್ರಿಯನ್ನು ಅಮಲ್ಜಾರಿಗಾಗಿ ಕಳುಹಿಸಬಹುದಾಗಿದೆ. ಡಿಕ್ರಿಯನ್ನು ಅಮಲ್ಜಾರಿ ಮಾಡುವ ಸಂದರ್ಭದಲ್ಲಿ ಯಾವ ದಾವೆಯಲ್ಲಿ ಡಿಕ್ರಿಯನ್ನು ಮಾಡಲಾಯಿತೋ ಆ ದಾವೆಯ ಪಕ್ಷಕಾರದ ಅಥವಾ ಅವರ ಪ್ರತಿನಿಧಿಗಳ ನಡುವೆ ಉಧ್ಭವಿಸುವ ಮತ್ತು ಡಿಕ್ರಿಯ ಅಮಲ್ಜಾರಿಗೆ ವಿಮೋಚನೆಗೆ ಅಥವಾ ಸಮಾಧಾನಕ್ಕೆ ಸಂಬಂಧಿಸಿದ ಎಲ್ಲ ಪ್ರಶ್ನೆಗಳನ್ನು ಡಿಕ್ರಿಯನ್ನು ಅಮಲ್ಜಾರಿ ಮಾಡುವ ನ್ಯಾಯಾಲಯವು ಅವಲೋಕಿಸಿ ನಿರ್ಧರಿಸಬೇಕಾಗುತ್ತದೆ. ಒಂದು ವೇಳೆ ಡಿಕ್ರಿಯನ್ನು ಅನುಷ್ಠಾನಗೊಳಿಸುವ ಮುಂಚೆಯೇ ಡಿಕ್ರಿದಾರರು ಅಥವಾ ಅವರ ಎದುರುದಾರರು ಮರಣಪಟ್ಟಲ್ಲಿ ಕೆಲವು ಸಂದರ್ಭಕ್ಕನುಗುಣವಾಗಿ ಪಕ್ಷಗಾರರ ಮೃತ ಕಾನೂನು ಸಮ್ಮತ ಪ್ರತಿನಿಧಿಗಳ ವಿರುದ್ಧ ಡಿಕ್ರಿಯ ಶರ್ತಗಳು ಬದ್ಧೀಕೃತವಾಗಿರುತ್ತದೆ.

ಕೆಲವು ಷರತ್ತುಗಳಿಗೆ ಮತ್ತು ಪರಿಮಿತಿಗಳಿಗೆ ಒಳಪಟ್ಟು ಡಿಕ್ರಿದಾರಕನ ಅರ್ಜಿಯ ಮೇರೆಗೆ ನ್ಯಾಯಾಲಯವು ನಿರ್ದಿಷ್ಟವಾಗಿ ಡಿಕ್ರಿ ಮಾಡಲಾದ ಯಾವುದೇ ಸ್ವತ್ತನ್ನು ವಶಕ್ಕೆ ತೆಗೆದುಕೊಳ್ಳುವ ಮೂಲಕ ಅಥವಾ ಯಾವುದೇ ಸ್ವತ್ತಿನ ಜಪ್ತಿಯ ಮತ್ತು ಮಾರಾಟದ ಮೂಲಕ ಅಥವಾ ಅದನ್ನು ಜಪ್ತಿ ಮಾಡದೆ ಮಾರಾಟ ಮಾಡುವ ಮೂಲಕ ಅಥವಾ 158ನೇ ಪ್ರಕರಣದ ಮೇರೆಗೆ ದಸ್ತಗಿರಿಗೆ ಮತ್ತು ವಿರೋಧಕ್ಕೆ ಅವಕಾಶವಿರುವಲ್ಲಿ ಈ ಪ್ರಕರಣದಲ್ಲಿ ನಿರ್ದಿಷ್ಟಪಡಿಸಿದ ಅವಧಿಗೆ ಮೀರದ ಅವಧಿಯವರೆಗೆ ದಸ್ತಗಿರಿ ಮಾಡಿ ಜೈಲಿಗೆ ಕಳುಹಿಸುವ ಮೂಲಕ, ಕೋರ್ಟು ರಿಸೀವರನ್ನು ನೇಮಿಸುವುದರ ಮೂಲಕ ಅಥವಾ ಡಿಕ್ರಿಯ ಸ್ವರೂಪಕ್ಕೆ ಅನುಗುಣವಾದಂತಹ ಇತರ ರೀತಿಯಲ್ಲಿ ಡಿಕ್ರಿಯನ್ನು ಅಮಲ್ಜಾರಿಗೊಳಿಸಬಹುದು. ಅದೇ ರೀತಿಯಾಗಿ ಯಾವುದೇ ಆಸ್ತಿಯ ವಿಭಜನೆ ಅಥವಾ ಪ್ರತ್ಯೇಕೀಕರಣಕ್ಕೆ ಸಂಬಂಧಿಸಿದ ಡಿಕ್ರಿಯನ್ನು ಅನುಷ್ಠಾನಗೊಳಿಸಬೇಕಾಗುವ ಸಂದರ್ಭದಲ್ಲಿ ನ್ಯಾಯಾಲಯವು ಕೆಲವು ಷರತ್ತುಗಳಿಗೆ ಮತ್ತು ಪರಿಮಿತಿಗಳಿಗೆ ಒಳಪಟ್ಟು ಆಸ್ತಿಯ ವಿಭಜನೆಯ ಪ್ರಕ್ರಿಯೆಯ ಜವಾಬ್ದಾರಿಯನ್ನು ಸಂಬಂಧಪಟ್ಟ ಕಂದಾಯ ಅಧಿಕಾರಿಗಳಿಗೆ ಅಥವಾ ನ್ಯಾಯಾಲಯದಿಂದ ನೇಮಿಸಲ್ಪಡುವ ಕೋರ್ಟು ಕಮೀಷನರ್‌ಗೆ ವಹಿಸಿಕೊಡಬಹುದಾಗಿದೆ.

ಡಿಕ್ರಿಯನ್ನು ಅಮಲ್ಜಾರಿಗೊಳಿಸುವ ಸಂದರ್ಭದಲ್ಲಿ ಸಬಂಧಪಟ್ಟ ವ್ಯಕ್ತಿ (ತೀರ್ಪುಋಣಿ) ಉದ್ದೇಶ ಪೂರ್ವಕವಾಗಿ ಡಿಕ್ರಿಯ ಶರ್ತಗಳನ್ನು ಉಲ್ಲಂಘಿಸಿದಲ್ಲಿ ಅಥವಾ ಡಿಕ್ರಿ ಪ್ರಕಾರ ತಾನು ನೀಡಬೇಕಾದ ಹಣವನ್ನು ಪಾವತಿಸಲು ನಿರಾಕರಿಸಿದಲ್ಲಿ ನ್ಯಾಯಾಲಯವು ಅಂತಹ ವ್ಯಕ್ತಿಯನ್ನು ಬಂಧಿಸಿ ಸಿವಿಲ್ ಬಂದೀಖಾನೆಗೆ ಕಳುಹಿಸುವಂತೆ ಆದೇಶಿಸಬಹುದಾಗಿದೆ. ಆದರೆ ಹಣಕಾಸಿಗೆ ಸಂಬಂಧಪಟ್ಟ ಡಿಕ್ರಿಯನ್ನು ಅಮಲ್ಜಾರಿಗೊಳಿಸುವ ಸಂದರ್ಭದಲ್ಲಿ ಯಾವುದೇ ಮಹಿಳೆಯನ್ನು ಬಂಧಿಸುವಂತೆ ಆದೇಶವನ್ನು ನೀಡುವ ಅಧಿಕಾರವು ನ್ಯಾಯಾಲಯಕ್ಕೆ ಇರುವುದಿಲ್ಲ. ಆದರೆ ಮಹಿಳೆಯು ಆತಳ ಹೆಸರಿನಲ್ಲಿ ಹೊಂದಿರುವ ಯಾವುದೇ ಚರಾಸ್ತಿ ಅಥವಾ ಸ್ಥಿರಾಸ್ತಿಯನ್ನು ಜಪ್ತಿಮಾಡುವ ಇಲ್ಲವೆ ಮಾರಾಟ ಮಾಡುವಂತೆ ನ್ಯಾಯಾಲಯವು ಆದೇಶಿಸಬಹುದಾಗಿದೆ. ಕೋರ್ಟು ಡಿಕ್ರಿಯನ್ನು ಅಮಲ್ಜಾರಿಗೊಳಿಸುವ ಸಂದರ್ಭದಲ್ಲಿ ಡಿಕ್ರಿಯ ಶರ್ತವನ್ನು ಪಾಲಿಸಬೇಕಾದ ವ್ಯಕ್ತಿಯ ಹೆಂಡತಿ ಮತ್ತು ಮಕ್ಕಳು ಅವಶ್ಯಕವಾದ ಧರಿಸುವ ಉಡುಪುಗಳು, ಅಡಿಗೆ ಪಾತ್ರೆಗಳು, ಹಾಸಿಗೆಗಳು ಮತ್ತು ದಿನಬಳಕೆಯ ಸಾಮಾನುಗಳು ಮತ್ತು ಯಾವುದೇ ಮಹಿಳೆಯು ತನ್ನ ಮಹಾಚರಣೆಯ ಪ್ರಕಾರ ಬಿಟ್ಟುಕೊಡಲಾಗದಂತ ವೈಯಕ್ತಿಕ ಒಡವೆಗಳು, ಕುಶಲ ಕರ್ಮಿಗಳ ಉಪಕರಣಗಳು ಮತ್ತು ಬೇಸಾಯದ ಸಲಕರಣೆಗಳು ಮತ್ತು ಜೀವನೋಪಾಯಕ್ಕೆ ಅವಶ್ಯಕವಾಗಿರುವಂತಹ ಜಾನುವಾರು ಮತ್ತು ಬಿತ್ತನೆ ಬೀಜ ಇತ್ಯಾದಿಗಳನ್ನು ಜಪ್ತಿ ಮಾಡುವಂತಿಲ್ಲ.























































error: Content is protected !!
Scroll to Top