ಬಿಜೆಪಿಯವರಿಗೆ ಹೈನುಗಾರಿಕೆ ಕಷ್ಟದ ಅರಿವಿಲ್ಲ – ಬಿಪಿನ್‌ ಚಂದ್ರಪಾಲ್‌

ಕಾರ್ಕಳ : ಹೆತ್ತಬ್ಬೆಗಷ್ಟೆ ಹೆರಿಗೆಯ ನೋವು ಗೊತ್ತು. ಹಸುವನ್ನು ಗೋಮಾತೆ ಎಂದು ಪೂಜಿಸುವುದಷ್ಟೇ ಗೊತ್ತಿರುವ ಬಿಜೆಪಿಯವರಿಗೆ ಹೈನುಗಾರಿಕೆಯ ಕಷ್ಟದ ಅರಿವಿರಲು ಸಾಧ್ಯವಿಲ್ಲ. ಆದ್ದರಿಂದ ಅವರು ಹಾಲಿನ ಬೆಲೆ ಏರಿಕೆಯನ್ನು ವಿರೋಧಿಸುತ್ತಿದ್ದಾರೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನ್‌ಚಂದ್ರ ಪಾಲ್ ನಕ್ರೆ ಹೇಳಿದ್ದಾರೆ.

ವಾಸ್ತವದಲ್ಲಿ ರಾಜ್ಯದ ರೈತರ ಬೇಡಿಕೆಯಂತೆ ಹೈನುಗಾರಿಕೆಯನ್ನು ಲಾಭದಾಯಕವನ್ನಾಗಿಸುವ ಗುರಿಯೊಂದಿಗೆ ಬೆಲೆ ಏರಿಕೆ ಮಾಡಲಾಗಿದೆಯೇ ಹೊರತು ಇದರಲ್ಲಿ ರಾಜ್ಯ ಸರಕಾರಕ್ಕೆ ಲಾಭದ ಪಾಲಿಲ್ಲ. ಹೆಚ್ಚುವರಿ ಹಣ ನೇರವಾಗಿ ಹಾಲು ಉತ್ಪಾದಕರ ಖಾತೆಗೆ ಸಲ್ಲುತ್ತದೆ ಎನ್ನುವುದು ಬಹು:ಶ ಪ್ರತಿಭಟನಾಗಾರರಿಗೆ ತಿಳಿದಿಲ್ಲ. ಈ ಬಗ್ಗೆ ಕೆಎಂಎಫ್ ರಾಜ್ಯದ ಜನತೆಗೆ ಯಾತಾರ್ಥ ಮಾಹಿತಿ ನೀಡುವಲ್ಲಿ ಎಡವಿದೆ. ಲೀಟರಿಗೆ 4 ರೂ. ಹೆಚ್ಚಳದ ಹೊರತಾಗಿಯೂ ಅತಿ ಕಡಿಮೆ ದರದಲ್ಲಿ ದೇಶಾದ್ಯಂತ ಹಾಲು ಸರಬರಾಜು ಆಗುವುದೇ ಕರ್ನಾಟಕದಲ್ಲಿ ಎನ್ನುವುದು ಇಲ್ಲಿ ಉಲ್ಲೇಖನೀಯ ಎಂದು ಹೇಳಿದರು.

ವಿಷಾದನೀಯ
ಪ್ರಸಕ್ತ ಪರಿಸ್ಥಿತಿಯಲ್ಲಿ ಬೆಲೆ ಏರಿಕೆ ಅನಿವಾರ್ಯ. ಪಶು ಸಾಕಣೆಗೆ ಪೂರಕವಾದ ಪಶು ಆಹಾರ, ಹುಲ್ಲು, ಕೂಲಿ ಇತರೆ ವಸ್ತುಗಳ ಬೆಲೆ ಏರಿಕೆ, ವಾತಾವರಣ ವೈಪರೀತ್ಯದ ಕಾಯಿಲೆಗಳು, ಹಸುಗಳ ಬಂಜೆತನ ಮೊದಲಾದ ಹತ್ತು ಹಲವು ಕಾರಣಗಳಿಂದ ಹೈನುಗಾರಿಕೆ ಲಾಭದಾಯಕವಾಗಿ ಉಳಿದಿಲ್ಲ. ಇದನ್ನು ಲಾಭದಾಯಕಗೊಳಿಸುವುದು ಜನಪರ ಸರಕಾರದ ಕರ್ತವ್ಯ. ಇದು ಗೊತ್ತಿದ್ದೂ ಇದನ್ನು ಪ್ರತಿಭಟಿಸುವ ಹಿಂದೆ ಬಿಜೆಪಿಗೆ ಅದರದ್ದೇ ಆದ ರಾಜಕೀಯ ಕಾರ್ಯಸೂಚಿ ಅಡಗಿದೆ. ಕಳೆದ ಬಾರಿ ನಷ್ಟದಲ್ಲಿರುವ ಗುಜರಾತ್ ಮೂಲದ “ಅಮೂಲ್” ಸಂಸ್ಥೆಯೊಂದಿಗೆ ಕೆಎಂಎಫ್‌ನ್ನು ಲೀನಗೊಳಿಸುವ ವ್ಯವಸ್ಥಿತ ಹುನ್ನಾರದಲ್ಲಿ ಸೋತಿದ್ದ ಬಿಜೆಪಿ ಇದೀಗ ಬೆಲೆ ಏರಿಕೆಯನ್ನು ಅಸ್ತ್ರವಾಗಿ ಬಳಸಿ ರಾಜಕೀಯ ಮಾಡುತ್ತಿರುವುದು ವಿಷಾದನೀಯ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.











































































error: Content is protected !!
Scroll to Top