ನೇತ್ರ ತಪಾಸಣೆ ಮತ್ತು ಪೊರೆ ಶಸ್ತ್ರ ಚಿಕಿತ್ಸೆ ಶಿಬಿರ

ಆರೋಗ್ಯ ಕುರಿತಂತೆ ಜಾಗೃತಿ ಅವಶ್ಯ – ಡಾ. ಸಂದೀಪ್‌ ಕುಡ್ವ

ಕಾರ್ಕಳ : ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಉಡುಪಿ, ಕರ್ನಾಟಕ ಸರಕಾರಿ ನೌಕರರ ಸಂಘ ಕಾರ್ಕಳ, ತಾಲೂಕು ಸಾರ್ವಜನಿಕ ಆಸ್ಪತ್ರೆ, ಕಾರ್ಕಳ ಯುವವಾಹಿನಿ (ರಿ.), ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಅಂಧತ್ವ ನಿವಾರಣಾ ವಿಭಾಗ) ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಮಾ. 9ರಂದು ಬಂಡೀಮಠದಲ್ಲಿರುವ ಸರಕಾರಿ ನೌಕರರ ಭವನದಲ್ಲಿ ಉಚಿತವಾಗಿ ನೇತ್ರ ತಪಾಸಣೆ ಮತ್ತು ಪೊರೆ ಶಸ್ತ್ರ ಚಿಕಿತ್ಸೆ ಶಿಬಿರ, ಉಡುಪಿ ಜಿಲ್ಲಾ ಅಂಧತ್ವ ನಿವಾರಣಾ ವಿಭಾಗದಿಂದ ಆಯ್ದ ಫಲಾನುಭವಿಗಳಿಗೆ ಉಚಿತ ಕನ್ನಡಕ ವಿತರಣೆ ನಡೆಯಿತು.

ತಾಲೂಕು ವೈಧ್ಯಾಧಿಕಾರಿ ಡಾ. ಸಂದೀಪ್ ಕುಡ್ವ ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಇದೇ ಸಂದರ್ಭ ದಾನಿಗಳು ಹಾಗೂ ಸಂಘದ ನಿರ್ದೇಶಕರ ಸಹಕಾರದಿಂದ ಸಂಘಕ್ಕೆ ಕೊಡುಗೆಯಾಗಿ ನೀಡಿದ ಧ್ವನಿವರ್ಧಕವನ್ನು ಅನಾವರಣಗೊಳಿಸಲಾಯಿತು. ಬಳಿಕ ಮಾತನಾಡಿದ ಅವರು ಆರೋಗ್ಯ ಕುರಿತಂತೆ ಜಾಗೃತಿ ಅವಶ್ಯ. ಕಣ್ಣಿನ ರಕ್ಷಣೆ ಮತ್ತು ಇಂದಿನ ದಿನಗಳಲ್ಲಿ ಮೊಬೈಲ್ ಬಳಕೆಯಿಂದುಂಟಾಗುವ ಕಣ್ಣಿನ ತೊಂದರೆಯ ಬಗ್ಗೆ ಜನರಿಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ನೌಕರ ಸಂಘದ ಆರೋಗ್ಯ ತಪಾಸಣಾ ಶಿಬಿರ ಅಭಿನಂದನಾರ್ಹ ಎಂದರು.

ಯುವ ವಾಹಿನಿ ಕಾರ್ಕಳ ಘಟಕ ಅಧ್ಯಕ್ಷೆ ಮಮತಾ ಅಂಚನ್ ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿ ಮೋಹನ್ ಸಂದರ್ಭೋಚಿತವಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನೌಕರರ ಸಂಘದ ಅಧ್ಯಕ್ಷ ಬಾಲಕೃಷ್ಣ ಎನ್. ಮಾತನಾಡಿ, ಎಲ್ಲರ ಸಹಕಾರ, ಪ್ರೋತ್ಸಾಹ ಇದ್ದಾಗ ಮಾತ್ರ ಒಳ್ಳೆಯ ಕಾರ್ಯಕ್ರಮ ಯಶಸ್ವಿಯಾಗಲು ಸಾಧ್ಯ ಎಂದ ಅವರು ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

145 ಫಲಾನುಭವಿಗಳು ಶಿಬಿರದ ಸದುಪಯೋಗ ಪಡೆದುಕೊಂಡರು. 94 ಜನರಿಗೆ ಉಚಿತ ಕನ್ನಡಕ ವಿತರಿಸಲಾಯಿತು. 15 ಜನ ಕಣ್ಣಿನ ಪೊರೆ ಚಿಕಿತ್ಸೆಗೆ ಆಯ್ಕೆಯಾದವರನ್ನು ಮಾ. 22ರಂದು ಶಸ್ತ್ರ ಚಿಕಿತ್ಸೆಗೆ ವ್ಯವಸ್ಥೆಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಉಡುಪಿ ಪ್ರಸಾದ್ ನೇತ್ರಾಲಯದ ನೇತ್ರ ತಜ್ಞೆ ಡಾ. ಪ್ರತಿಭಾ ಎಸ್. ನಾಯಕ್ ಉಪಸ್ಥಿತರಿದ್ದರು. ಸಾಂಸ್ಕೃತಿಕ ಕಾರ್ಯದರ್ಶಿ ವಸಂತಿ ಹೆಚ್. ಜಿ. ಪ್ರಾರ್ಥಿಸಿದರು. ಹಿರಿಯ ಉಪಾಧ್ಯಕ್ಷ ನರಸಿಂಹವರ್ಧನ್ ಸ್ವಾಗತಿಸಿದರು. ಕಾರ್ಯದರ್ಶಿ ಗೀತಾ ಕೆ. ನಿರೂಪಿಸಿ, ಜೊತೆ ಕಾರ್ಯದರ್ಶಿ ಗುಣಪಾಲ ಜೈನ್ ವಂದಿಸಿದರು.









































































































error: Content is protected !!
Scroll to Top