ಸರಕಾರ ಯಾರನ್ನೋ ರಕ್ಷಣೆ ಮಾಡುವ ಪ್ರಯತ್ನ ನಡೆಸುತ್ತಿದೆ – ಸುನಿಲ್ ಕುಮಾರ್
ಬೆಂಗಳೂರು : ಚಿತ್ರ ನಟಿ ರನ್ಯಾ ರಾವ್ ವಿರುದ್ಧ ಕೇಳಿ ಬಂದಿರುವ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣ ಸದನದಲ್ಲಿ ಸದ್ದು ಮಾಡಿದೆ. ಶೂನ್ಯ ವೇಳೆಯಲ್ಲಿ ಬಿಜೆಪಿ ಸದಸ್ಯ ಸುನೀಲ್ ಕುಮಾರ್ ಈ ವಿಚಾರ ಪ್ರಸ್ತಾಪ ಮಾಡಿ, ರಾಜ್ಯ ಸರ್ಕಾರ ಯಾರನ್ನೋ ರಕ್ಷಣೆ ಮಾಡುವ ಪ್ರಯತ್ನ ನಡೆಸುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.
ಈ ಪ್ರಕರಣದಲ್ಲಿ ಸಚಿವರ ಕೈವಾಡ ಇದೆ ಎಂಬ ಆರೋಪವಿದೆ. ಪ್ರಭಾವಿ ವ್ಯಕ್ತಿಗಳು ಯಾರು, ಅಧಿಕಾರಿಗಳು ಯಾರು? ಸಚಿವರು ಯಾರು ಎಂಬುದು ಬಹಿರಂಗವಾಗಲಿ. ಇಂತಹ ಮಾಫಿಯಾ ಮಟ್ಟ ಹಾಕಬೇಕು. ಚಿನ್ನ ಸ್ಮಗ್ಲಿಂಗ್ ನಲ್ಲಿ ಈ ಸರ್ಕಾರದ ಕೈವಾಡ ಇದ್ಯಾ ಎಂದು ಸುನಿಲ್ ಕುಮಾರ್ ಗಂಭೀರವಾಗಿ ಅನುಮಾನ ವ್ಯಕ್ತಪಡಿಸಿದರು.

ಹಿರಿಯ ಅಧಿಕಾರಿಗೆ ಪೊಲೀಸರು ಸಹಾಯಕ್ಕೆ ಬರುವುದು ಸರಿ. ಆದರೆ ಪೊಲೀಸ್ ಅಧಿಕಾರಿಯ ಪುತ್ರಿಗೆ ಪೊಲೀಸರು ಹೇಗೆ ಪ್ರೊಟೋಕಾಲ್ ಕೊಡ್ತಾರೆ. ಪೊಲೀಸ್ ಜೀಪ್ ಹೇಗೆ ಬಳಸುತ್ತಾರೆ ಎಂದು ಪ್ರಶ್ನಿಸಿದ ಸುನಿಲ್ ಕುಮಾರ್ ಸರಕಾರಕ್ಕೆ ಗೊತ್ತಿಲ್ಲ ಎಂದರೆ ಹೇಗೆ? ಇಷ್ಟೊಂದು ಪ್ರಮಾಣದಲ್ಲಿ ಚಿನ್ನ ಸಾಗಾಟ ಆಗಿದ್ದು ಗೃಹ ಸಚಿವರಿಗೆ ಗೊತ್ತಿಲ್ಲ ಎಂದರೆ ಹೇಗೆ? ಇದರ ಹಿಂದೆ ಯಾರನ್ನು ರಕ್ಷಣೆ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪ ಮಾಡಿದರು.
ಸುನಿಲ್ ಕುಮಾರ್ ಆರೋಪಕ್ಕೆ ಗೃಹ ಸಚಿವ ಪರಮೇಶ್ವರ್ ಉತ್ತರ ನೀಡಿ, ವಿಮಾನ ನಿಲ್ದಾಣದಲ್ಲಿ ನಡೆಯುವ ಆಡಳಿತ ನಮ್ಮ ವ್ಯಾಪ್ತಿಗೆ ಬರಲ್ಲ. ರಾಜ್ಯ ಸರ್ಕಾರಕ್ಕೆ ಯಾವುದೇ ಮಾಹಿತಿ ಇಲ್ಲ. ಚಿನ್ನ ಅಕ್ರಮ ಸಾಗಾಟ ಆಗಿಲ್ಲ ಎಂದು ನಾವು ಹೇಳಲ್ಲ. ಪತ್ರಿಕೆಯ ಮಾಹಿತಿಯಷ್ಟೇ ಮಾತ್ರ ನಮಗೆ ಗೊತ್ತಿದೆ ಎಂದರು. ಸಿಬಿಐ ಕೊಟ್ಟಿದ್ದೂ ನಮಗೆ ಗೊತ್ತಿಲ್ಲ, ಈ ಸಂಬಂಧಿಸಿದಂತೆ ಯಾವುದೇ ಪ್ರಕ್ರಿಯೆ ಆಗಿಲ್ಲ. ರನ್ಯಾ ರಾವ್ ತಂದೆ ಡಿಜಿಪಿ ಆಗಿದ್ದಾರೆ. ಅವರು ಸಹಾಯ ಮಾಡಿದ್ದಾರೆ ಎಂಬ ಆರೋಪ ತನಿಖೆ ಆಗಲಿ. ಸಚಿವರ ಪಾತ್ರದ ಬಗ್ಗೆ ನಾನು ಪತ್ರಿಕೆಯಲ್ಲಿ ನೋಡಿದ್ದೇನೆ.ಇದರ ತನಿಖೆ ಸಿಬಿಐ ಮಾಡಲಿ.ಸಚಿವರು ಚಿನ್ನದ ಅಕ್ರಮ ಸಾಗಾಟ ಮಾಡಿದ್ದರೆ ಸಿಬಿಐ ತನಿಖೆ ನಡೆಸಲಿ ಎಂದರು.



















