ಕಥೆ ಕದ್ದ ಆರೋಪ : ರಜನಿಕಾಂತ್‌ ನಟಿಸಿದ ರೋಬೊ ಸಿನೆಮಾ ನಿರ್ದೇಶಕನ 10 ಕೋ.ರೂ. ಆಸ್ತಿ ಮುಟ್ಟುಗೋಲು

ಚೆನ್ನೈ : ರಜನೀಕಾಂತ್ ಮತ್ತು ಐಶ್ವರ್ಯಾ ರೈ ನಟಿಸಿದ ರೋಬೊ ಸಿನಿಮಾದ ಕತೆ ಕದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದ ನಿರ್ದೇಶಕ ಶಂಕರ್‌ ಆಸ್ತಿಗಳನ್ನು ತನಿಖಾಧಿಅಕರಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಶಂಕರ್ ನಿರ್ದೇಶನ ಮಾಡಿದ್ದ ರೋಬೊ ಸಿನಿಮಾ 2010ರಲ್ಲಿ ಬಿಡುಗಡೆ ಆಗಿತ್ತು. ಆಗಿನ ಕಾಲಕ್ಕೆ ಆ ಸಿನಿಮಾ ಭಾರತದಲ್ಲಿಯೇ ಭಾರಿ ಬಜೆಟ್ ಸಿನಿಮಾ. ಬಿಡುಗಡೆ ಆದ ಬಳಿಕ ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ‘ರೋಬೊ’ ಸಿನಿಮಾ ಗ್ರಾಫಿಕ್ಸ್ ಪ್ರೇಕ್ಷಕರ ಮೈನವಿರೇಳಿಸಿತ್ತು. ಆಗಿನ ಕಾಲಕ್ಕೆ ‘ರೋಬೊ’ ಸಿನಿಮಾ ಸುಮಾರು 500 ಕೋಟಿಗೂ ಹೆಚ್ಚಿನ ಹಣ ಗಳಿಸಿತ್ತು. ಹಲವಾರು ದಾಖಲೆಗಳನ್ನು ಆ ಸಿನಿಮಾ ಆಗಿನ ಸಮಯದಲ್ಲಿ ಮಾಡಿತ್ತು. ಶಂಕರ್ ಹೆಸರು ಹಾಲಿವುಡ್​ನಲ್ಲೂ ಕೇಳುವಂತೆ ಮಾಡಿತ್ತು ‘ರೋಬೊ’ ಸಿನಿಮಾ. ಆದರೆ ಈಗ ಅದೇ ಸಿನಿಮಾದಿಂದಾಗಿ ಶಂಕರ್​ ಮೇಲೆ ಪ್ರಕರಣ ದಾಖಲಾಗಿ ಶಂಕರ್​ ಆಸ್ತಿಯನ್ನು ತನಿಖಾ ಸಂಸ್ಥೆ ವಶಕ್ಕೆ ಪಡೆದುಕೊಂಡಿದೆ.
‘ರೋಬೊ’ ಸಿನಿಮಾ ತಮ್ಮ ರಚನೆಯ ‘ಜಿಗುಬಾ’ ಹೆಸರಿನ ಕಾದಂಬರಿ ಆಧರಿಸಿದ್ದು ಎಂದು ಬರಹಗಾರ ಅರುರ್ ತಮಿನಾದನ್ ಎಂಬವರು ಪ್ರಕರಣ ದಾಖಲಿಸಿದ್ದರು. ಪ್ರಕರಣದ ವಿಚಾರಣೆಯಲ್ಲಿದ್ದು, ಜಾರಿ ನಿರ್ದೇಶನಾಲಯ ಶಂಕರ್​ಗೆ ಸೇರಿದ 10 ಕೋಟಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ. ಶಂಕರ್ ಅವರ ಕೆಲ ಸ್ಥಿರಾಸ್ತಿಯನ್ನು ಇ.ಡಿ ತನ್ನ ವಶಕ್ಕೆ ಪಡೆದುಕೊಂಡಿದೆ.
‘ರೋಬೊ’ ಸಿನಿಮಾದ ಕತೆ ಹಾಗೂ ಚಿತ್ರಕತೆಯನ್ನು ಶಂಕರ್ ಜೊತೆಗೆ ಸುಜಾತ ಸೇರಿ ರಚಿಸಿದ್ದರು. ಸುಜಾತಾ, ಖ್ಯಾತ ಸಿನಿಮಾ ಕತೆಗಾರರಾಗಿದ್ದು, ಶಂಕರ್​ರ ಹಲವಾರು ಸಿನಿಮಾಗಳಿಗೆ ಕತೆ, ಚಿತ್ರಕತೆಯನ್ನು ಒದಗಿಸಿರುವುದು ಅವರೆ. ಇತ್ತೀಚೆಗಷ್ಟೆ ಶಂಕರ್ ಅವರಿಂದ ಸುಜಾತಾ ದೂರಾಗಿದ್ದಾರೆ. ಸುಜಾತಾ ದೂರಾದ ಬಳಿಕ ಶಂಕರ್ ನಿರ್ದೇಶನ ಮಾಡಿದ ಎರಡು ಸಿನಿಮಾಗಳು ಫ್ಲಾಪ್ ಆಗಿವೆ. ‘ರೋಬೊ’ ಸಿನಿಮಾದ ಕತೆ ರಚನೆಯಲ್ಲಿ ಸುಜಾತಾ ಪಾತ್ರವೂ ಇದೆ. ಆದರೆ ಅವರಿಗೆ ಸ್ಟೋರಿ ಕ್ರೆಡಿಟ್ ನೀಡಿಲ್ಲವಾದ್ದರಿಂದ, ಇದೀಗ ಶಂಕರ್ ಮೇಲೆ ಮಾತ್ರವೇ ಪ್ರಕರಣ ದಾಖಲಾಗಿದೆ.
2010ರಲ್ಲಿ ‘ರೋಬೊ’ ಸಿನಿಮಾ ನಿರ್ದೇಶನ ಮಾಡಿದ್ದಕ್ಕೆ ಶಂಕರ್​ಗೆ 11.5 ಕೋಟಿ ಸಂಭಾವನೆ ದೊರೆತಿತ್ತಂತೆ. ಅದೇ ಕಾರಣಕ್ಕೆ ಈಗ ಶಂಕರ್​ಗೆ ಸೇರಿದ ಸುಮಾರು 10 ಕೋಟಿ ಮೌಲ್ಯದ ಸ್ಥಿರಾಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.































































































error: Content is protected !!
Scroll to Top