ಉಡುಪಿ : ಕಾರ್ಕಳ ತಾಲೂಕು ಬೈಲೂರು ಉಮಿಕಲ್ ಬೆಟ್ಟದಲ್ಲಿನ ಪರಶುರಾಮ ಥೀಮ್ ಪಾರ್ಕ್ನಲ್ಲಿ ಪರಶುರಾಮ ಮೂರ್ತಿ ವಿವಾದಕ್ಕೆ ಸಂಬಂಧಿಸಿದಂತೆ ತನಿಖೆ ಪ್ರಗತಿಯಲ್ಲಿದೆ. ಸಂಘ-ಸಂಸ್ಥೆಗಳು, ಧಾರ್ಮಿಕ ಮುಂದಾಳುಗಳ ಉಪಸ್ಥಿತಿಯಲ್ಲಿ ಪ್ರಶ್ನಾಚಿಂತನೆ ನಡೆಸಿ, ಮುಂದಿನ ತೀರ್ಮಾನ ಕೈಗೊಳ್ಳುವುದು ಸೂಕ್ತ ಎಂದು ಕಾಂಗ್ರೆಸ್ ಮುಖಂಡ ಉದಯ ಶೆಟ್ಟಿ ಮುನಿಯಾಲು ಸಲಹೆ ನೀಡಿದ್ದಾರೆ.
ಅವರು ಫೆ. 20ರಂದು ಉಡುಪಿಯಲ್ಲಿ ಸುದ್ದಿಗೋಷ್ಠಿ ನಡೆಸಿ, ಪರಶುರಾಮ ಮೂರ್ತಿ ವಿವಾದ ಅಂತ್ಯ ಯಾವಾಗ ಎಂದು ಜನ ಪ್ರಶ್ನಿಸತೊಡಗಿದ್ದಾರೆ. ಮೂರ್ತಿ ಅಸಲಿಯೋ, ನಕಲಿಯೋ ಎಂಬ ತನಿಖೆ ಚಾಲ್ತಿಯಲ್ಲಿದೆ. ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದ್ದು, ಶಿಲ್ಪಿಯನ್ನು ಬಂಧಿಸಲಾಗಿತ್ತು ಎಂದರು.
ಥೀಮ್ ಪಾರ್ಕ್ ನಿರ್ಮಾಣದ ಮೊದಲು ಉಮಿಕಲ್ ಬೆಟ್ಟದಲ್ಲಿ ದೈವ ಸಾನಿಧ್ಯವಿತ್ತು. ಅದನ್ನು ನೆಲಸಮ ಮಾಡಿ ಕಾಮಗಾರಿ ನಡೆಸಲಾಗಿದೆ. ಇದೀಗ ಅದರ ದೋಷವೇ ಇಂತಹ ದುರಂತಗಳಿಗೆ ಕಾರಣವಾಗಿದ್ದಿರಬಹುದು ಎಂದು ಜನರು ಆಡಿಕೊಳ್ಳುತ್ತಿದ್ದಾರೆ. ಹೀಗಾಗಿ ಈ ಎಲ್ಲಾ ಪ್ರಶ್ನೆಗಳನ್ನು ಅಷ್ಟಮಂಗಲದ ಮೂಲಕ ಪರಿಹರಿಸಿಕೊಳ್ಳಬೇಕೆಂಬುದು ನನ್ನ ಸಲಹೆ ಎಂದವರು ಹೇಳಿದರು.
ಎಲ್ಲರೂ ಒಗ್ಗೂಡಬೇಕು
ಥೀಮ್ ಪಾರ್ಕ್ ಯೋಜನೆಯನ್ನು ಸ್ಥಗಿತಗೊಳಿಸಿದ್ದು ಉದಯ ಕುಮಾರ್ ಶೆಟ್ಟಿ ಎಂದು ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದಾರೆ. ನಾವು ಅಲ್ಲಿನ ಅವ್ಯವಹಾರ, ನಕಲಿತನ ಬಯಲು ಮಾಡಲು ಹೋರಾಟ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಪಕ್ಷಾತೀತವಾಗಿ ಬೆಟ್ಟದಲ್ಲಿ ನೈಜವಾದ ಕಂಚಿನ ಮೂರ್ತಿ ಸ್ಥಾಪನೆಯಾಗಬೇಕು. ಯೋಜನೆ ಪೂರ್ಣವಾಗಲು ಎಲ್ಲರೂ ಒಗ್ಗೂಡಬೇಕು ಎಂದು ಉದಯ ಶೆಟ್ಟಿ ಹೇಳಿದರು.

ನಿರ್ಮಿತಿ ಕೇಂದ್ರಕ್ಕೆ ಬೇಡ
ಯೋಜನೆ ಪೂರ್ಣಗೊಳಿಸಲು ಸರಕಾರ ಅನುದಾನ ನೀಡಲಿದೆ. ನಿರ್ಮಿತಿ ಕೇಂದ್ರಕ್ಕೆ ಕಾಮಗಾರಿ ಪೂರ್ಣಗೊಳಿಸುವ ಜವಾಬ್ದಾರಿ ಕೊಡಬಾರದು. ಚಿಂತಕರ ಚಾವಡಿ ರಚಿಸಿ ಧಾರ್ಮಿಕ ಮುಖಂಡರ ಅಭಿಪ್ರಾಯ ಪಡೆದು ರಾಜಕೀಯೇತರವಾಗಿ ಪರಶುರಾಮ ಥೀಂ ಪಾರ್ಕ್ ಅಭಿವೃದ್ಧಿಯಾಗಬೇಕು ಎಂದು ಹೇಳಿದ ಉದಯ ಶೆಟ್ಟಿ ಅವರು ಹೋರಾಟದಿಂದ ನಾವು ಹಿಂದೆ ಸರಿಯಲ್ಲ ಎಂದರು. ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಕೃಷ್ಣಮೂರ್ತಿ ಆಚಾರ್ಯ, ಅಜಿತ್ ಹೆಗ್ಡೆ ಉಪಸ್ಥಿತರಿದ್ದರು.









































