ಕಾರ್ಕಳ : ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಅಂಗ ಸಂಸ್ಥೆಯಾದ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯವು ಫೆ. 6 ಹಾಗೂ 7 ರಂದು ‘ಐ.ಸಿ.ಇ.ಟಿ.ಇ-2025’ ಮಲ್ಟಿ-ಕಾನ್ಫರೆನ್ಸ್ ಅನ್ನು ಆಯೋಜಿಸಿದೆ. ಈ ಮಲ್ಟಿಕಾನ್ಫರೆನ್ಸ್ ನಡಿಯಲ್ಲಿ 7 ವಿವಿಧ ಅಂತಾರಾಷ್ಟ್ರೀಯ ಮಟ್ಟದ ಕಾನ್ಫರೆನ್ಸ್ ಅನ್ನು ಕಾಲೇಜು ಹಮ್ಮಿಕೊಂಡು ಸಂಶೋಧನಾ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ.
ಕಾನ್ಫರೆನ್ಸಸನ್ನು ದಕ್ಷಿಣ ಕೊರಿಯಾದ ಕುನ್ಸಾನ್ ನ್ಯಾಷನಲ್ ಯುನಿವರ್ಸಿಟಿಯ ಮಾಹಿತಿ ಮತ್ತು ದೂರಸಂಪರ್ಕ ಇಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಡಾ. ಇನ್ ಹೋ ರಾ ಅವರು ಉದ್ಘಾಟಿಸಲಿರುವರು. ಮುಖ್ಯ ಅತಿಥಿಗಳಾಗಿ ಡಾ. ಕುಮಾರಪ್ಪನ್ (ಮಾಜಿ ಅಧ್ಯಕ್ಷರು, ಐಇಇಇ ಮದ್ರಾಸ್ ವಿಭಾಗ), ಡಾ. ಫಿರ್ದೌಸ್ ಅಬ್ದುಲ್ ಮೊಹಮ್ಮದ್ (ಮಲೇಶಿಯಾ ತಾಂತ್ರಿಕ ವಿಶ್ವವಿದ್ಯಾಲಯ), ಡಾ. ತಕಾಮೊಟೊ ಇತೋ (ಜಪಾನ್ ರಿಟ್ಸುಮೇಕನ್ ವಿಶ್ವವಿದ್ಯಾಲಯ), ಶ್ರೀ ಮುರಳಿ ಐಯರ್ (ಮಾಜಿ ಪಾಲುದಾರ, WIPFLI, ಯುಎಸ್‌ಎ) ಮತ್ತು ಡಾ. ಮೊಹಮದ್ ನೂರ್ ಖೈರುಲ್ ಹಫಿಜಿ ಬಿನ್ ರೋಹಾನಿ (ಮಲೇಶಿಯಾ ಪೆರ್‍ಲಿಸ್ ವಿಶ್ವವಿದ್ಯಾಲಯ) ಅವರು ಭಾಗವಹಿಸಲಿದ್ದಾರೆ. ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ. ಎಸ್. ಮೂಡಿತ್ತಾಯ ಅವರ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮವು ನಡೆಯಲಿದ್ದು, ಟೆಕ್ನಿಕಲ್ ಎಜುಕೇಶನ್ ಉಪಾಧ್ಯಕ್ಷ ಡಾ. ಗೋಪಾಲ್ ಮುಗೆರಾಯ ಅವರು ವಿಶೇಷ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.
ಈ ಎರಡು ದಿನಗಳ ಅವಧಿಯಲ್ಲಿ ವಿವಿಧ ತಂತ್ರಜ್ಞಾನ ವಿಭಾಗಗಳಲ್ಲಿ ಉನ್ನತ ಮಟ್ಟದ ಸಂಶೋಧನೆ ಮತ್ತು ಸಾಧನೆಗಳನ್ನು ಹಂಚಿಕೊಳ್ಳಲು ಈ ಮಲ್ಟಿ-ಕಾನ್ಫರೆನ್ಸ್ ವೇದಿಕೆಯಾಗಲಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ. ನಿರಂಜನ್ ಎನ್. ಚಿಪ್ಳೂಣ್ಕರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


































































