ಕಾರ್ಕಳ : ಕಳೆದ ವಾರ ಕಾರ್ಕಳದ ಕಾಬೆಟ್ಟಿನಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಮನೆ ಸುಟ್ಟು ಹೋಗಿ ಅನಾಥರಾದ ತಾಯಿ ಮಗಳಿಗೆ ಅನಂತಶಯನ ಶಾರದಾ ಮಹಿಳಾ ಮಂಡಲದಲ್ಲಿ ಶುಕ್ರವಾರ ಶಾರದಾ ಮಹಿಳಾ ಮಂಡಲದ ಸದಸ್ಯರು ತಮ್ಮ ಕೈಲಾದ ಸಹಾಯವನ್ನು ನೀಡಿದರು. 9ನೇ ತರಗತಿಯಲ್ಲಿ ಕಲಿಯುತ್ತಿರುವ ಮಗಳು ವಾಣಿಗೆ ಗೈಡ್ ಸಮವಸ್ತ್ರವನ್ನು ಶಾರದಾ ಮಹಿಳಾ ಮಂಡಲದ ಅಧ್ಯಕ್ಷೆ ಸಾವಿತ್ರಿ ಮನೋಹರ್ ನೀಡಿ ಮುಂದೆ ಉತ್ತಮ ಗೈಡ್ ವಿದ್ಯಾರ್ಥಿಯಾಗಿ ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಿ ಜೀವನದಲ್ಲಿ ಇನ್ನೊಬ್ಬರಿಗೆ ಉಪಕಾರ ಮಾಡುವಂಥ ಹುಡುಗಿಯಾಗು ಎಂದು ಹಾರೈಸಿದರು.
ತನ್ನ ಮನವಿಯನ್ನು ಮನ್ನಿಸಿ ಸದಸ್ಯರೆಲ್ಲರೂ ನೀಡುತ್ತಿರುವ ವಸ್ತ್ರ, ಅಕ್ಕಿ ಧಾನ್ಯ ಎಲ್ಲವನ್ನು ಅವರ ಕೈಯಿಂದಲೇ ಸಂತ್ರಸ್ತರಿಗೆ ನೀಡಿದ ಮಂಡಲದ ಸದಸ್ಯರ ಔದಾರ್ಯದ ಸಹಾಯವನ್ನು ಸಾವಿತ್ರಿ ಮನೋಹರ್ ಪ್ರಶಂಸಿಸಿದರು.
ಬಂಧು-ಬಳಗದವರು ಕೈ ಬಿಟ್ಟಾಗ ಉಪಕಾರ ಮಾಡಿದ ನೀವೇ ಬಂಧುಗಳು. ಕೂಲಿ ಕೆಲಸ ಮುಗಿಸಿ ಬಂದವಳು. ಮೈ ಮೇಲಿರುವ ಬಟ್ಟೆ ಬಿಟ್ಟು ಬೇರೇನು ಉಳಿಯದಂತೆ ಸುಟ್ಟುಹೋದ ಮನೆಯ ಮುಂದೆ ನಿಂತುಕೊಂಡಾಗ ನನಗೆ ಆದ ನೋವು ಭಗವಂತನಿಗೆ ಗೊತ್ತು. ವಿಷಯ ತಿಳಿದ ನನ್ನ ಮಗಳ ಕಾಲೇಜಿನ ಪ್ರಿನ್ಸಿಪಾಲರು ಮತ್ತು ಶಿಕ್ಷಕರು ಬಂದು ಸಮಾಧಾನ ಹೇಳಿದರು. ಕರುನಾಡು ಕಮಲಾಕ್ಷ ಕಾಮತ್ತರು ದೇವರಂತೆ ಬಂದು ಇರಲಿಕ್ಕೆ ಒಂದು ಮನೆ ಮಾಡಿಕೊಟ್ಟರು ಎಂದು ನೆರವು ಸ್ವೀಕರಿಸಿ ಮಂಜುಳಾ ಕೃತಜ್ಞತೆ ಹೇಳಿದರು.
ಅನುರಾಧ ಮತ್ತು ಬಳಗದವರು ಪ್ರಾರ್ಥಿಸಿದರು. ಕೋಶಾಧಿಕಾರಿ ಶೈಲಜಾ ರತ್ನಾಕರ್ ಕಾರ್ಯಕ್ರಮ ನಿರ್ವಹಿಸಿದರು. ಶಶಿಕಲಾ ರಾವ್, ಸ್ವಾತಿ ಸಹಕರಿಸಿದರು. ಕಾರ್ಯದರ್ಶಿ ಸುಧಾ ಪ್ರಭು ನಡೆಸಿಕೊಟ್ಟ ತಿಂಗಳ ಅದೃಷ್ಟವಂತ ಮಹಿಳೆಯಾಗಿ ಸಾವಿತ್ರಿ ಮನೋಹರ್ ಆಯ್ಕೆಯಾದರು. ಉಪಾಧ್ಯಕ್ಷೆ ಉಮಾ ಚಿಪ್ಲೂಣ್ಕರ್ ವಂದಿಸಿದರು.































































