ಸ್ನೇಹಮಯಿ ಕೃಷ್ಣಗೆ ಶಕ್ತಿ ತುಂಬಲು ಶಕ್ತಿ ದೇವತೆಗೆ ಪ್ರಾಣಿ ಬಲಿ

ಮಂಗಳೂರು : ಕೆಲದಿನಗಳ ಹಿಂದೆ ಮಂಗಳೂರಿನಲ್ಲಿ ನಡೆದ ಮಸಾಜ್ ಪಾರ್ಲರ್ ಗಲಾಟೆ ಸಂಬಂಧ ಬಂಧನದಲ್ಲಿರುವ ಶ್ರೀರಾಮ ಸೇನೆ ಮುಖಂಡ ಪ್ರಸಾದ್ ಅತ್ತಾವರ ಮುಡಾ ಹಗರಣವನ್ನು ಬಯಲಿಗೆಳೆದಿರುವ ಸ್ನೇಹಮಯಿ ಕೃಷ್ಣ ಅವರ ಹೋರಾಟಕ್ಕೆ ಶಕ್ತಿ ತುಂಬಲು ಪ್ರಾಣಿ ಬಲಿ ಕೊಟ್ಟಿದ್ದಾರೆ ಎನ್ನಲಾಗಿದೆ.
ಶಕ್ತಿ ದೇವತೆಯ ಮುಂದೆ ಪ್ರಾಣಿ ಬಲಿ ಕೊಟ್ಟು ಅದರ ರಕ್ತವನ್ನು ಸ್ನೇಹಮಯಿ ಕೃಷ್ಣ ಮತ್ತು ಆರ್​ಟಿಐ ಕಾರ್ಯಕರ್ತ ಗಂಗರಾಜು ಫೋಟೊಗೆ ಹಚ್ಚಿರುವ ವೀಡಿಯೊ ಪೊಲೀಸರಿಗೆ ಲಭ್ಯವಾಗಿದೆ. ಸರಣಿ ಪ್ರಾಣಿ ಬಲಿ ಮಾಡಿರುವ ವೀಡಿಯೊಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ವಿಚಾರವನ್ನು ದಕ್ಷಿಣ ಕನ್ನಡ ಜಿಲ್ಲೆಯ ಹಿರಿಯ ಪೊಲೀಸ್​ ಅಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತಂದಿದ್ದಾರೆ. ಸಿದ್ದರಾಮಯ್ಯ ಆದೇಶದಂತೆ ಕದ್ರಿ ಪೊಲೀಸ್ ಇನ್‌ಸ್ಪೆಕ್ಟರ್ ಸೋಮಶೇಖರ್ ದೂರು ನೀಡಿದ್ದು, ಮಂಗಳೂರಿನ ಬರ್ಕೆ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ.
ಪ್ರಾಣಿಬಲಿ ಪೂಜೆ ಮಾಡಲು ಅನಂತ್ ಭಟ್ ಎಂಬವರಿಗೆ ಪ್ರಸಾದ್ ಅತ್ತಾವರ ಹಣ ವರ್ಗಾವಣೆ ಮಾಡಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಈ ಇಬ್ಬರ ವಿರುದ್ಧ ಮತ್ತೊಂದು ಎಫ್​ಐಆರ್ ದಾಖಲಾಗಿದೆ.

ಒಂದು ವಾರದ ಹಿಂದೆ ಪ್ರಸಾದ್ ಅತ್ತಾವರ ಅವರನ್ನು ಬಂಧಿಸಲಾಗಿತ್ತು. ಈ ಸಂದರ್ಭದಲ್ಲಿ ಮೊಬೈಲ್ ಪರಿಶೀಲನೆ ಮಾಡಿದ್ದೇವೆ. ಮೊಬೈಲ್​ನಲ್ಲಿದ್ದ​ ವೀಡಿಯೊದಲ್ಲಿ ದೇವಸ್ಥಾನದಲ್ಲಿ ಐದು ಕುರಿಗಳನ್ನು ಬಲಿ‌ಕೊಡುವ ದೃಶ್ಯ ಇತ್ತು. ಸ್ನೇಹಮಯಿ ಕೃಷ್ಣ ಮತ್ತು ಗಂಗರಾಜುಗೆ ಬಲ ತುಂಬಲು ಬಲಿ ಕೊಟ್ಟಿದ್ದೇವೆ ಎಂದು ಹೇಳಿದರು ಎಂದು ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ತಿಳಿಸಿದ್ದಾರೆ.
ಅನಂತ್ ಭಟ್ ಯಾರು ಎಂದು ತನಿಖೆ ಮಾಡುತ್ತಿದ್ದೇವೆ. ಬಲಿ ಎಲ್ಲಿ ಕೊಟ್ಟಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ಪ್ರಾರಂಭಿಕ ಮಾಹಿತಿ ಪ್ರಕಾರ ಸ್ನೇಹಮಯಿ ಕೃಷ್ಣ ಮತ್ತು ಗಂಗರಾಜು ಅವರಿಗಾಗಿ ಬಲಿ ಕೊಡಲಾಗಿದೆ ಎಂದು ತಿಳಿದುಬಂದಿದೆ. ಸುಮೋಟೊ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಪ್ರಾಣಿ ಬಲಿ ನಿಷೇಧಿಸಲಾಗಿದೆ. ಹೀಗಾಗಿ ಇದು ಶಿಕ್ಷಾರ್ಹ ಆರೋಪ. ಹಣದ ಬ್ಯಾಗ್‌ನ ಫೋಟೋ ಕೂಡ ಇತ್ತು ಎಂದು ತಿಳಿಸಿದ್ದಾರೆ.
ಮಂಗಳೂರಿನ ಬಿಜೈ ಬಳಿಯ ಕಲರ್ಸ್ ಯುನಿಸೆಕ್ಸ್ ಸಲೂನ್‌ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂದು ಆರೋಪಿಸಿ ರಾಮ ಸೇನಾ ಕಾರ್ಯಕರ್ತರು ದಾಳಿ ಎಸಗಿ ನೈತಿಕ ಪೊಲೀಸ್‌ಗಿರಿ ಮಾಡಿ ಪೀಠೋಪಕರಣ, ಕನ್ನಡಿ ಸಹಿತ ಲಕ್ಷಾಂತರ ರೂ. ಮೌಲ್ಯದ ವಸ್ತುಗಳನ್ನು ಪುಡಿಗೈದು ದಾಂಧಲೆ ಎಸಗಿದ್ದರು. ಈ ಘಟನೆ ಸಂಬಂಧ ಪೊಲೀಸರು ಪ್ರಸಾದ್ ಅತ್ತಾವರ ಅವರನ್ನು ಬಂಧಿಸಿದ್ದಾರೆ. ಸದ್ಯ ಪ್ರಸಾದ್​ ಅತ್ತಾವರ್​ ನ್ಯಾಯಾಂಗ ಬಂಧನದಲ್ಲಿದ್ದಾರೆ.









































































































error: Content is protected !!
Scroll to Top