ಉನ್ನತ ವಿದ್ಯಾಭ್ಯಾಸಕ್ಕೆ ಸೀಟು ಕೊಡಿಸುವುದಾಗಿ ವೈದ್ಯ ವಿದ್ಯಾರ್ಥಿಗೆ ವಂಚನೆ

ಉಡುಪಿ : ಉನ್ನತ ವಿದ್ಯಾಭ್ಯಾಸಕ್ಕೆ ಯುಕೆಯಲ್ಲಿ ಸೀಟು ಕೊಡಿಸುವುದಾಗಿ ನಂಬಿಸಿ ವೈದ್ಯ ವಿದ್ಯಾರ್ಥಿಗೆ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಹೊಸನಗರದ ಸುಮನ್ ಎಸ್. (24), ಬೆಳುವಾಯಿಯ ಸುಹಾನ್ ಖಾನ್ (22) ಮತ್ತು ಬೆಳುವಾಯಿಯ ಮೊಹಮ್ಮದ್‌ ಮಹಾಝ್ (23) ಎಂದು ಗುರುತಿಸಲಾಗಿದೆ. ಸಂತೋಷ್ ಎಂಬವರು ವೈದ್ಯನಾಗಿದ್ದು, ಉನ್ನತ ವಿದ್ಯಾಭ್ಯಾಸವನ್ನು ಯುಕೆಯಲ್ಲಿ ಮಾಡಲು ಬಯಸಿದ್ದರು. ಇವರು ದುಬೈಗೆ ತೆರಳಿ ಅಫ್ತಾಬ್‌ ನನ್ನು ಭೇಟಿ ಮಾಡಿದ್ದು ಅನಂತರ ಯುಕೆಯಲ್ಲಿ ಎಮ್‌ಪಿಹೆಚ್ ವಿದ್ಯಾಭ್ಯಾಸಕ್ಕಾಗಿ ಸೀಟಿಗೆ 18 ಲಕ್ಷ ರೂ. ನೀಡುವಂತೆ ಒಪ್ಪಂದವಾಗಿತ್ತು.
ಅಫ್ತಾಬ್ ವಿದ್ಯಾರ್ಥಿಗೆ ಸೀಟನ್ನು ಖಾಯಂ ಮಾಡಲು ಮುಂಗಡವಾಗಿ 8.50 ಲಕ್ಷ ರೂ. ನೀಡುವಂತೆ ಕೇಳಿದ್ದನು. ಅದರಂತೆ ಹಣವನ್ನು ಪಾವತಿ ಮಾಡಲಾಗಿತ್ತು. ಆ ಬಳಿಕ ಸೀಟು ಕೊಡಿಸದೇ ವಂಚಿಸಿದ್ದಾಗಿ ಉಡುಪಿ ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ತನಿಖೆ ಆರಂಭಿಸಿದ ಪೊಲೀಸರು ಮೂವರನ್ನು ಬಂಧಿಸಿದ್ದು, 5 ಲಕ್ಷ ನಗದು, ಇನ್ನೋವಾ ಕಾರು ಮತ್ತು 2 ಮೊಬೈಲನ್ನು ವಶಪಡಿಸಿಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಉಡುಪಿ ನಗರ ಠಾಣೆ ಪ್ರಭಾರ ಪಿಐ ರಾಮಚಂದ್ರ ನಾಯಕ್, ಪಿಎಸ್‌ಐಗಳಾದ ಈರಣ್ಣ ಶಿರಗುಂಪಿ, ಪುನೀತ್ ಕುಮಾರ್, ಭರತೇಶ್, ಸಿಬ್ಬಂದಿ ಚೇತನ್ ಕುಮಾರ್, ಬಶೀರ್, ಕಾರ್ತಿಕ್, ಸಂತೋಷ, ಶುಭಾ, ಸುಷ್ಮಾ, ನೇತ್ರಾವತಿ ಹಾಗೂ ಸೆನ್ ಪೊಲೀಸ್ ಠಾಣೆಯ ಪ್ರವೀಣ್ ಕುಮಾರ್, ವೆಂಕಟೇಶ್, ಧರ್ಮಪ್ಪ, ರಾಜೇಶ್, ನಿಲೇಶ್, ದೀಕ್ಷೀತ್, ಮಯ್ಯಪ್ಪರಿದ್ದರು.































































































































error: Content is protected !!
Scroll to Top