ಕಾರ್ಕಳ : ಕ್ರಿಯೇಟಿವ್ ಪದವಿ ಪೂರ್ವ ಕಾಲೇಜು ಕಾರ್ಕಳ ಮತ್ತು ವಾರ್ತಾ ಭಾರತಿ ಡಿಜಿಟಲ್ ಚಾನಲ್ ಸಹಯೋಗದೊಂದಿಗೆ ಗಣರಾಜ್ಯೋತ್ಸವದ ಪ್ರಯುಕ್ತ ನಡೆಸುವ ‘ನಮ್ಮ ಸಂವಿಧಾನ – ನಮ್ಮ ಹೆಮ್ಮೆ’ ವಿಶೇಷ ಸಂವಾದ ಕಾರ್ಯಕ್ರಮ ಮತ್ತು ಚಿತ್ರೀಕರಣ ಜ. 20ರಂದು ಕ್ರಿಯೇಟಿವ್ ‘ಚಿಂತಕರ ಚಾವಡಿ’ ಸಪ್ತಗಿರಿ ಕ್ಯಾಂಪಸ್ನಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಸಂವಾದಕರಾಗಿ ಭಾಗವಹಿಸಿದ ನಿವೃತ್ತ ಪ್ರಾಧ್ಯಾಪಕ ಸುರೇಂದ್ರ ಶೆಟ್ಟಿ ಕೊಕ್ಕರ್ಣೆ, ಸಂವಿಧಾನ ಎನ್ನುವುದು ಭಾರತ ದೇಶದ ಪ್ರತಿಯೊಬ್ಬ ನಾಗರಿಕನ ಧರ್ಮಗ್ರಂಥ. ಅದನ್ನು ಪ್ರತಿಯೊಬ್ಬರೂ ಓದಲೇಬೇಕು. ಸಂವಿಧಾನದಲ್ಲಿರುವ ಕಾಯ್ದೆ ಕಾನೂನುಗಳ ಬಗ್ಗೆ ತಿಳಿದುಕೊಂಡು ಅದರಂತೆ ನಡೆದುಕೊಳ್ಳುವುದು ಪ್ರತಿಯೊಬ್ಬ ಭಾರತೀಯ ನಾಗರಿಕನ ಆದ್ಯ ಕರ್ತವ್ಯ. ಸಂವಿಧಾನ ರಚನೆಯಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ಸಂವಿಧಾನವನ್ನು ನಮಗೆ ನೀಡಿರುವುದು ಪ್ರತಿಯೊಬ್ಬ ಭಾರತೀಯ ನಾಗರಿಕನು ನೆಮ್ಮದಿಯಿಂದ ಜೀವಿಸಲಿ ಎಂದು. ಸಂವಿಧಾನದಲ್ಲಿ ನೀಡಿರುವ ಹಕ್ಕುಗಳ ಬಗ್ಗೆ ಮಾತ್ರ ನಾವು ಮಾತನಾಡುತ್ತೇವೆ ಆದರೆ ಅದರಲ್ಲಿ ಅಡಕವಾಗಿರುವ ಪ್ರತಿಯೊಬ್ಬ ಭಾರತೀಯನ ಕರ್ತವ್ಯಗಳು ಏನು ಎಂಬುದನ್ನು ನಾವು ಅರಿತುಕೊಂಡಿಲ್ಲ ಎಂದ ಅವರು ವಿದ್ಯಾರ್ಥಿಗಳಿಗೆ ಸಂವಿಧಾನದ ಕುರಿತು ಮಾಹಿತಿ ನೀಡಿದರು. ಸಮನ್ವಯಕಾರರಾಗಿ ವಾರ್ತಾ ಭಾರತಿಯ ವರದಿಗಾರ ಅವಿನಾಶ್ ಕಾಮತ್ ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಕಾಲೇಜು ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
































































