ಇಂದಿನಿಂದ ಅಮೆರಿಕದಲ್ಲಿ ಡೊನಾಲ್ಡ್‌ ಟ್ರಂಪ್‌ ರಾಜ್ಯಭಾರ

ವಾಷಿಂಗ್ಟನ್: ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಇಂದು ವಾಷಿಂಗ್ಟನ್ ಡಿಸಿಯ ಕ್ಯಾಪಿಟಲ್‌ನಲ್ಲಿ ನಡೆಯುವ ಐತಿಹಾಸಿಕ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಎರಡನೇ ಬಾರಿಗೆ ಟ್ರಂಪ್‌ ಅಮೆರಿಕದ ಅಧ್ಯಕ್ಷರಾಗಲಿದ್ದಾರೆ. ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಸೆಲೆಬ್ರಿಟಿಗಳು, ವಿದೇಶಿ ಗಣ್ಯರು ಮತ್ತು ಕಂಪನಿಗಳ ಮುಖ್ಯಸ್ಥರು ಭಾಗಿಯಾಗಲಿದ್ದಾರೆ. ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ, ಅರ್ಜೆಂಟೀನಾ ಅಧ್ಯಕ್ಷ ಜೇವಿಯರ್ ಮಿಲಿ, ಹಂಗೇರಿಯನ್ ಪ್ರಧಾನಿ ವಿಕ್ಟರ್ ಓರ್ಬನ್, ಜಪಾನಿನ ವಿದೇಶಾಂಗ ಸಚಿವ ಟಕೇಶಿ ಇವಾಯಾ ಭಾಗವಹಿಸಲಿದ್ದಾರೆ. ಬಲಪಂಥೀಯ ನಾಯಕರಾದ ನಿಗೆಲ್ ಫರಾಜ್ (ಯುಕೆ), ಎರಿಕ್ ಜೆಮ್ಮೌರ್ (ಫ್ರಾನ್ಸ್) ಮತ್ತು ಬ್ರೆಜಿಲ್‌ನ ಮಾಜಿ ಅಧ್ಯಕ್ಷ ಜೈರ್ ಬೋಲ್ಸನಾರೊ ಭಾಗಿಯಾಗುವ ಸಾಧ್ಯತೆಯಿದೆ.

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಆಹ್ವಾನವಿಲ್ಲ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಕೂಡ ಗೈರುಹಾಜರಾಗಲಿದ್ದಾರೆ. ಅಮೆರಿಕದ ಮಾಜಿ ಪ್ರಥಮ ಮಹಿಳೆ ಮಿಶೆಲ್ ಒಬಾಮಾ ಭಾಗವಹಿಸುವುದಿಲ್ಲ ಎಂದು ಹೇಳಿದ್ದಾರೆ.

ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್‌ನ ಸಿಇಒ ಎಲಾನ್ ಮಸ್ಕ್, ಅಮೆಜಾನ್ ಕಾರ್ಯನಿರ್ವಾಹಕ ಅಧ್ಯಕ್ಷ ಜೆಫ್ ಬೆಜೋಸ್, ಗೂಗಲ್‌ ಸಿಇಒ ಸುಂದರ್‌ ಪಿಚೈ, ಆಪಲ್‌ ಸಿಇಒ ಟಿಮ್‌ ಕುಕ್‌, ಓಪನ್‌ಎಐ ಸಿಇಒ ಸ್ಯಾಮ್ ಆಲ್ಟ್‌ಮನ್, ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್, ಟಿಕ್‌ಟಾಕ್‌ ಸಿಇಒ ಶೌ ಜಿ ​​ಚೆವ್ ಭಾಗಿಯಾಗಲಿದ್ದಾರೆ.

ಅಮೆರಿಕದ ಅಧ್ಯಕ್ಷರಿಗೆ ಏನೆಲ್ಲ ಸೌಲಭ್ಯ?

ಅಮೆರಿಕದ ಅಧ್ಯಕ್ಷರಿಗೆ ವರ್ಷಕ್ಕೆ 4 ಲಕ್ಷ ಡಾಲರ್ (2.70 ಕೋಟಿ ರೂ.) ಸಂಬಳ ಸಿಗುತ್ತದೆ. ವೇತನದ ಜೊತೆಗೆ ಭತ್ಯೆ, ಸೌಲಭ್ಯಗಳು ಕೂಡ ಇವೆ. ಪ್ರತ್ಯೇಕ ಬಂಗಲೆ, ಖಾಸಗಿ ವಿಮಾನ, ಹೆಲಿಕಾಪ್ಟರ್‌ನಂತಹ ಹಲವು ಸೌಲಭ್ಯ ಸಿಗುತ್ತದೆ. ಅಧಿಕೃತ ನಿವಾಸವಾಗಿ ಬೃಹತ್ ಬಂಗಲೆ ಶ್ವೇತಭವನ, ಬೇರ್‌ಹೌಸ್ ಅತಿಥಿಗೃಹ, ಅತ್ಯಾಧುನಿಕ ವಿಮಾನ ಏರ್‌ಫೋರ್ಸ್ ಒನ್, ಅಧಿಕೃತ ಹೆಲಿಕಾಪ್ಟರ್ ಮರೈನ್ ಒನ್, ಯಾವುದೇ ದಾಳಿಯನ್ನು ತಡೆಯುವ ಶಕ್ತಿಯುಳ್ಳ ಲಿಮೋಸಿನ್ ಕಾರು ಸಿಗುತ್ತದೆ. ಜೊತೆಗೆ 19 ಸಾವಿರ ಡಾಲರ್ ಮನರಂಜನಾ ಭತ್ಯೆ, 50 ಸಾವಿರ ಡಾಲರ್ ವೆಚ್ಚ ಭತ್ಯೆ ಹಾಗೂ 1 ಲಕ್ಷ ಡಾಲರ್ ಸಾರಿಗೆ ಭತ್ಯೆ ದೊರೆಯುತ್ತದೆ. ನಿವೃತ್ತರಾದ ಬಳಿಕ ವಾರ್ಷಿಕ 2 ಲಕ್ಷ ಅಮೆರಿಕನ್ ಡಾಲರ್ ಪಿಂಚಣಿ ಸಿಗುತ್ತದೆ. ಅಧ್ಯಕ್ಷರ ನಿಧನದ ಬಳಿಕ ಅವರ ಪತ್ನಿಗೆ 1 ಲಕ್ಷ ಡಾಲರ್ ಪಿಂಚಣಿ ಸಿಗುತ್ತದೆ.
ಅಮೆರಿಕದ ಅಧ್ಯಕ್ಷರು ವಿದೇಶ ಪ್ರವಾಸ ಹೋದಾಗ ಲಿಮೋಸಿನ್ ಕಾರು ಸಹ ವಿಶೇಷ ವಿಮಾನದಲ್ಲಿ ಹೋಗುತ್ತದೆ. ಈ ಕಾರಿನಲ್ಲೇ ಅವರು ವಿದೇಶದಲ್ಲಿ ಪ್ರಯಾಣ ಮಾಡುತ್ತಾರೆ.









































































































error: Content is protected !!
Scroll to Top