ನಿರಂತರ ಓದುವುದೇ ನನ್ನ ಬಂಡವಾಳ : ಡಾ. ನಾ. ಸೋಮೇಶ್ವರ
ಕಾರ್ಕಳ : ನಿರಂತರ ಓದುವುದೇ ನನ್ನ ಬಂಡವಾಳ. ಪುಸ್ತಕಗಳನ್ನು ಇವತ್ತಿಗೂ ನಾನು ಓದುತ್ತೇನೆ. ಪುಸ್ತಕವನ್ನು ಓದದೆ ಯಾವುದೇ ಪ್ರಶ್ನೆಗಳನ್ನು ಕೇಳುವುದು ಅಸಾಧ್ಯ ಎಂದು ಡಾ. ನಾ. ಸೋಮೇಶ್ವರ ತಿಳಿಸಿದರು. ತನ್ಮೂಲಕ ಶಾಲಾ ಕಾಲೇಜಿನ ದಿನಗಳನ್ನು ಮೆಲುಕು ಹಾಕಿದ ಅವರು ಆಗಿನ ಕಾಲದಲ್ಲಿ ಸಿಗುತ್ತಿದ್ದ ಅಷ್ಟೂ ಪುಸ್ತಕಗಳನ್ನು ಓದುತ್ತಿದ್ದು, ಇದರ ಮೂಲಕ ತನ್ನನ್ನು ತಾನೇ ಮಾರ್ಗದರ್ಶನ ಮಾಡಿಕೊಳ್ಳುತ್ತಿದ್ದೆ ಎಂದರು.

ಕಾರ್ಕಳದ ಜೋಡುರಸ್ತೆಯಲ್ಲಿರುವ ಕ್ರಿಯೇಟಿವ್ ಪುಸ್ತಕಮನೆಯಲ್ಲಿ ನಡೆದ ಪರಸ್ಪರ ಸಂವಾದ ಕಾರ್ಯಕ್ರಮಕ್ಕೆ ಚಂದನವಾಹಿನಿಯ “ಥಟ್‌ಅಂತ ಹೇಳಿ” ಕಾರ್ಯಕ್ರಮದ ನಿರೂಪಕರಾಗಿರುವ, ನಡೆದಾಡುವ ಗ್ರಂಥಾಲಯ ಎಂದು ಖ್ಯಾತಿಯ ಡಾ. ನಾ. ಸೋಮೇಶ್ವರ ಮತ್ತು ಕನ್ನಡದ ಪ್ರೇಮ ಕವಿ ಎಂದೇ ಚಿರಪರಿಚಿತರಾಗಿರುವ ಅಮ್ಮ ನಿನ್ನ ಎದೆಯಾಳದಲ್ಲಿ……ಹಾಗೆಯೇ ಬಾ ಮಳೆಯೇ ಬಾ…… ಗೀತೆ ಬರೆದ ಬಿ. ಆರ್. ಲಕ್ಷ್ಮಣರಾವ್ ಅವರು ಭೇಟಿ ನೀಡಿದರು.


ಪರಸ್ಪರದ ಮೊದಲ ಸಂಚಿಕೆ ಇಂದಿನಿಂದ ಆರಂಭ ಎಂದು ಕ್ರಿಯೇಟಿವ್ ಸಂಸ್ಥಾಪಕರೊಲ್ಲಬ್ಬರಾದ ಅಶ್ವಥ್ ಕೆ. ಎಸ್. ತಿಳಿಸಿದರು. ಕಾರ್ಕಳ ತಾಲೂಕು ಕಸಾಪದ ಅಧ್ಯಕ್ಷರು ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಪುಸ್ತಕ ಮನೆಯಲ್ಲಿ ಉಪಸ್ಥಿತರಿದ್ದು, ಡಾ. ನಾ. ಸೋಮೇಶ್ವರ ಮತ್ತು ಬಿ. ಆರ್. ಲಕ್ಷ್ಮಣರಾವ್ ಅವರೊಂದಿಗೆ ಸಾಹಿತ್ಯ ಕುರಿತಂತೆ ಹಲವಾರು ವಿಚಾರಗಳ ಬಗ್ಗೆ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಲೇಖಕ ಓದುಗ ಜೊತೆಯಾಗಿ, ಪುಸ್ತಕಗಳಿಗೆ ಸಹಿ ಪಡೆಯುವ ವಿಶೇಷ ಅವಕಾಶವನ್ನು ಪಡೆದುಕೊಂಡರು.














































