ಜ್ಞಾನಿ – ಜಿಜ್ಞಾಸುವಿನ ಸಂಭಾಷಣೆಗಳೇ ಉಪನಿಷತ್ತು – ಲಕ್ಷ್ಮೀಶ ತೋಳ್ಪಾಡಿ

ಕಾರ್ಕಳ : ಜ್ಞಾನಿ ಮತ್ತು ಜಿಜ್ಞಾಸು ಹತ್ತಿರ ಕುಳಿತು ಬದುಕಿನ ನಿಗೂಢತೆಯ ಬಗ್ಗೆ ಮಾತನಾಡುವುದೇ ಉಪನಿಷತ್ತು. ಅಲ್ಲಿ ಮೂರನೆಯವರು ಬೇಕಾಗಿಲ್ಲ. ಇನ್ನೊಬ್ಬರ ಬಗ್ಗೆಯಾಗಲೀ, ಲೋಕದ ಕುರಿತಾಗಲೀ, ತಮಗೆ ಗೊತ್ತಿರುವ ವಿಷಯಗಳ ಬಗ್ಗೆಯಾಗಲೀ ಅವರು ಮಾತನಾಡುವುದಿಲ್ಲ. ಆಂತರಿಕವಾದ ಅಂತರಂಗಕ್ಕೆ ಸಂಬಂಧಿಸಿದ ವ್ಯಕ್ತಿತ್ವದ ಆಳಕ್ಕೆ ಸಂಬಂಧಿಸಿದ ರಹಸ್ಯವೇ ಅವರ ಮಾತಿಗೆ ಮೂಲ ಎಂದು ವಿದ್ವಾಂಸ ಲಕ್ಷ್ಮೀಶ ತೋಳ್ಪಾಡಿ ಹೇಳಿದರು.
ಕನ್ನಡ ಸಂಘ ಕಾಂತಾವರ, ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ಸಮಿತಿ ಮತ್ತು ಅಲ್ಲಮಪ್ರಭು ಪೀಠ ಕಾಂತಾವರ ಸಹಯೋಗದಲ್ಲಿ ಡಿ. 21ರಂದು ಕಾರ್ಕಳದ ಹೋಟೆಲ್ ಪ್ರಕಾಶ್ ನ ಉತ್ಸವ ಸಭಾಂಗಣದಲ್ಲಿ ಉಪನಿಷತ್ತುಗಳ ಕುರಿತಾದ ಉಪನ್ಯಾಸ ಸಮಾರಂಭದಲ್ಲಿ ಮಾತನಾಡಿದರು.
ಸಾವಿರಾರು ವರ್ಷಗಳ ಹಿಂದೆ ಇಂದಿನ ಸಿರಿವಂತಿಕೆಯ ಸೌಲಭ್ಯಗಳಿಲ್ಲದ ಕಾಲದಲ್ಲಿಯೂ ಜೀವನವನ್ನು ಅರ್ಥಮಾಡಿಕೊಳ್ಳುವ ಬಗೆ ಮತ್ತು ಒಳಗಿನ ಒಂದು ಸಂವೇದನಾಶೀಲತೆಯ ರಹಸ್ಯ ಉಪನಿಷತ್ತಿನಲ್ಲಿ ಅಡಗಿದೆ ಎಂಬುದನ್ನು ಋಷಿಮುನಿಗಳು ನಮ್ಮ ಮುಂದೆ ತೆರೆದಿಟ್ಟಿದ್ದಾರೆ. ಆದರೆ ಪ್ರಚಂಡವಾದ ಜೀವನ ಲಾಲಸೆ ನಮ್ಮನ್ನಾವರಿಸಿ ರುವುದರಿಂದ, ಮನುಷ್ಯನೂ ದೇವರ ಅಂಶವೇ ಆಗಿರುವುದು ಹೌದಾದರೂ ಈ ಸೂಕ್ಷ್ಮವನ್ನು ಅರಿತುಕೊಳ್ಳುವಲ್ಲಿ ನಾವು ಸೋಲುತ್ತಿದ್ದೇವೆ. ನಮ್ಮೊಳಗಿರುವ ದೇವರಿಗೆ ನಮಗೆ ನಾವೇ ಅನ್ಯಾಯ ಮಾಡಿಕೊಳ್ಳುತ್ತಿದ್ದೇವೆ. ಇದಕ್ಕಾಗಿಯೇ ತೋರಿಕೆಯನ್ನು ತೊರೆದು ನಿನ್ನನ್ನು ನೀನು ತಿಳಿ ಅನ್ನುತ್ತದೆ ಉಪನಿಷತ್ತು ಎಂದರು.
ಡಾ. ನಾ. ಮೊಗಸಾಲೆ, ಎಸ್. ನಿತ್ಯಾನಂದ ಪೈ, ಮಿತ್ರಪ್ರಭಾ ಹೆಗ್ಡೆ, ಏರ್ ವೈಸ್ ಮಾರ್ಷಲ್ ರಮೇಶ್ ಕಾರ್ಣಿಕ್, ಅ.ಭಾ.ಸಾ.ಪ.ದ ರಾಜ್ಯ ಸಂಘಟನಾ ಕಾರ್ಯದರ್ಶಿ ನಾರಾಯಣ ಶೇವಿರೆ, ಹರಿಹರಪುರ ಪ್ರಭೋದಿನಿ ಗುರುಕುಲದ ಸಂಚಾಲಕ ಕೃಷ್ಣ ಶಾಸ್ತ್ರಿ, ಆರೆಸ್ಸೆಸ್ ತಾಲೂಕು ಸಂಘಚಾಲಕ ರತ್ನಾಕರ ಹೆಬ್ಬಾರ್ ಉಪಸ್ಥಿತರಿದ್ದರು. ಕುಮಾರಿ ಶಾರ್ವರಿ ಪ್ರಾರ್ಥಿಸಿ, ಮಾಲತಿ ವಸಂತ ನಿರೂಪಿಸಿದರು. ಸುಧಾಕರ್ ಶ್ಯಾನುಭೋಗ್ ಅತಿಥಿಗಳನ್ನು ಪರಿಚಯಿಸಿದರು. ಸದಾನಂದ ನಾರಾವಿ ಸ್ವಾಗತಿಸಿ, ಮಾಲತಿ ಜಿ. ಪ್ರಭು ವಂದಿಸಿದರು.









































































































error: Content is protected !!
Scroll to Top