ಪಶ್ಚಿಮ ಘಟ್ಟದ ತಪ್ಪಲಿನಿಂದ ಮಲೆಕುಡಿಯರನ್ನು ಒಕ್ಕಲೆಬ್ಬಿಸುವ ಹುನ್ನಾರ ಎಂದು ಆರೋಪ
ಕಾರ್ಕಳ: ಉಡುಪಿ ಜಿಲ್ಲೆಯ ಪಶ್ಚಿಮಘಟ್ಟ ತಪ್ಪಲಿನ ಪ್ರದೇಶಗಳಲ್ಲಿ ವಾಸವಾಗಿರುವ ಅರಣ್ಯ ಬುಡಕಟ್ಟು ಪರಿಶಿಷ್ಟ ಪಂಗಡ ಜನಾಂಗವಾದ ಮಲೆಕುಡಿಯ ಸಮುದಾಯದ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರ 100 ಕೋ. ರೂ. ವಿಶೇಷ ಅನುದಾನ ಒದಗಿಸಬೇಕೆಂದು ರಾಜ್ಯ ಮಲೆಕುಡಿಯ ಸಂಘದ ಅಧ್ಯಕ್ಷ ಶ್ರೀಧರ ಗೌಡ ಈದು ಆಗ್ರಹಿಸಿದ್ದಾರೆ.
ಉಡುಪಿಯ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಶ್ಚಿಮ ಘಟ್ಟ ಸಂರಕ್ಷಿಸುವ ನೆಪದಲ್ಲಿ ಅಲ್ಲಿನ ಮೂಲನಿವಾಸಿಗಳಾದ ಮಲೆಕುಡಿಯರನ್ನು ಒಕ್ಕಲೆಬ್ಬಿಸಿ ಅತಂತ್ರರನ್ನಾಗಿ ಮಾಡುವ ಹುನ್ನಾರ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಸರಕಾರದ ಮುಂದೆ ಮಲೆಕುಡಿಯರ ಬೇಡಿಕೆಗಳನ್ನು ಇಡುತ್ತಿದ್ದೇವೆ. ಬೇಡಿಕೆಯ ಮನವಿ ಪತ್ರವನ್ನು ಮುಖ್ಯಮಂತ್ರಿಯವರಿಗೆ ಅರ್ಪಿಸಲಾಗುವುದು ಎಂದರು.
ಮಲೆಕುಡಿಯರ ಪ್ರಮುಖ ಬೇಡಿಕೆಗಳು
1) ಮಲೆಕುಡಿಯ ಸಮುದಾಯದ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರ 100 ಕೋ. ರೂ. ವಿಶೇಷ ಅನುದಾನ ನೀಡಬೇಕು.

2) ಕೃಷಿಭೂಮಿ ರಹಿತರಿಗೆ 400 ಎಕರೆ ಜಾಗ ಮೀಸಲಿಡಬೇಕು.
3) ರಾಷ್ಟ್ರೀಯ ಉದ್ಯಾನವನ, ಅಭಯಾರಣ್ಯದಿಂದ ಸ್ವಇಚ್ಛೆಯಿಂದ ಹೊರಬರುವ ಕುಟುಂಬಗಳಿಗೆ ಗುಣಮಟ್ಟದ ಬದುಕು ಕಟ್ಟಿಕೊಳ್ಳಲು ವಸತಿ ಸಹಿತ ಕೃಷಿ ಭೂಮಿ, ಶಿಕ್ಷಣ, ಆರೋಗ್ಯ, ಉದ್ಯೋಗ ಸೇರಿದಂತೆ ಪೂರಕವಾದ ವ್ಯವಸ್ಥೆಗಳನ್ನು ಕಲ್ಪಿಸುವುದು.
4) ಪರಿಶಿಷ್ಟ ಪಂಗಡ ಒಳ ಮೀಸಲಾತಿ ಜಾರಿಗೊಳಿಸಬೇಕು ಹಾಗೂ ಸರ್ಕಾರಿ ಉದ್ಯೋಗ ನೇಮಕಾತಿಯಲ್ಲಿ ಅರಣ್ಯ ಇಲಾಖೆಯಲ್ಲಿರುವ ಸ್ಥಳೀಯ ಅರಣ್ಯ ಬುಡಕಟ್ಟು ಮೀಸಲಾತಿಯನ್ನು ಎಲ್ಲ ಇಲಾಖೆಗಳಿಗೆ ವಿಸ್ತರಣೆ ಮಾಡಬೇಕು.
5) ಆದಿವಾಸಿ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು.
6) ಕಸ್ತೂರಿ ರಂಗನ್ ವರದಿ ಜಾರಿಯನ್ನು ತಿರಸ್ಕರಿಸಿ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿರುವ ಎಲ್ಲ ಕುಟುಂಬಗಳಿಗೆ ರಸ್ತೆ, ವಿದ್ಯುತ್, ವಸತಿ ಸೇರಿದಂತೆ ಎಲ್ಲ ರೀತಿಯ ಮೂಲಸೌಕರ್ಯಗಳನ್ನು ಕಲ್ಪಿಸುವುದು.
7) ಸಮುದಾಯದಲ್ಲಿ ವೃತ್ತಿ ಶಿಕ್ಷಣ ಪಡೆದವರಿಗೆ ಸಂಬಂಧಿಸಿದ ಇಲಾಖೆಗಳಲ್ಲಿ ನೌಕರಿ ನೀಡುವುದು.
8) ಅರಣ್ಯ ಹಕ್ಕು ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿ ಅರಣ್ಯ ಹಕ್ಕುಪತ್ರ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಒದಗಿಸುವುದು.
ಜಿಲ್ಲಾ ಮಲೆಕುಡಿಯ ಸಂಘ ಉಡುಪಿ ಜಿಲ್ಲಾ ಅಧ್ಯಕ್ಷ ಗಂಗಾಧರ ಗೌಡ, ಪೂರ್ವಾಧ್ಯಕ್ಷ ಸುಧಾಕರ ಗೌಡ ನಾಡ್ಪಾಲು, ಉಪಾಧ್ಯಕ್ಷೆ ಶೋಭಾ, ಪ್ರಧಾನ ಕಾರ್ಯದರ್ಶಿ ಅಶೋಕ ಕೆರ್ವಾಶೆ, ವಕ್ತಾರ ದಿನೇಶ್ ಗೌಡ ಉಪಸ್ಥಿತರಿದ್ದರು.






































