ಕಾರ್ಕಳ : ಅಜೆಕಾರು ಹೊಬಳಿಯ ನಾಡಕಚೇರಿಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಬ ನ. 21ರಂದು ಜರಗಿತು. ಕ್ಷೇತ್ರದ ಶಾಸಕ ವಿ. ಸುನಿಲ್ ಕುಮಾರ್ ಉದ್ಘಾಟನೆ ನೆರವೇರಿಸಿದರು.
ಎಳ್ಳಾರೆ, ಕುಕ್ಕುಜೆ, ಕಡ್ತಲ, ಮರ್ಣೆ, ಶಿರ್ಲಾಲು, ಕೆರ್ವಾಶೆ, ಹೆರ್ಮುಂಡೆ, ಜಾರ್ಕಳ ಮುಂಡ್ಲಿ, ಹಿರ್ಗಾನ, ಯರ್ಲಪಾಡಿ, ಮಾಳ ಸೇರಿದಂತೆ 11 ಕಂದಾಯ ಗ್ರಾಮಗಳನ್ನು ಒಳಗೊಂಡಿರುವ ಈ ನಾಡಕಚೇರಿ ಸ್ವಂತ ಕಟ್ಟಡವಿಲ್ಲದೆ 38 ವರ್ಷಗಳಿಂದ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಮರ್ಣೆ ಗ್ರಾಮ ಪಂಚಾಯತ್ ವ್ಯಾಪ್ತಿಯ 30 ಸೆಂಟ್ಸ್ ಜಾಗದಲ್ಲಿ ಸರಕಾರದಿಂದ 18.84 ಲ. ರೂ . ಹಾಗೂ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯ 6.16 ಲ. ರೂ. ಅನುದಾನದಲ್ಲಿ ಸ್ವಂತ ನೂತನ ಕಟ್ಟಡ ನಿರ್ಮಾಣಗೊಂಡಿದೆ. ಕಟ್ಟಡದ ಕಾಮಗಾರಿ ಪೂರ್ಣಗೊಂಡು 9 ತಿಂಗಳುಗಳ ಬಳಿಕ ಉದ್ಘಾಟನೆಗೊಂಡಿದೆ.

ಈ ಸಂಧರ್ಭದಲ್ಲಿ ಮರ್ಣೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರಭಾವತಿ ನಾಯಕ್, ಕಾರ್ಕಳ ತಾಲೂಕು ತಹಶೀಲ್ದಾರ್ ಪ್ರದೀಪ್ ಆರ್., ಉಪತಹಶೀಲ್ದಾರ್ ಮಂಜುನಾಥ ನಾಯಕ್, ಅಜೆಕಾರು ನಾಡಕಚೇರಿ ಉಪತಹಶೀಲ್ದಾರ್ ನಮಿತಾ, ನಿವೃತ್ತ ತಹಶೀಲ್ದಾರರಾದ ಶಾಂತರಾಮ ಚಿಪ್ಳೋಣ್ಕರ್, ಮಾಧವ, ತಾ.ಪಂ. ಮಾಜಿ ಉಪಾಧ್ಯಕ್ಷ ಹರೀಶ್ ನಾಯಕ್, ಪಂಚಾಯತ್ ಸದಸ್ಯೆ ಯಶೋಧಾ ಶೆಟ್ಟಿ, ಕಂದಾಯ ನಿರೀಕ್ಷಕ ರಿಯಾಜ್ ಅಹಮ್ಮದ್, ಗ್ರಾ. ಪಂ. ಪಿಡಿಓ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
































































