ಅಮೆರಿಕದೊಂದಿಗೆ ಐತಿಹಾಸಿಕ ಒಪ್ಪಂದಕ್ಕೆ ಸಹಿ
ದೆಹಲಿ : ಭಾರತ ಸರಕಾರ ಅಮೆರಿಕ ಸೇನೆ ಬಳಸುತ್ತಿರುವ ವಿಧ್ವಂಸಕ MQ-9B ಪ್ರಿಡೆಟರ್ ಡ್ರೋನ್ ಗಳನ್ನು ಖರೀದಿ ಮಾಡಲು ನಿರ್ಧರಿಸಿದೆ. ಭಾರತೀಯ ಸೇನೆಯ ಸಾಮರ್ಥ್ಯ ವೃದ್ದಿಗೆ ಭಾರತ ಸರ್ಕಾರ ಅಮೆರಿಕದೊಂದಿಗೆ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದ್ದು, ಅದರಂತೆ ಅಮೆರಿಕ ಸೇನೆ ಬಳಸುತ್ತಿರುವ 31 MQ-9B ಪ್ರಿಡೆಟರ್ ಡ್ರೋನ್ ಗಳ ಖರೀದಿಗೆ ಮುಂದಾಗಿದೆ.
ಭಾರತ ಮತ್ತು ಅಮೆರಿಕ 31 ಪ್ರಿಡೇಟರ್ ಡ್ರೋನ್‌ಗಳಿಗಾಗಿ 32,000 ಕೋಟಿ ರೂ.ಗಳ ಒಪ್ಪಂದವನ್ನು ಅಂತಿಮಗೊಳಿಸಿದವು. ಇದು ಭಾರತೀಯ ಸೇನೆಯ ಕಣ್ಗಾವಲು ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಭದ್ರತಾ ಕ್ಯಾಬಿನೆಟ್ ಸಮಿತಿ (CCS) ಇಂದು ಇದನ್ನು ಸ್ವಾಧೀನಪಡಿಸಿಕೊಳ್ಳಲು ಅನುಮೋದನೆ ನೀಡಿತು. ಒಟ್ಟು 31 ಡ್ರೋನ್ ಗಳ ಪೈಕಿ 15 ಡ್ರೋನ್ ಗಳನ್ನು ಭಾರತೀಯ ನೌಕಾಪಡೆ ತೆಕ್ಕೆಗೆ ನೀಡಲಾಗುತ್ತಿದ್ದು, ಉಳಿದ 16 ಡ್ರೋನ್ ಗಳ ಪೈಕಿ ಭಾರತೀಯ ಸೇನೆಗೆ ಮತ್ತು ಭಾರತೀಯ ವಾಯುಸೇನೆಗೆ ತಲಾ 8 ಡ್ರೋನ್ ಗಳನ್ನು ಕರ್ತವ್ಯಕ್ಕೆ ನಿಯೋಜನೆ ಮಾಡಲಾಗುತ್ತದೆ ಎಂದು ಹೇಳಲಾಗಿದೆ.

ಇನ್ನು ಈ MQ-9B Predator droneಗಳು ಅತ್ಯಂತ ವಿಧ್ವಂಸಕಾರಿ ಡ್ರೋನ್ ಗಳಾಗಿದ್ದು, ಈ ಡ್ರೋನ್ ಗಳನ್ನು ಶತ್ರುಕಣ್ಣಿಗೆ ಕಾಣದ ಹಾಗೆ ಅತ್ಯಂತ ಎತ್ತರದಲ್ಲಿ ಹಾರಾಡುವಂತೆ ನಿರ್ಮಿಸಲಾಗಿದೆ. ಈ ಡ್ರೋನ್ 40,000 ಅಡಿ ಎತ್ತರದಲ್ಲಿ ಒಮ್ಮೆಗೆ 40 ಗಂಟೆಗಳ ಕಾಲ ಹಾರಾಟ ನಡೆಸಬಲ್ಲದು. ಅಲ್ಲದೆ ಇದು ಸುಮಾರು 2,155 ಕೆಜಿಯಷ್ಟು ಬಾಹ್ಯ ಪೇಲೋಡ್ ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದೆ.
ಭಾರತದಲ್ಲಿ ನಿರ್ವಹಣೆ, ದುರಸ್ತಿ ಮತ್ತು ಕೂಲಂಕುಷ ಪರೀಕ್ಷೆ (MRO) ಸೌಲಭ್ಯಕ್ಕಾಗಿ ವಿದೇಶಿ ಮಿಲಿಟರಿ ಮಾರಾಟ ಒಪ್ಪಂದಕ್ಕೆ ಇಂದು ಸಹಿ ಹಾಕಲಾಯಿತು. ಒಪ್ಪಂದವನ್ನು ಅಧಿಕೃತಗೊಳಿಸಲು ಅಮೆರಿಕ ಮಿಲಿಟರಿ ಮತ್ತು ಕಾರ್ಪೊರೇಟ್ ಪ್ರತಿನಿಧಿಗಳು ಈಗಾಗಲೇ ಭಾರತದಲ್ಲಿದ್ದಾರೆ. ಸಮಾರಂಭದಲ್ಲಿ ನೌಕಾ ವ್ಯವಸ್ಥೆಗಳ ಜಂಟಿ ಕಾರ್ಯದರ್ಶಿ ಮತ್ತು ಸ್ವಾಧೀನ ವ್ಯವಸ್ಥಾಪಕರು ಸೇರಿದಂತೆ ಉನ್ನತ ಭಾರತೀಯ ರಕ್ಷಣಾ ಅಧಿಕಾರಿಗಳು ಉಪಸ್ಥಿತರಿದ್ದರು.






























































