ವಿಧಾನ ಪರಿಷತ್ ಚುನಾವಣೆ – ಬಿಜೆಪಿ ಟಿಕೆಟ್ ಗಾಗಿ ಭಾರಿ ಪೈಪೋಟಿ

ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಈ ಚುನಾವಣೆಯಲ್ಲಿ ಸ್ಥಳೀಯ ಸಂಸ್ಥೆಗಳಾದ ಗ್ರಾಮ ಪಂಚಾಯತ್‌, ಪಟ್ಟಣ ಪಂಚಾಯತ್‌, ನಗರ ಪಂಚಾಯತ್‌, ನಗರಸಭೆ, ಮಹಾನಗರ ಪಾಲಿಕೆಯ ಚುನಾಯಿತ ಸದಸ್ಯರು ಮತದಾರರಾಗಿರುತ್ತಾರೆ. ತಾಲೂಕು ಪಂಚಾಯತ್‌ ಮತ್ತು ಜಿಲ್ಲಾ ಪಂಚಾಯತ್‌ ಸದಸ್ಯರಿಗೆ ಮತದಾನ ಹಕ್ಕು ಇದ್ದರೂ ಇನ್ನೂ ಈ ಎರಡು ಸ್ಥಳೀಯ ಘಟಕಗಳಿಗೆ ಚುನಾವಣೆ ನಡೆಯದೆ ಇರುವುದರಿಂದ ಹಾಗೂ ಮೊದಲಿನ ಸದಸ್ಯರ ಅವಧಿ ಮುಗಿಯದಿರುವುದರಿಂದ ಈ ಮತಗಳು ಈ ಸಲ ಇಲ್ಲ. ಸದ್ಯದ ಲೆಕ್ಕಾಚಾರದ ಪ್ರಕಾರ 6037 ಮತದಾರರಿದ್ದಾರೆ.

ಕಾಂಗ್ರೆಸ್‌ ಮತ್ತು ಬಿಜೆಪಿ ಪಾಲಿಗೆ ಇದು ಮಹತ್ವದ ಚುನಾವಣೆಯೇ ಆಗಿದ್ದರೂ, ಬಹುಮತ ಬಿಜೆಪಿಗೆ ಇರುವುದರಿಂದ ಕಾಂಗ್ರೆಸ್‌ ಗೆಲ್ಲುವ ಸಾಧ್ಯತೆ ಬಹಳ ಕಡಿಮೆ. ಆದರೂ ಎರಡೂ ಪಕ್ಷಗಳಲ್ಲಿ ಈ ಚುನಾವಣೆಯ ಟಿಕೆಟ್‌ಗಾಗಿ ಬಹಳಷ್ಟು ಆಕಾಂಕ್ಷಿಗಳು ಇದ್ದಾರೆ.

ಕಾಂಗ್ರೆಸ್‌ನಲ್ಲಿ ಪ್ರಮುಖವಾಗಿ ಮಾಜಿ ಶಾಸಕಿ ಶಕುಂತಲಾ ಶೆಟ್ಟಿಯವರ ಹೆಸರು ಕೇಳಿ ಬರುತ್ತಿದೆ. ಇನ್ನುಳಿದಂತೆ ಜಾತಿ ಲೆಕ್ಕಾಚಾರದಲ್ಲಿ ಕೆಲವರ ಹೆಸರು ಮುಂಚೂಣಿಯಲ್ಲಿ ಇದ್ದರೂ ಕಾಂಗ್ರೆಸ್‌ ಈ ಚುನಾವಣೆಗಾಗಿ ಬಹಳ ತಲೆಕೆಡಿಸಿಕೊಂಡಿಲ್ಲ.

ಆದರೆ ಬಿಜೆಪಿಯಲ್ಲಿ ಮಾತ್ರ ಈ ಒಂದು ಸ್ಥಾನಕ್ಕಾಗಿ ಸುಮಾರು ಒಂದು ಡಜನ್‌ ಆಕಾಂಕ್ಷಿಗಳಿದ್ದಾರೆ. ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌, ಉದಯ ಶೆಟ್ಟಿ ಕಿದಿಯೂರು, ಸುರೇಶ್ ನಾಯಕ್ ಕುಯಿಲಾಡಿ, ಶ್ಯಾಮಲಾ ಕುಂದರ್, ಮಟ್ಟಾರು ರತ್ನಾಕರ್ ಹೆಗ್ಡೆ, ಸುದರ್ಶನ್ ಮೂಡುಬಿದಿರೆ, ಗೀತಾಂಜಲಿ ಸುವರ್ಣ ಮಾಜಿ ಸಂಸದ ನಳಿನ್‌ ಕುಮಾರ್‌ ಕಟೀಲು, ದ.ಕ. ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್‌ ಕುಂಪಲ, ಮಾಜಿ ಶಾಸಕ ಸಂಜೀವ ಮಠಂದೂರು, ಅರುಣ್‌ ಪುತ್ತಿಲ, ಸಾಜ ರಾಧಾಕೃಷ್ಣ ಆಳ್ವ, ಮಾಜಿ ಸಚಿವ ನಾಗರಾಜ ಶೆಟ್ಟಿ ಸೇರಿ ಹಲವು ಪ್ರಮುಖ ನಾಯಕರು ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ.

ಆಕಾಂಕ್ಷಿಗಳ ಪೈಕಿ ಪ್ರಮೋದ್‌ ಮಧ್ವರಾಜ್‌ ಹೆಸರು ಅತ್ಯಂತ ಪ್ರಮುಖವಾಗಿ ಕೇಳಿಬರುತ್ತಿದೆ. ಕಾಂಗ್ರೆಸ್‌ನಿಂದ ಬಿಜೆಪಿಗೆ ಪಕ್ಷಾಂತರ ಮಾಡಿರುವ ಪ್ರಮೋದ್‌ಗೆ ಇನ್ನೂ ಬಿಜೆಪಿಯಲ್ಲಿ ಪ್ರಮುಖ ಎನ್ನುವಂಥ ಹುದ್ದೆ ಅಥವಾ ಸ್ಥಾನಮಾನ ಸಿಕ್ಕಿಲ್ಲ. ಹೀಗಾಗಿ ಅವರನ್ನು ವಿಧಾನ ಪರಷತ್‌ ಸದಸ್ಯ ಮಾಡಬೇಕೆಂಬ ಬಲವಾದ ಒತ್ತಡ ಇದೆ. ಇನ್ನುಳಿದಂತೆ ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್‌ ವಂಚಿತರಾಗಿರುವ ಸಂಜೀವ ಮಠಂದೂರು ಮತ್ತು ಲೋಕಸಭೆ ಚುನಾವಣೆ ಟಿಕೆಟ್‌ ವಂಚಿತ ನಳಿನ್‌ ಕುಮಾರ್‌ ಕಟೀಲು ಮೇಲ್ಮನೆ ಸ್ಥಾನಕ್ಕಾಗಿ ಬಹಳಷ್ಟು ಲಾಬಿ ಮಾಡುತ್ತಿದ್ದಾರೆ. ಪ್ರತಿಸಲ ಈ ಸ್ಥಾನ ಉಡುಪಿ ಜಿಲ್ಲೆಗೆ ಹೋಗುವುದರಿಂದ ಈ ಸಲ ದಕ್ಷಿಣ ಕನ್ನಡಕ್ಕೆ ಆದ್ಯತೆ ನೀಡಬೇಕೆಂಬ ವಾದದ ಬಲದ ಮೇಲೆ ಅವರು ಆಕಾಂಕ್ಷಿಗಳಾಗಿದ್ದಾರೆ.































































































































error: Content is protected !!
Scroll to Top