ಫೋಟೊಗಳೆಂದರೆ ನೆನಪಿನ ಖಜಾನೆಯಲ್ಲಿರುವ ಅಮೂಲ್ಯ ಮುತ್ತುಗಳು

ಒಂದು ಅದ್ಭುತವಾದ ಫೋಟೊ ಕಂಡಾಗ ವಾಹ್‌ ಎಂಬ ಉದ್ಗಾರ ತನ್ನಿಂದ ತಾನೇ ನಮ್ಮ ಬಾಯಿಂದ ಹೊರಡುತ್ತದೆ. ಹಳೆಯ ಫೋಟೊ ನೋಡಿದಾಗ ಒಂದು ಮಧುರವಾದ ಅನುಭೂತಿ ನಮಗಾಗುತ್ತದೆ. ಆ ಫೋಟೊದ ಜೊತೆಗೆ ತಳುಕು ಹಾಕಿಕೊಂಡಿರುವ ನೆನಪುಗಳು ಸುರುಳಿ ಬಿಚ್ಚಿಕೊಳ್ಳತೊಡಗುತ್ತವೆ. ಯಾವುದೋ ಒಂದು ನಗರವನ್ನು ಗುರುತಿಸಲು ಆ ನಗರದ ಒಂದು ಛಾಯಾಚಿತ್ರವೇ ಸಂಕೇತವಾಗುತ್ತದೆ, ಯಾವುದೋ ಒಂದು ಕರಾಳ ಘಟನೆಯನ್ನು ಬರೀ ಒಂದು ಫೊಟೊದ ಮೂಲಕ ತಲೆಮಾರುಗಳು ನೆನಪಿಟ್ಟುಕೊಳ್ಳುತ್ತವೆ. ಭೋಪಾಲ ಅನಿಲ ದುರಂತವಾಗಲಿ, ಗುಜರಾತಿನ ಹಿಂಸಾಚಾರವಾಗಲಿ, ಮುಂಬಯಿಯ ಕೋಮುಗಲಭೆಯಾಗಲಿ ಹೀಗೆ ಕೆಲವು ಕರಾಳ ಘಟನೆಗಳನ್ನು ಬರೀ ಒಂದು ಫೋಟೊದ ಮೂಲಕ ಗುರುತಿಸುವುದು ಸುದ್ದಿ ಮಾಧ್ಯಮಗಳಲ್ಲಿರುವ ವಾಡಿಕೆ.

ಮನುಷ್ಯ ತನ್ನ ಎಲ್ಲ ಮಧುರ ನೆನಪುಗಳನ್ನು ಫೋಟೊಗಳ ಮೂಲಕ ಭದ್ರವಾಗಿ ಕಾಪಿಟ್ಟುಕೊಂಡಿರುತ್ತಾನೆ. ಹೀಗೆ ಫೋಟೊ ಎನ್ನುವುದು ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿದೆ. ನಮ್ಮ ಸಂವೇದನೆಯನ್ನು ಬಡಿದೆಬ್ಬಿಸುವ, ನಮ್ಮ ನೆನಪುಗಳ ಭಂಡಾರದ ಆಳಕ್ಕಿಳಿಯುವ ಸಾಮರ್ಥ್ಯ ಇರುವುದು ಫೋಟೊಗಳಿಗೆ ಮಾತ್ರ. ಸುದ್ದಿಗಳಿಗೂ ಫೋಟೊಗಳಿಗೂ ಅವಿನಾಭಾವ ಸಂಬಂಧ. ಯಾವುದೇ ಸುದ್ದಿ ಜೊತೆ ಅದಕ್ಕೆ ಸಂಬಂಧಪಟ್ಟ ಫೋಟೊ ಇಲ್ಲದಿದ್ದರೆ ಆ ಸುದ್ದಿ ಪರಿಪೂರ್ಣ ಎಂದೆನಿಸಿಕೊಳ್ಳುವುದಿಲ್ಲ. ಒಂದು ಚಿತ್ರ ಸಾವಿರ ಪದಗಳಿಗೆ ಸಮ ಎನ್ನುವುದು ಪತ್ರಿಕೆಗಳಲ್ಲಿ ಪ್ರಕಟವಾಗುವ ಚಿತ್ರಗಳಿಗೆ ಸಂಬಂಧಿಸಿದಂತೆ ಇರುವ ನಂಬಿಕೆ. ಛಾಯಾಗ್ರಹಣಕ್ಕೆ ಇರುವ ಸಾಮರ್ಥ್ಯವೇ ಅಂತಹದ್ದು, ಪದಗಳಲ್ಲಿ ವರ್ಣಿಸಲಸಾಧ್ಯವಾದ ಅದೆಷ್ಟೋ ಮಾತುಗಳನ್ನು ಕೇವಲ ಒಂದು ಚಿತ್ರ ತಿಳಿಸುತ್ತದೆ. ಹೀಗೆ ನಮ್ಮ ಇಡೀ ಬದುಕನ್ನು ಆವರಿಸಿಕೊಂಡಿರುವ ಫೋಟೊಗಳನ್ನು ನೆನಪಿಸಿಕೊಳ್ಳಲು ವಿಶ್ವ ಛಾಯಾಗ್ರಹಣ ಎಂಬ ಒಂದು ದಿನವಿದೆ ಮತ್ತು ಅದು ಇಂದೇ (ಆಗಸ್ಟ್‌ 19) ಆಗಿದೆ.

ಫೋಟೊಗ್ರಫಿ ಅಥವಾ ಛಾಯಾಗ್ರಹಣ ಒಂದು ಸೃಜನಶೀಲ ಕಲೆ. ಚಿತ್ರವನ್ನು ಸೆರೆಹಿಡಿಯಲು ಒಂದೊಳ್ಳೆ ಕ್ಯಾಮರಾ ಇದ್ದರೆ ಸಾಲದು. ಆ ಚಿತ್ರವನ್ನು ಕ್ಯಾಮರಾ ಕಣ್ಣೊಳಗೆ ಸೆರೆಹಿಡಿಯುವ ಕಲೆಯೂ ಇರಬೇಕು. ಕ್ಯಾಮರಾ ಫೋಟೊವನ್ನು ಸೆರೆ ಹಿಡಿಯುತ್ತಾದರೂ ಆ ಫೋಟೊ ಹೇಗೆ ಇರಬೇಕೆಂದು ನಿರ್ಧರಿಸುವವ ಫೋಟೊಗ್ರಾಫರ್‌. ಕೋನ, ಬೆಳಕು, ಹಿನ್ನೆಲೆ, ಸಂದರ್ಭ ಹೀಗೆ ಒಂದು ಫೋಟೊ ಸೆರೆ ಹಿಡಿಯಲು ಹಲವು ಪೂರಕ ಅಂಶಗಳಿವೆ. ಇವೆಲ್ಲವನ್ನೂ ತಿಳಿದುಕೊಂಡವ ಮತ್ತು ಸೃಜನಶೀಲ ಕಲ್ಪನೆಗಳಿರುವವ ಒಂದೊಳ್ಳೆ ಫೋಟೊಗ್ರಾಫರ್‌ ಆಗಬಲ್ಲ. ಫೋಟೊಗ್ರಫಿಯಲ್ಲಿ ಆಸಕ್ತಿ ಹೊಂದಿರುವವರಿಗೆ ಈ ಕಲೆಯೇ ಸರ್ವಸ್ವ. ಹೀಗೆ ಛಾಯಾಗ್ರಹಣದಲ್ಲಿ ಆಸಕ್ತಿ ಇರುವವರಿಗೆ ಮೀಸಲಿರಿಸಲಾದ ವಿಶೇಷ ದಿನ ಇದು.

ಫೋಟೊಗ್ರಾಫಿ ಎನ್ನುವುದು ಈಗ ಬಹಳಷ್ಟು ಪ್ರಗತಿಯನ್ನು ಸಾಧಿಸಿದೆ. ಕಪ್ಪುಬಿಳುಪಿನಿಂದ ಹಿಡಿದು ವರ್ಣದ ವರೆಗೆ ಫೋಟೊಗ್ರಾಫಿ ಬೆಳೆದುಬಂದ ರೀತಿ ಅದ್ಭುತ. ನಗರಗಳಲ್ಲಿ ಮಾತ್ರ ಇರುತ್ತಿದ್ದ ಸ್ಟುಡಿಯೊಗಳಿಗೆ ಹೋಗಿ ಒಂದು ಕಪ್ಪುಬಿಳುಪು ಫೋಟೊ ತೆಗೆಸಿಕೊಂಡು ಬರುತ್ತಿದ್ದ ದಿನಗಳಿದ್ದವು. ಆಗ ಒಂದು ಫೋಟೊ ಕೈಗೆ ಬರಬೇಕಾದರೆ ಕನಿಷ್ಠ 15 ದಿನ ಬೇಕಾಗುತ್ತಿತ್ತು. ಕಪ್ಪುಬಿಳುಪಿನಿಂದ ಬಣ್ಣಗಳ ಫೋಟೊಗ್ರಾಫಿ ತಂತ್ರಜ್ಞಾನ ಬಂದ ಬಳಿಕ ಫೋಟೊಗ್ರಾಫಿ ಕ್ಷೇತ್ರದಲ್ಲಿ ಕ್ರಾಂತಿಯೇ ಆಯಿತು. ಹೊಸ ಹೊಸ ಕ್ಯಾಮರಾಗಳು ಬಂದವು. ಆದರೆ ಆಗ ಫೊಟೊಫೋಟೊಗ್ರಾಫಿ ಎನ್ನುವುದು ಶ್ರೀಮಂತರಿಗೆ ಮಾತ್ರ ದಕ್ಕುವ ಖಯಾಲಿಯಾಗಿತ್ತು. ಕ್ಯಾಮರಾಗಳು, ರೀಲ್‌ಗಳು ದುಬಾರಿಯಾಗಿದ್ದವು.

ಫೋಟೊಗ್ರಾಫಿಯಲ್ಲಿ ನಿಜವಾದ ಕ್ರಾಂತಿ ಆದದ್ದು ಡಿಜಿಟಲ್‌ ತಂತ್ರಜ್ಞಾನ ಫೋಟೊಗ್ರಾಫಿಯೊಳಗೆ ಇಳಿದು ಬಂದ ಬಳಿಕ. ಮೊದಲು ಬಂದದ್ದು ಡಿಜಿಟಲ್‌ ಕ್ಯಾಮರಾಗಳು. ನಂತರ ಮೊಬೈಲ್‌ಗಳಲ್ಲಿ ಕ್ಯಾಮರಾ ಬಂದ ಬಳಿಕವಂತೂ ಎಲ್ಲರೂ ಫೋಟೊಗ್ರಾಫರ್‌ಗಳಾದರು. ಪ್ರತಿಕ್ಷಣವನ್ನು ಕೂಡ ಫೋಟೊದಲ್ಲಿ ಸೆರೆಹಿಡಿಯುವುದು ಈಗ ಸುಲಭವಾಗಿದೆ. ಅತ್ಯುತ್ತಮ ಗುಣಮಟ್ಟವುಳ್ಳ ಕ್ಯಾಮರಾ ಹೊಂದಿರುವ ಮೊಬೈಲ್‌ಗಳು ಮಾರ್ಕೆಟ್‌ನಲ್ಲಿ ಲಭ್ಯವಿವೆ. ಸಣ್ಣ ಪುಟ್ಟ ಸಮಾರಂಭಗಳನ್ನು ಫೋಟೊಗ್ರಾಫರ್‌ಗಳ ಹಂಗಿಲ್ಲದೆ ಮೊಬೈಲ್‌ ಫೋಟೊದ ಮೂಲಕವೇ ಮುಗಿಸುವಷ್ಟು ಫೋಟೊಗ್ರಾಫಿ ಎನ್ನುವುದು ಜನರಿಗೆ ನಿಟಕವಾಗಿದೆ.

ಫೋಟೊ ಇತಿಹಾಸ

ಸೂಜಿ ಮೊನೆಯಷ್ಟು ಗಾತ್ರದ ಚಿಕ್ಕ ರಂದ್ರದ ಮೂಲಕ ಬೆಳಕನ್ನು ಬಿಳಿ ಹಾಳೆಯ ಮೇಲೆ ಹಾಯಿಸಿ, ವ್ಯಕ್ತಿಯ ಅಥವಾ ದೃಶ್ಯದ ಚಿತ್ರಗಳನ್ನು ರೇಖೆಗಳ ಮುಖಾಂತರ ಕೈಯಲ್ಲಿ ಚಿತ್ರಿಸಬೇಕಾಗಿತ್ತು. ನಂತರ ಭೂತ ಕನ್ನಡಿಯ ಮೂಲಕ ರಾಸಾಯನಿಕ ಲೇಪನದ ಹಾಳೆಯ ಮೇಲೆ ಚಿತ್ರವನ್ನು ಪಡೆಯುತ್ತಿದ್ದರು. ಮುಂದೆ ರಾಸಾಯನಿಕ ಲೇಪನದ ಫಿಲಂ ರೋಲ್‌ಗಳ ಬಳಕೆ ಆರಂಭವಾಯಿತು. ಸಾವಿರಾರು ಅಡಿಗಳಿಗಿಂತಲೂ ಉದ್ದದ ರೋಲ್ ಫಿಲಂಗಳ ಮೇಲೆ ಚಿತ್ರೀಕರಿಸುತ್ತಿದ್ದ ಚಲನಚಿತ್ರ ಮಾಧ್ಯಮ ಮತ್ತು ಸ್ಥಿರ ಚಿತ್ರಣ ಇಂದು ಅರ್ಧ ಬೆರಳಿನ ಗಾತ್ರದ ಚಿಪ್ಪಿನ ಮೇಲೆ ದಾಖಲಿಸುವಂತೆ ಆದದ್ದು ವಿಶ್ವದ ಅದ್ಭುತವೇ ಸರಿ. ಒಂದು ಕಾಲದಲ್ಲಿ ಶ್ರೀಮಂತರ ಸೊತ್ತಾಗಿದ್ದ ಈ ಫೋಟೋಗ್ರಾಫಿ ಮೊಬೈಲ್ ಮುಖಾಂತರ ಜನಸಾಮಾನ್ಯರ ಮತ್ತು ಎಳೆಯರ ಕೈಗಳಿಗೂ ತಲುಪಿದೆ.

ವಿಶ್ವ ಛಾಯಾಗ್ರಹಣ ದಿನದ ಹಿನ್ನೆಲೆ

1837ರಲ್ಲಿ ಲೂಯಿಸ್ ಡಾಗುರ್ರೆ (Louis Daguerre) ಎಂಬವರು ಫೋಟೊಗ್ರಫಿಗೆ ಬೇಕಾದ ಪರಿಕರ ಡಾಗ್ಯುರೋಟೈಪ್‌(daguerreotype) ಅನ್ನು ಆವಿಷ್ಕರಿಸಿದರು. ಡಾಗ್ಯುರೋಟೈಪ್‌ ಎಂಬುದು ಫೋಟೋಗ್ರಫಿಗೆ ಬೇಕಾದ ಪ್ರಮುಖ ಪ್ರಕ್ರಿಯೆ. ಹೀಗಾಗಿ ಈ ಪ್ರಕ್ರಿಯೆಯನ್ನು ಅಭಿವೃದ್ಧಿಪಡಿಸಿದ ದಿನವನ್ನು ಸ್ಮರಿಸುವ ಸಲುವಾಗಿ ಪ್ರತಿ ವರ್ಷ ಆಗಸ್ಟ್ 19ರಂದು ವಿಶ್ವ ಛಾಯಾಗ್ರಹಣ ದಿನ ಆಚರಿಸಲಾಗುತ್ತದೆ. ಇದು ಛಾಯಾಗ್ರಹಣದ ಇತಿಹಾಸದಲ್ಲಿಯೇ ಮಹತ್ವದ ಮೈಲಿಗಲ್ಲಾಗಿದೆ. ಆಧುನಿಕ ಡಿಜಿಟಲ್‌ ಯುಗದಲ್ಲಿ ಫೋಟೊಗ್ರಾಫಿ ಎಂಬುದು ಒಂದು ಉದ್ದಿಮೆಯಾಗಿ ಬೆಳೆದಿದೆ. ಆದರೆ, ಫೋಟೋಗ್ರಾಫಿ ಎಂಬ ಕಲೆ ಹುಟ್ಟಿಕೊಂಡ ಈ ದಿನವನ್ನು ಇಂದಿಗೂ ಸ್ಮರಿಸಲಾಗುತ್ತಿದೆ.

ಛಾಯಾಗ್ರಹಣ ದಿನದ ಮಹತ್ವ

ವಿಶ್ವ ಛಾಯಾಗ್ರಹಣ ದಿನವು ಛಾಯಾಗ್ರಹಣವೆಂಬುದು ಒಂದು ಕಲೆ ಎಂಬುದನ್ನು ಎತ್ತಿ ತೋರಿಸುತ್ತದೆ. ವಿಭಿನ್ನ ತಂತ್ರ, ಸಂಯೋಜನೆ, ಕ್ರೀಯಾಶೀಲತೆ ಮತ್ತು ತಮ್ಮದೇ ಆದ ವಿಭಿನ್ನ ಶೈಲಿಗಳೊಂದಿಗೆ ಫೋಟೋಗ್ರಫಿಯ ಪ್ರಯೋಗಕ್ಕೆ ಛಾಯಾಗ್ರಾಹಕರನ್ನು ಈ ದಿನ ಪ್ರೋತ್ಸಾಹಿಸುತ್ತದೆ. ಒಂದು ಫೋಟೊ ಕೇವಲ ಒಂದು ಚಿತ್ರ ಮಾತ್ರವಲ್ಲ. ಅದರಲ್ಲಿ ಆ ಛಾಯಾಗ್ರಾಹಕನ ಭಾವ ಅಡಕವಾಗಿರುತ್ತದೆ. ಆತನ ಕಥೆಗಳನ್ನು ಚಿತ್ರರೂಪದಲ್ಲಿ ಸೆರೆಹಿಡಿದಿರುತ್ತಾನೆ. ತನ್ನ ಭಾವನೆಗಳನ್ನು ಸೆರೆಹಿಡಿಯಲು ಮತ್ತು ನೆನಪುಗಳನ್ನು ಚಿತ್ರರೂಪಕ್ಕೆ ಇಳಿಸಲು ಛಾಯಾಗ್ರಹಕ ಬಹಳ ಪರಿಶ್ರಮಪಡಬೇಕಾಗುತ್ತದೆ. ಇಂದು ಛಾಯಾಗ್ರಹಣವು ಒಂದು ಉದ್ದಿಮೆಯಾಗಿ ಬೆಳೆದಿದೆ. ಸಾಕಷ್ಟು ವೃತ್ತಿಪರ ಫೋಟೊಗ್ರಾಫರ್‌ಗಳು ಹುಟ್ಟಿಕೊಂಡಿದ್ದಾರೆ. ಅಂತೆಯೇ ಅನೇಕ ಮಂದಿಗೆ ಬದುಕನ್ನೂ ಕೊಟ್ಟಿದೆ.







































error: Content is protected !!
Scroll to Top