ಶ್ರಾವಣದ ನಾಲ್ಕನೇ ಸೋಮವಾರ ವಿಶೇಷ ಪೂಜೆ ಸಲ್ಲಿಸಲು ಬಂದಿದ್ದ ಭಕ್ತರು
ಪಾಟ್ನ : ಬಿಹಾರದ ಸಿದ್ದೇಶ್ವರನಾಥ ದೇವಸ್ಥಾನದಲ್ಲಿ ಇಂದು ಮುಂಜಾನೆ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ ಕನಿಷ್ಠ 7 ಭಕ್ತರು ಸಾವನ್ನಪ್ಪಿ ಅನೇಕ ಜನರು ಗಾಯಗೊಂಡಿದ್ದಾರೆ. ಸ್ಥಳೀಯ ಮಖ್ದುಂಪುರ್ ಆಸ್ಪತ್ರೆ ಹಾಗೂ ಜೆಹಾನಾಬಾದ್ ಸದರ್ ಆಸ್ಪತ್ರೆಯಲ್ಲಿ ಹಲವು ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಿಹಾರದ ಜೆಹಾನಾಬಾದ್‌ನಲ್ಲಿರುವ ಸಿದ್ದೇಶ್ವರನಾಥ ದೇವಾಲಯಕ್ಕೆ ಶ್ರಾವಣದ ನಾಲ್ಕನೇ ಸೋಮವಾರದಂದು ಪೂಜೆ ಸಲ್ಲಿಸಲು ಹೋಗಿದ್ದ ಭಕ್ತಾದಿಗಳು ಕಾಲ್ತುಳಿದಿಂದ ಸಾವನ್ನಪ್ಪಿದ್ದಾರೆ. ಏಳು ಜನರ ಸಾವನ್ನು ಆಡಳಿತ ದೃಢಪಡಿಸಿದೆ. ಅಲ್ಲದೆ ಹಲವರಿಗೆ ಗಾಯಗಳಾಗಿವೆ. ಶ್ರಾವಣ ನಾಲ್ಕನೇ ಸೋಮವಾರದ ನಿಮಿತ್ತ ಬಾಬಾ ಸಿದ್ದೇಶ್ವರನಾಥ ದೇವಸ್ಥಾನದಲ್ಲಿ ಇಂದು ಬೆಳಗ್ಗೆ ಅಪಾರ ಸಂಖ್ಯೆಯ ಭಕ್ತರು ಜಮಾಯಿಸಿದ ಕಾರಣ ನೂಕುನುಗ್ಗಲು ಏರ್ಪಟ್ಟು ಈ ದುರಂತ ಸಂಭವಿಸಿದೆ.
ಭಕ್ತರು ರಾಬರ್ ಎಂಬ ಬೆಟ್ಟ ಹತ್ತುವಾಗ ಮೆಟ್ಟಿಲುಗಳ ಮೇಲೆ ಹಠಾತ್ ಕಾಲ್ತುಳಿತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಜನರು ಒಬ್ಬರನ್ನೊಬ್ಬರು ತುಳಿದುಕೊಳ್ಳುತ್ತಾ ಓಡತೊಡಗಿದರು. ಪೊಲೀಸರು ಪರಿಸ್ಥಿತಿ ನಿಯಂತ್ರಿಸುವಷ್ಟರಲ್ಲಿ ಏಳು ಮಂದಿ ಸಾವನ್ನಪ್ಪಿದ್ದರು.
























