ಸಹಕಾರಿ ಕ್ಷೇತ್ರದಲ್ಲಿ ಏಕರೂಪಿ ತಂತ್ರಜ್ಞಾನ ಅಳವಡಿಕೆ : ಸುರೇಶ್ ಪ್ರಭು

ಉಡುಪಿ: ದೇಶದಲ್ಲಿ ಜಾರಿಗೆ ತರಲುದ್ದೇಶಿಸಿರುವ ರಾಷ್ಟ್ರೀಯ ಸಹಕಾರಿ ನೀತಿಯಲ್ಲಿ ಸಹಕಾರಿ ಕ್ಷೇತ್ರದ ಬೆಳವಣಿಗೆಗೆ ಏಕರೂಪಿ ತಂತ್ರಜ್ಞಾನದ ಅಳವಡಿಕೆಗೆ ಆದ್ಯತೆ ನೀಡಲಾಗಿದೆ ಎಂದು ರಾಷ್ಟ್ರೀಯ ಸಹಕಾರಿ ನೀತಿ ಆಯೋಗದ ಅಧ್ಯಕ್ಷ, ಕೇಂದ್ರದ ಮಾಜಿ ಸಚಿವ ಸುರೇಶ್ ಪಿ. ಪ್ರಭು ಹೇಳಿದ್ದಾರೆ.
ಉಡುಪಿಯ ಹೋಟೇಲ್ ಡಯಾನದ ಸಭಾಂಗಣದಲ್ಲಿ ಭಾನುವಾರ ಸಹಕಾರ ಭಾರತಿ ಉಡುಪಿ ಜಿಲ್ಲಾ ಸಮಿತಿಯ ವತಿಯಿಂದ ಆಯೋಜಿಸಿದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

ಭವಿಷ್ಯದ ಭಾರತದಲ್ಲಿ ಸಹಕಾರಿ ಕ್ಷೇತ್ರ ಆರ್ಥಿಕ, ವಾಣಿಜ್ಯ, ಉದ್ಯಮ ಮತ್ತು ಸಾಮಾಜಿಕ ರಂಗಗಳಲ್ಲಿ ಪ್ರಮುಖ ಪಾತ್ರ ವಹಿಸಲಿದ್ದು, ಸಹಕಾರಿ ಕ್ಷೇತ್ರದಲ್ಲಿ ದೇಶವ್ಯಾಪಿ ಏಕರೂಪಿ ತಂತ್ರಜ್ಞಾನ ಜಾರಿಗೆ ತಂದು ಭವಿಷ್ಯದ ಆರ್ಥಿಕತೆಯ ನಾಯಕತ್ವ ವಹಿಸಲು ಸಹಕಾರಿ ಕ್ಷೇತ್ರವನ್ನು ಸಜ್ಜುಗೊಳಿಸಲಾಗುವುದು ಎಂದವರು ತಿಳಿಸಿದ್ದಾರೆ.

ಅಧ್ಯಕ್ಷತೆ ವಹಿಸಿದ್ದ ಉಡುಪಿ ಶಾಸಕ ಸಹಕಾರ ರತ್ನ ಯಶ್‌ಪಾಲ್ ಸುವರ್ಣ ಮಾತನಾಡಿ, ಕೇಂದ್ರದಲ್ಲಿ ನೂತನ ಸಹಕಾರಿ ಸಚಿವಾಲಯ ರಚನೆಯಾದ ಬಳಿಕ ಸಹಕಾರಿ ಕ್ಷೇತ್ರದಲ್ಲಿ ಬದಲಾವಣೆಯ ಪರ್ವ ಆರಂಭಗೊಂಡಿದ್ದು, ಈ ಬಗ್ಗೆ ಸಹಕಾರ ಭಾರತಿ ಇನ್ನಷ್ಟು ಹೆಚ್ಚಿನ ಆಸಕ್ತಿಯಿಂದ ಸಂಘಟನಾತ್ಮಕವಾಗಿ ಗ್ರಾಮಮಟ್ಟದ ಸಹಕಾರಿಗಳನ್ನು ತಲುಪಲು ಕಾರ್ಯೋನ್ಮುಖವಾಗಬೇಕೆಂದು ಹೇಳಿದರು.

ಸಹಕಾರ ಭಾರತಿ ಉಡುಪಿ ಜಿಲ್ಲಾಧ್ಯಕ್ಷ ಬೋಳ ಸದಾಶಿವ ಶೆಟ್ಟಿಯವರು ಸುರೇಶ್ ಪಿ. ಪ್ರಭು ಮತ್ತು ಅವರ ಪತ್ನಿ ವಿಶ್ರಾಂತ ಪತ್ರಕರ್ತೆ ಉಮಾ ಸುರೇಶ್ ಪ್ರಭು ಅವರನ್ನು ಸನ್ಮಾನಿಸಿದರು.

ನೂತನ ರಾಷ್ಟ್ರೀಯ ಸಹಕಾರಿ ನೀತಿಯಲ್ಲಿ ಹಾಲು ಉತ್ಪಾದಕರ ಸಂಘಗಳನ್ನು ವಿವಿಧೋದ್ದೇಶ ಹೈನುಗಾರಿಕಾ ಸಂಘಗಳಾಗಿ ಪರಿವರ್ತಿಸಲು ಅವಕಾಶ, ಕೇಂದ್ರ ಸರಕಾರದಿಂದ ರೈತರ ಖಾತೆಗಳಿಗೆ ನೇರವಾಗಿ ಪ್ರತಿ ಲೀಟರಿಗೆ 5 ರೂ. ಪ್ರೋತ್ಸಾಹಧನ, ಜಿಲ್ಲಾಮಟ್ಟದಲ್ಲಿ ಪ್ರತ್ಯೇಕ ಸಹಕಾರಿ ನ್ಯಾಯಾಲಯಗಳ ಸ್ಥಾಪನೆ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಕೇಂದ್ರ ಸರಕಾರದಿಂದ ನಿರ್ವಹಿಸಲ್ಪಡುವ ಪ್ರತ್ಯೇಕ ರೈತ ಜನೋಪಯೋಗಿ ಕೇಂದ್ರಗಳ ಸ್ಥಾಪನೆ ಮೊದಲಾದ ವಿಚಾರಗಳನ್ನು ಅಳವಡಿಸಬೇಕೆಂಬ ಬೇಡಿಕೆಗಳಿರುವ ಮನವಿಯನ್ನು ಸಹಕಾರ ಭಾರತಿ ವತಿಯಿಂದ ರಾಷ್ಟ್ರೀಯ ಮತ್ಸ್ಯ ಪ್ರಕೋಷ್ಠದ ಸಹಸಂಚಾಲಕ ಮಂಜುನಾಥ ಎಸ್.ಕೆ ಸಲ್ಲಿಸಿದರು.

ಉಡುಪಿ ಜಿಲ್ಲಾ ಸಹಕಾರ ಭಾರತಿ ಸಂಘಟನಾ ಕಾರ್ಯದರ್ಶಿ ಸುಜಿತ್ ಶೆಟ್ಟಿ, ಜಿಲ್ಲಾ ಸಹಕಾರ ಭಾರತಿ ಪದಾಧಿಕಾರಿಗಳು ಹಾಗೂ ಜಿಲ್ಲೆಯ ವಿವಿಧ ಸಹಕಾರಿ ಸಂಸ್ಥೆಗಳ ಪ್ರತಿನಿಧಿಗಳಾದ ರವೀಂದ್ರ ನಾಯಕ್ ನೀರೆ, ಮಧುಸೂದನ ನಾಯಕ್ ಭೈರಂಜೆ, ಸಿಎ ಗಿರೀಶ್ ಪೈ ಬ್ರಹ್ಮಾವರ, ಮುರಳೀಧರ್ ಪೈ ಕಟಪಾಡಿ, ವಿನಯ ಶೆಟ್ಟಿ ನೀರೆ, ವಿವೇಕ್ ಶೆಟ್ಟಿ ಎರ್ಲಪಾಡಿ, ಸತೀಶ್ ಬ್ರಹ್ಮಾವರ, ಪ್ರಕಾಶ್ ಸುವರ್ಣ ಕಟಪಾಡಿ, ಪ್ರಶಾಂತ್ ಕುಮಾರ್ ಶೀರೂರ್, ರಘುರಾಮ ಮರಕಾಲ, ನ್ಯಾಯವಾದಿ ಸಹಕಾರಿ ಸಂಘದ ಸದಾಶಿವ ಶೆಟ್ಟಿ, ಪದ್ಮನಾಭ ಉಪಸ್ಥಿರಿದ್ದರು.

ಸಹಕಾರ ಭಾರತಿ ರಾಜ್ಯ ಹಾಲು ಪ್ರಕೋಷ್ಠದ ಸಂಚಾಲಕ ಸಾಣೂರು ನರಸಿಂಹ ಕಾಮತ್‌ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಕಳ ಪೀಕಾರ್ಡ್ ಬ್ಯಾಂಕಿನ ನಿರ್ದೇಶಕ ಮುಂಡ್ಕೂರು ರಘುವೀರ ಶೆಣೈ ವಂದಿಸಿದರು.

















































error: Content is protected !!
Scroll to Top