ಭೂ ಕುಸಿತ ಪ್ರದೇಶವಾಗಿ ಕನ್ಯಾನ ರಾಷ್ಟ್ರೀಯ ಹೆದ್ದಾರಿ

ಹೆಬ್ರಿ : ಹೆಬ್ರಿ ತಾಲೂಕು ವ್ಯಾಪ್ತಿಯ ಕನ್ಯಾನದ ಬನಶಂಕರಿ ಸಮೀಪ ರಾಷ್ಟ್ರೀಯ ಹೆದ್ದಾರಿ 169ಎ ಯಲ್ಲಿ ಮಣ್ಣು ಕುಸಿದಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಹೆಬ್ರಿ ತಹಶೀಲ್ದಾರ್‌ ಎಸ್. ಎ. ಪ್ರಸಾದ್ ಭೂ ಕುಸಿತ ಪ್ರದೇಶವನ್ನಾಗಿ ಘೋಷಿಸಿದ್ದಾರೆ.

ಮಲ್ಪೆಯಿಂದ ಹೆಬ್ರಿ ಆಗುಂಬೆಯಾಗಿ ಶಿವಮೊಗ್ಗ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಇದಾಗಿದೆ. ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಸಣ್ಣ ಪ್ರಮಾಣದಲ್ಲಿ ನಿರಂತರವಾಗಿ ಹೆದ್ದಾರಿಯ ಅಂಚು ಕುಸಿಯುತ್ತಿರುವುದರಿಂದ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಅಲ್ಲದೆ ಸಮೀಪದಲ್ಲೇ ವಿದ್ಯುತ್ ತಂತಿ ಹಾದು ಹೋಗಿರುವುದರಿಂದ ಅಪಾಯದ ಸಾಧ್ಯತೆಯಿದೆ. ಆದ್ದರಿಂದ ತಹಶೀಲ್ದಾರ್‌ ವಿದ್ಯುತ್‌ ಕಂಬ ತೆರವುಗೊಳಿಸುವಂತೆ ಮೆಸ್ಕಾಂಗೆ ತಿಳಿಸಿದ್ದಾರೆ.

ಟಾರ್ಪಲ್‌ ಹೊದಿಕೆ
ಹೆಬ್ರಿ ತಾಲೂಕು ಆಡಳಿದ ಸೂಚನೆಯ ಮೇರೆಗೆ ಕುಸಿಯುತ್ತಿರುವ ಸ್ಥಳಕ್ಕೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳು ಟಾರ್ಪಲ್ ಹೊದಿಸಿ ನೀರು ಬೀಳದಂತೆ ಮುಂಜಾಗ್ರತೆ ವಹಿಸಿದ್ದಾರೆ. ದೀರ್ಘಕಾಲದ ಬಳಕೆಯ ಉದ್ದೇಶದಿಂದ ಮುಂದಿನ ದಿನಗಳಲ್ಲಿ ಇಲ್ಲಿ ಕಾಂಕ್ರೀಟ್ ವಾಲ್ ಮಾಡಲಾಗುವುದು. ಮಳೆ ನಿಂತ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ರಾಷ್ಟ್ರೀಯ ಹೆದ್ದಾರಿ ಇಲಾಖೆಯ‌ ಇಂಜಿನಿಯರ್ ತಿಳಿಸಿದ್ದಾರೆ.
ತಹಶೀಲ್ದಾರ್‌ ಜೊತೆಗೆ ಹೆಬ್ರಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಶಶಿಧರ್ ಕೆಜೆ, ಹೆಬ್ರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ತಾರಾನಾಥ ಬಂಗೇರ, ಗ್ರಾಮ ಆಡಳಿತ ಅಧಿಕಾರಿ ನವೀನ್ ಕುಮಾರ್ ಕುಕ್ಕುಜೆ ಉಪಸ್ಥಿತರಿದ್ದರು.





























































































































error: Content is protected !!
Scroll to Top