ಹಗರಣಗಳ ಸುಳಿಯಲ್ಲಿ ಸಿಲುಕಿ ಸಿಎಂ ಹೈರಾಣ
ಕಾರ್ಕಳ : ವಾಲ್ಮೀಕಿ ನಿಗಮದ ಹಣ ದುರುಪಯೋಗ, ವ್ಯಾಪಕ ಭ್ರಷ್ಟಾಚಾರ, ಮೈಸೂರಿನಲ್ಲಿ ಮುಡಾದಿಂದ ಅಕ್ರಮವಾಗಿ ನಿವೇಶನ ಪಡೆದಿರುವ ಅರೋಪ ರಾಜ್ಯ ಸರ್ಕಾರಕ್ಕೆ ತೀವ್ರ ಮುಜುಗರ ಉಂಟು ಮಾಡಿರುವುದು ನಿಜ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೇ ನೇರ ಗುರಿಯಾಗಿರಿಸಿಕೊಂಡೇ ಈ ಹಗರಣಗಳ ಆರೋಪ ಕೇಳಿಬಂದಿರುವುದು ಗಮನಾರ್ಹ ಅಂಶ. ಅದರಲ್ಲೂ ಮುಡಾ ಹಗರಣದಲ್ಲಿ ನೇರವಾಗಿ ಸಿದ್ದರಾಮಯ್ಯ ಅವರೇ ಫಲಾನುಭವಿಗಳಾಗಿರುವುದು ಕಾಂಗ್ರೆಸ್ ಪಾಲಿಗೆ ನುಂಗಲಾರದ ಬಿಸಿ ತುಪ್ಪದಂತಾಗಿದೆ. ದಿನಕ್ಕೊಂದು ತಿರುವು ಪಡೆದುಕೊಂಡ ಈ ಹಗರಣ ಈಗ ರಾಜ್ಯಪಾಲರು ವರ್ಸಸ್ ಸರಕಾರ ಎಂಬಲ್ಲಿಗೆ ಬಂದು ನಿಂತಿದೆ.
ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ನೋಟಿಸ್ ನೀಡುವುದರೊಂದಿಗೆ ಸಂಘರ್ಷ ತಾರಕಕ್ಕೇರಿದೆ. ನೋಟಿಸ್ಗೆ ಪ್ರತಿಯಾಗಿ ಗುರುವಾರ ಸಂಪುಟ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ. ದಿಲ್ಲಿ ಪ್ರವಾಸದಲ್ಲಿರುವ ರಾಜ್ಯಪಾಲರು ಆಗಸ್ಟ್ 4ಕ್ಕೆ ಬೆಂಗಳೂರಿಗೆ ಮರಳಲಿದ್ದಾರೆ. ಆಗಸ್ಟ್ 5ರಂದು ಸರ್ಕಾರದ ನಿರ್ಣಯ ಮತ್ತು ಸಿಎಂ ಸಿದ್ದರಾಮಯ್ಯ ಅವರ ವಿವರಣೆಯನ್ನು ಪರಿಶೀಲನೆ ನಡೆಸಲಿದ್ದಾರೆ. ನಿರ್ಣಯವನ್ನು ಒಪ್ಪುವುದು, ತಿರಸ್ಕರಿಸುವುದು ರಾಜ್ಯಪಾಲರ ವಿವೇಚನೆ ಬಿಟ್ಟ ವಿಚಾರ. ಒಂದು ವೇಳೆ ರಾಜ್ಯಪಾಲರು ನಿರ್ಣಯವನ್ನು ತಿರಸ್ಕರಿಸಿದ್ದೇ ಆದರೆ ಸಿದ್ದರಾಮಯ್ಯ ಬಂಧನಕ್ಕೆ ಮುಹೂರ್ತ ಫಿಕ್ಸ್ ಮಾಡಿದಂತೆಯೇ ಎನ್ನಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ದಿಲ್ಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೂ ಗುರಿಯಾಗಿಸಲಾಗಿದೆ ಎಂದು ಕಾಂಗೆಸ್ಸಿಗರು ಪುಂಖಾನುಪುಂಖವಾಗಿ ಆರೋಪಗಳನ್ನು ಮಾಡುತ್ತಿದ್ದಾರೆ. ಸಿದ್ದರಾಮಯ್ಯನವರಂತೂ ಕೈಗೆ ಸಿಗುತ್ತಿರುವ ಎಲ್ಲ ದಾಖಲೆಗಳನ್ನು ಬಹಿರಂಗಪಡಿಸುತ್ತಾ ಬಿಜೆಪಿ, ನರೇಂದ್ರ ಮೋದಿ, ನಿರ್ಮಲಾ ಸೀತಾರಾಮನ್ ಸೇರಿದಂತೆ ಸಿಕ್ಕಿದವರ ಮೇಲೆಲ್ಲ ಎಷ್ಟು ಸಾಧ್ಯವೋ ಅಷ್ಟು ಟೀಕೆಗಳನ್ನು ಮಾಡುತ್ತಿದ್ದಾರೆ. ಇನ್ನೊಂದೆಡೆ ಉಪಮುಖ್ಯಂತ್ರಿ ಡಿ.ಕೆ.ಶಿವಕುಮಾರ್ ಕೂಡ ಅರೆ ಮನಸ್ಸಿನಿಂದಾದರೂ ಬಿಜೆಪಿ ಮತ್ತು ಅದರ ಮಿತ್ರ ಪಕ್ಷ ಜೆಡಿಎಸ್ ಮೇಲೆ ಮುಗಿಬೀಳುತ್ತಿದ್ದಾರೆ.
ಮುಡಾ ನಿವೇಶನ ಹಂಚಿಕೆ ವಿಚಾರದಲ್ಲಿ ನಡೆದಿರುವ ಅಕ್ರಮಗಳ ಕುರಿತಂತೆ ರಾಜ್ಯ ಸರಕಾರ ತನಿಖೆಗಾಗಿ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಏಕ ಸದಸ್ಯ ಆಯೋಗವನ್ನು ರಚಿಸಿದ್ದು ಅದಿನ್ನೂ ಕಾರ್ಯಾರಂಭ ಮಾಡಬೇಕಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿ.ಜೆ. ಅಬ್ರಹಂ ಎಂಬವರು ನೀಡಿದ ದೂರು ಆಧರಿಸಿ ರಾಜ್ಯಪಾಲರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಾರಣ ಕೇಳಿ ನೋಟಿಸ್ ನೀಡಿದ್ದಾರೆ. ರಾಜಭವನ ಈ ವಿಚಾರದಲ್ಲಿ ತರಾತುರಿಯಿಂದ ವಿಶೇಷ ಆಸಕ್ತಿ ವಹಿಸಿ ನೋಟಿಸ್ ನೀಡಿರುವುದು ಈಗ ಸಂಘರ್ಷಕ್ಕೆ ಬಾಗಿಲು ತೆರೆದಂತಾಗಿದೆ. ಸಂವಿಧಾನದ ಪ್ರತಿನಿಧಿಯಾಗಿ ಕರ್ತವ್ಯ ನಿರ್ವಹಿಸಬೇಕಾದ ರಾಜ್ಯಪಾಲರು ಕೇಂದ್ರ ಸರ್ಕಾರದ ಆದೇಶ ಪಾಲಕರಾಗಿ ಕೆಲಸ ಮಾಡುತ್ತಿದ್ದಾರೆ ಎಂಬ ಆರೋಪಗಳನ್ನು ಕಾಂಗ್ರೆಸ್ ಪಕ್ಷ ಮಾಡುತ್ತಿದೆ. ಕೇಂದ್ರದಲ್ಲಿ ಈ ಹಿಂದಿನ ಸಂದರ್ಭಗಳಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷವೂ ರಾಜಭವನವನ್ನು ತನ್ನ ಹಿತಾಸಕ್ತಿಗಳಿಗೆ ಬಳಸಿಕೊಂಡ ಉದಾಹರಣೆಗಳು ಸಾಕಷ್ಟಿರುವುದರಿಂದ ಇಂತಹ ಆರೋಪಗಳು ಸಹಜ.

ರಾಜ್ಯದಲ್ಲಿ ಕಾಂಗ್ರೆಸ್ನ್ನು ಹಣಿಯಲು ಬಿಜೆಪಿಗೆ ಸಾಕಷ್ಟು ಕಾರಣಗಳು ಇವೆ ಎನ್ನುವುದು ನಿರಾಕರಿಸಲಾಗದ ಸತ್ಯ. ಯಾವುದೇ ರಾಜಕೀಯ ಪಕ್ಷ ವಿರೋಧಿಗಳನ್ನು ಹಣಿಯಲು ತನಗೆ ಸಿಗುವ ಅವಕಾಶವನ್ನು ಬಿಟ್ಟುಕೊಡುವುದಿಲ್ಲ. ಬಹಳ ವರ್ಷ ಹಿಂದಕ್ಕೆ ಹೋಗುವ ಅಗತ್ಯವಿಲ್ಲ. ಎರಡು ವರ್ಷದ ಹಿಂದೆ ಇದೇ ಕಾಂಗ್ರೆಸ್ ವಿಪಕ್ಷದಲ್ಲಿದ್ದಾಗ ಮಾಡಿದ ಹೋರಾಟಗಳನ್ನು ಒಮ್ಮೆ ತಿರುವಿ ಹಾಕಿದರೂ ಸಾಕು ಹೇಗೆ ರಾಜಕೀಯ ನಾಯಕರು ಆಡಳಿತ ಪಕ್ಷಗಳು ಸರಕಾರದ ವಿರುದ್ಧ ಮುಗಿಬೀಳಲು ಕಾರಣಗಳಿಗಾಗಿ ಹೊಂಚು ಹಾಕಿ ಕುಳಿತಿರುತ್ತವೆ ಎನ್ನುವುದು ಗೊತ್ತಾಗುತ್ತದೆ. ಯಾವುದೇ ರಾಜ್ಯದಲ್ಲಿ ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ಇಂಥ ರಾಜಕೀಯ ಆಟಗಳು ಬಹಳ ಸಾಮಾನ್ಯ.
ಹಾಗೊಂದು ವೇಳೆ ತನ್ನ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದರೆ ಕಾನೂನು ಹೋರಾಟಕ್ಕೆ ಈಗಾಗಲೇ ಸಿದ್ದರಾಮಯ್ಯ ಸಜ್ಜಾಗಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯಪಾಲರ ಮುಂದಿನ ನಡೆ ಏನು ಎಂಬ ಕುತೂಹಲ ಹೆಚ್ಚಾಗಿದೆ.





































