ಹಿರಿಯ ಜೀವಗಳು ಇರಲಿ ಬಿಡಿ ನಮ್ಮ ನಡುವೆ

ಆಧುನಿಕ ಜಗತ್ತಿನಲ್ಲಿ ವೈದ್ಯಕೀಯ ವಿಜ್ಞಾನ ಮುಂದುವರಿದಂತೆ ಮನುಷ್ಯನ ಸರಾಸರಿ ಆಯಸ್ಸು ವೃದ್ಧಿ ಆಗಿದೆ. ಹಿಂದಿನ ಕಾಲದಲ್ಲಿ ಮಾನವನನ್ನು ಪೀಡಿಸುತ್ತಿದ್ದ ಪ್ಲೇಗ್‌, ಕ್ಷಯ, ಟಿಟಾನಸ್ ಮೊದಲಾದ ಕಾಯಿಲೆಗಳು ನಿಯಂತ್ರಣಕ್ಕೆ ಬಂದಿರುವುದರಿಂದ ಸಹಜವಾಗಿ ಮಾನವನ ಬದುಕು ಈಗ ಹೆಚ್ಚು ಆರಾಮದಾಯಕ ಮತ್ತು ಹೆಚ್ಚು ದೀರ್ಘ ಆಗಿದೆ. ಇದೆಲ್ಲದರ ಪರಿಣಾಮವಾಗಿ ಭೂಮಿಯಲ್ಲಿ ಹಿರಿಜೀವಗಳ ಸಂಖ್ಯೆ ಈಗ ಹೆಚ್ಚಾಗುತ್ತಾ ಇದೆ.

ವಿಶ್ವಸಂಸ್ಥೆಯ ಸಮೀಕ್ಷೆಯ ಪ್ರಕಾರ ಪ್ರಪಂಚದ ಜನಸಂಖ್ಯೆಯ ಐದು ಮಂದಿಯಲ್ಲಿ ಒಬ್ಬರು 60 ವರ್ಷ ದಾಟಿದ ಮುದುಕರು ಇದ್ದಾರೆ. ಮುಂದಿನ ಐವತ್ತು ವರ್ಷಗಳಲ್ಲಿ ಈ ಸಂಖ್ಯೆ ಎರಡಕ್ಕೆ ಏರುತ್ತದೆ. ಅಂದರೆ ನೂರು ಜನಸಂಖ್ಯೆಯಲ್ಲಿ 40ರಷ್ಟು ಹಿರಿಯ ನಾಗರಿಕರು ಇರುತ್ತಾರೆ. ಈಗ ಅಮೇರಿಕಾದಲ್ಲಿ 50,000 ಶತಾಯುಷಿಗಳು ಇದ್ದಾರೆ. ಭಾರತದಲ್ಲಿ ಕೂಡ ವೃದ್ಧರ ಸಂಖ್ಯೆಯು ಗುಣಾತ್ಮಕವಾಗಿ ಹೆಚ್ಚುತ್ತಿದೆ. ವಿಶೇಷವಾಗಿ ಭಾರತದ ಹಳ್ಳಿಗಳು ಈಗ ವೃದ್ಧಾಶ್ರಮ ಆಗುತ್ತಿವೆ.

ವೃದ್ಧಾಪ್ಯ ಬಂದಾಗ ಮಾನಸಿಕವಾಗಿ ಕುಗ್ಗಿ ಹೋಗುವುದೇಕೆ?

ಸಾಮಾನ್ಯವಾಗಿ ಜೀವಮಾನ ಇಡೀ ದುಡಿದು ಸುಣ್ಣವಾದ ವ್ಯಕ್ತಿ ನಿವೃತ್ತಿಯಾದ ಕೂಡಲೇ ಮಾನಸಿಕವಾಗಿ ಕುಗ್ಗಿ ಹೋಗುವುದನ್ನು ನಾವು ನೋಡುತ್ತೇವೆ. ಒಬ್ಬಂಟಿತನ ಮತ್ತು ಏಕತಾನತೆಗಳು ಅವರನ್ನು ಮಾನಸಿಕವಾಗಿ ಕುಗ್ಗಿಸಿಬಿಡುತ್ತವೆ. ನಮ್ಮ ಬಗ್ಗೆ ಯಾರೂ ಕಾಳಜಿ ಮಾಡುತ್ತಿಲ್ಲ, ನಾವು ಕುಟುಂಬಕ್ಕೆ ಭಾರವಾಗುತ್ತ ಇದ್ದೇವೆ, ನನ್ನ ಮಕ್ಕಳೂ ನಮ್ಮನ್ನು ನಿರ್ಲಕ್ಷ್ಯ ಮಾಡುತ್ತಾ ಇದ್ದಾರೆ ಎಂದೆಲ್ಲ ಯೋಚನೆಗಳು ಅವರನ್ನು ಕಾಡುತ್ತವೆ. ಆರೋಗ್ಯದ ಬಗ್ಗೆ ತಮ್ಮ ಇಡೀ ಬದುಕಿನಲ್ಲಿ ನಿರ್ಲಕ್ಷ್ಯ ಮಾಡಿದವರು ಈಗ ಇನ್ನಷ್ಟು ಕುಗ್ಗಿ ಹೋಗುತ್ತಾರೆ. ಡಯಾಬಿಟಿಸ್, ಪ್ರೆಶರ್, ಮಂಡಿನೋವು ಎಂದೆಲ್ಲ ಪದೇಪದೆ ಡಾಕ್ಟರ್ ಬಳಿ ಹೋಗಿ ಅನಗತ್ಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳುತ್ತಾರೆ ಮತ್ತು ಮಾತ್ರೆ ನುಂಗುತ್ತಾರೆ. ತಮ್ಮ ಮಕ್ಕಳು ತಮ್ಮನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ, ತನ್ನ ಹೆಂಡತಿ (ಗಂಡ ಕೂಡ) ಇತ್ತೀಚೆಗೆ ತಮ್ಮನ್ನು ಕಾಲ ಕಸ ಮಾಡುತ್ತಿದ್ದಾರೆ ಎಂಬ ಕೀಟ ತಲೆಗೆ ಹೊಕ್ಕರೆ ಅವರು ಇನ್ನಷ್ಟು ಕುಗ್ಗಿ ಹೋಗುತ್ತಾರೆ. ತಮ್ಮ ಭಾವನೆಗಳೇ ಈಗಿನ ಜನರೇಶನ್ ಮಂದಿಗೆ ಅರ್ಥ ಆಗ್ತಾ ಇಲ್ಲ ಅನ್ನುವುದು ಅವರ ಗೊಣಗಾಟ.

ಆರೋಗ್ಯಪೂರ್ಣ ಹವ್ಯಾಸಗಳು ಇಲ್ಲದಿದ್ದರೆ ಅವರ ಬದುಕು ಇನ್ನೂ ಕಷ್ಟ. ನಮ್ಮ ಶರೀರವನ್ನು 120 ವರ್ಷಗಳ ಕಾಲ ಸಕ್ಷಮವಾಗಿ ದುಡಿಯುವಂತೆ ವಿನ್ಯಾಸಗೊಳಿಸಲಾಗಿದೆ ಎನ್ನುತ್ತದೆ ಒಂದು ವೈದ್ಯಕೀಯ ವರದಿ. ಅವರಲ್ಲಿ ಇನ್ನೂ ದುಡಿಯುವ ಸಾಮರ್ಥ್ಯ ಇರುತ್ತದೆ. ಅನುಭವದ ಮೂಟೆಯೇ ಅವರ ಜೊತೆ ಇರುತ್ತದೆ. ಆರುವತ್ತು ವರ್ಷಗಳವರೆಗೆ ಅತ್ಯಂತ ಕ್ರಿಯಾಶೀಲವಾಗಿ ದುಡಿದ ಅಂತವರಿಗೆ ‘ಸುಮ್ಮನೆ ಮನೆಯಲ್ಲಿ ಕುಳಿತುಕೋ’ ಎಂದರೆ ಹೇಗಿರಬಹುದು? ಮನೆಯ ಒಳಗೆ ಕೂತು ಇಡೀ ದಿನ ಅವರು ಮಾಡುವುದಾದರೂ ಏನು? ನಿವೃತ್ತಿಯ ಬದಲಾದ ಜೀವನ ಶೈಲಿಗೆ ಒಗ್ಗಿಕೊಳ್ಳುವುದು ಅವರಿಗೆ ತುಂಬ ಕಷ್ಟವಾಗುತ್ತದೆ.

ವೃದ್ಧಾಶ್ರಮಗಳು ಈ ಸಮಸ್ಯೆಗಳಿಗೆ ಪರಿಹಾರ ಅಲ್ಲ

ಇತ್ತೀಚಿನ ಆಧುನಿಕ ಜೀವನದ ಧಾವಂತದಲ್ಲಿ ಹೆಚ್ಚು ವೃದ್ಧಾಶ್ರಮಗಳು ತಲೆಯೆತ್ತುತ್ತಿವೆ. ಅವುಗಳು ನಾವಾಗಿ ಮಾಡಿಕೊಂಡ ಅನಿವಾರ್ಯತೆಯ ವ್ಯವಸ್ಥೆಗಳು. ‘ನಾವಿಬ್ಬರೂ ದುಡಿಯುತ್ತಾ ಇದ್ದೇವೆ ಅಪ್ಪ. ಮನೆಯಲ್ಲಿ ಇಡೀ ದಿನ ಒಬ್ಬನೇ ಕೂತು ಏನು ಮಾಡ್ತೀಯಾ? ಆರೋಗ್ಯ ಸಮಸ್ಯೆಗಳು ಬೇರೆ ತೊಂದರೆ ಕೊಡುತ್ತಾ ಇವೆ. ಅದಕ್ಕಾಗಿ ನಿನ್ನನ್ನು ವೃದ್ಧಾಶ್ರಮದಲ್ಲಿ ಇರಿಸುತ್ತೇವೆ. ಅವರು ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ಅಲ್ಲಿ ನಿಮ್ಮ ಪ್ರಾಯದ ಒಡನಾಡಿಗಳು ದೊರೆಯುತ್ತಾರೆ. ಒಳ್ಳೆಯ ಆಹಾರ ಕೊಡುತ್ತಾರೆ. ವೈದ್ಯಕೀಯ ತಪಾಸಣೆಯನ್ನು ಕಾಲಕಾಲಕ್ಕೆ ಮಾಡುತ್ತಾರೆ. ಏನೂ ಆತಂಕ ಇರೋದಿಲ್ಲ. ಡಿಪಾಸಿಟ್ ಕಟ್ಟಿ ಬಂದಿದ್ದೇವೆ ಅಪ್ಪಾ’ ಎಂದೆಲ್ಲ ಮಗರಾಯನು ಹೇಳಿದಾಗ ಅಪ್ಪ ಅಸಹಾಯಕತೆಯಿಂದ ಆಯ್ತು ಅನ್ನುತ್ತಾರೆ. ಆದರೆ ಅವರಿಗೆ ಬೇಕಾದ ಮಕ್ಕಳ, ಮೊಮ್ಮಕ್ಕಳ ಪ್ರೀತಿ ಎಷ್ಟು ಕೋಟಿ ಕೊಟ್ಟರೂ ವೃದ್ಧಾಶ್ರಮದಲ್ಲಿ ದೊರೆಯುವುದಿಲ್ಲ ಎನ್ನುವುದು ಅರ್ಥ ಆಗಿಯೇ ಆಗುತ್ತದೆ. ಮೊಮ್ಮಕ್ಕಳಿಗೂ ಅಜ್ಜ, ಅಜ್ಜಿಯ ಪ್ರೀತಿ ಬೇಕು, ಅವರು ಕಾಲಿನ ಮೇಲೆ ಕುಳಿತು ಹೇಳುವ ಕಥೆಗಳು ಬೇಕು ಎನ್ನುವ ಸಣ್ಣ ಸೂಕ್ಷ್ಮ ಕೂಡ ಈಗಿನ ಪ್ರಾಕ್ಟಿಕಲ್ ಜನರೇಶನ್ ಅರ್ಥ ಮಾಡಿಕೊಳ್ಳುತ್ತಿಲ್ಲ ಎನ್ನುವುದು ದುರಂತ.

ವೃದ್ಧಾಪ್ಯ ಒಂದು ಕಾಯಿಲೆ ಅಲ್ಲ!

ವೃದ್ಧಾಪ್ಯ ಅನಿವಾರ್ಯ. ಎಲ್ಲರಿಗೂ ಪ್ರಾಯ ಆಗಿಯೇ ಆಗುತ್ತದೆ. ಅದನ್ನು ಸಹಜವಾಗಿ ಸ್ವೀಕರಿಸಿ ಕೊನೆಯತನಕ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಂಡಿದ್ದ ಶಿವರಾಮ ಕಾರಂತರು, ಎ.ಎನ್. ಮೂರ್ತಿರಾಯರು, ನಿಟ್ಟೂರು ಶ್ರೀನಿವಾಸರಾಯರು, ಮಾಸ್ತಿ ವೆಂಕಟೇಶ ಅಯ್ಯಂಗಾರ್ ಮೊದಲಾದವರು ವೃದ್ಧಾಪ್ಯವನ್ನು ಗೆದ್ದವರು. ಕಾರಂತರಂತೂ 90ರ ವಯಸ್ಸಿನಲ್ಲಿ ಕೂಡ ಯಕ್ಷಗಾನದ ಬ್ಯಾಲೆಗಳನ್ನು ನಿರ್ದೇಶನ ಮಾಡಿದ್ದು ಮಾತ್ರವಲ್ಲದೆ ತಾವೇ ಸ್ವತಃ ಗೆಜ್ಜೆ ಕಟ್ಟಿ ಯಕ್ಷಗಾನದ ಹೆಜ್ಜೆಗಳನ್ನು ಹಾಕಿದ್ದನ್ನು ನಾನು ನೋಡಿದ್ದೇನೆ. ಅವರು 90 ದಾಟಿದ ನಂತರವೂ ಬರೆಯುವುದನ್ನು, ಓದುವುದನ್ನು ನಿಲ್ಲಿಸಲೇ ಇಲ್ಲ. ಅರುವತ್ತರ ‘ಅರುಳು ಮರುಳು’ ಎಂಬುದನ್ನು ಅವರು ಒಪ್ಪದೆ ‘ಆರುವತ್ತರ ನಂತರ ಮರಳಿ ಅರುಳುವುದು’ ಎಂದು ಕರೆದರು. ಬೆಳಗ್ಗೆ ಮತ್ತು ಸಂಜೆ ವಾಕಿಂಗ್ ಹೋಗುವುದನ್ನು ಅವರು ನಿಲ್ಲಿಸಲೇ ಇಲ್ಲ. ವೃದ್ಧಾಪ್ಯ ಒಂದು ಕಾಯಿಲೆ ಎಂದು ಕಾರಂತರು ಕೊನೆಯವರೆಗೂ ಒಪ್ಪಲಿಲ್ಲ.

ಹಿರಿಜೀವಗಳ ಬಗ್ಗೆ ಇರಲಿ ಮನೆಮಂದಿಗೆ ಕಾಳಜಿ

ಇಡೀ ಬದುಕನ್ನು ಕುಟುಂಬಕ್ಕಾಗಿ ಸವೆಸಿದ ಹಿರಿಯರನ್ನು ಅವರ ಮಕ್ಕಳು, ಅವರ ಕುಟುಂಬದವರು ನಿರ್ಲಕ್ಷ್ಯ ಮಾಡುವುದು ಖಂಡಿತ ಸರಿಯಲ್ಲ. ಅವರನ್ನು ಮನೆಯ ನಾಲ್ಕು ಗೋಡೆಗಳ ನಡುವೆ ಕೂಡಿ ಹಾಕುವುದಕ್ಕಿಂತ ಅವರನ್ನು ಬೇರೆ ಬೇರೆ ಕಾರ್ಯಕ್ರಮಗಳಿಗೆ, ಸ್ಥಳಗಳಿಗೆ ಕರೆದುಕೊಂಡು ಹೋಗಿ ಅವರ ಏಕತಾನತೆಯ ಬದುಕನ್ನು ಖುಷಿಯಿಂದ ತುಂಬಿಸುವುದು ಮಕ್ಕಳ ಜವಾಬ್ದಾರಿ. ಅದು ಅವರು ಮಾಡಬೇಕಾದ ಕರ್ತವ್ಯದ ಭಾಗ.
‘ನಾನು ಬದುಕಿದ ಮನೆಯಲ್ಲಿಯೇ ಕೊನೆಯ ಉಸಿರು ಎಳೆಯಬೇಕು ಮಗಾ. ಈ ವೃದ್ಧಾಶ್ರಮ ಬೇಡ. ನನ್ನ ಮನೆಗೆ ಕರೆದುಕೊಂಡು ಹೋಗು ಸಾಕು’ ಎಂದು ತನ್ನ ಮಗನಿಗೆ ಫೋನ್ ಮಾಡಿ ಅಪ್ಪ ಗೋಗರೆಯುವ ದೃಶ್ಯವನ್ನು ಕಣ್ಣಾರೆ ಕಂಡು ಈ ಲೇಖನ ಬರೆದಿದ್ದೇನೆ.









































































































error: Content is protected !!
Scroll to Top