ನಕಲಿ ಪ್ರತಿಭಟನೆ ಮಾಡುವುದನ್ನು ಕಾರ್ಕಳ ಕಾಂಗ್ರೆಸ್‌ ನಿಲ್ಲಿಸಲಿ

ಕಾರ್ಕಳ : ಕಾರ್ಕಳದ ಕೆಲವು ಕಾಂಗ್ರೆಸ್ ಮುಖಂಡರುಗಳು ತಮ್ಮ ಅಭ್ಯರ್ಥಿಯ ಸೋಲನ್ನು ಅರಗಿಸಿಕೊಳ್ಳಲಾಗದೆ ತಮ್ಮ ಮೈ ಪರಚಿಕೊಳ್ಳುವವರಂತೆ ವರ್ತಿಸುತ್ತಿದ್ದಾರೆ. ಕ್ಷೇತ್ರದ ಶಾಸಕರಾದ ವಿ. ಸುನಿಲ್ ಕುಮಾರ್‌ರವರು ಕ್ಷೇತ್ರದಲ್ಲಿ ಮಾಡಿದ ಜನಪರ ಕೆಲಸಗಳನ್ನು ಮೆಚ್ಚಿ ಕಾರ್ಕಳದ ಪ್ರಬುದ್ಧ ಮತದಾರರು ಕಾಂಗ್ರೆಸಿನ ಸುಳ್ಳು ಆಶ್ವಾಸನೆಗಳನ್ನು ಹಾಗೂ ಸುಳ್ಳು ಅಪಾದನೆಗಳನ್ನು ನಂಬದೆ ಬಿಜೆಪಿಯನ್ನು ಬೆಂಬಲಿಸಿ ಶಾಸಕರನ್ನು ನಾಲ್ಕನೇ ಬಾರಿಗೆ 2023ರ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಿಸಿರುತ್ತಾರೆ. ಕಾಂಗ್ರೆಸಿನ ಕೆಲವು ನಾಯಕರೆನಿಸಿಕೊಂಡವರು ಆ ಸೋಲನ್ನು ಅರಗಿಸಿಕೊಳ್ಳಲಾಗದೇ ಶಾಸಕರ ವಿರುದ್ಧ ಇಲ್ಲ-ಸಲ್ಲದ ಸುಳ್ಳು ಸುದ್ದಿಗಳನ್ನು ಹರಿಯ ಬಿಟ್ಟು, ನಕಲಿ ಪ್ರತಿಭಟನೆಗಳನ್ನು ನಡೆಸುವುದರ ಮೂಲಕ ನಗೆಪಾಟಲಿಗೆ ಈಡಾಗುತ್ತಿದ್ದಾರೆ. ಯಾವುದೇ ಒಂದು ಆರೋಪಗಳನ್ನು ಮಾಡುವುದಾದಲ್ಲಿ ದಾಖಲೆಯ ಆಧಾರದ ಮೇಲೆ ಮಾಡಬೇಕು ಎನ್ನುವ ಸಾಮಾನ್ಯ ಜ್ಞಾನ ಕೂಡ ಕಾಂಗ್ರೆಸಿನ ನಾಯಕರಿಗೆ ಇಲ್ಲದಿರುವುದು ಬಹಳ ಶೋಚನೀಯ ಸಂಗತಿ ಎಂದು ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ನಿಕಟ ಪೂರ್ವಾಧ್ಯಕ್ಷ ಬಿ. ಮಣಿರಾಜ್ ಶೆಟ್ಟಿ ಲೇವಡಿ ಮಾಡಿದ್ದಾರೆ.

ರಾಜಕೀಯ ಬೇಳೆ ಬೇಯಿಸುತ್ತಿರುವ ಕಾಂಗ್ರೆಸ್
ಬೈಲೂರಿನ ಉಮಿಕಲ್ ಬೆಟ್ಟದಲ್ಲಿ ಶಾಸಕರ ಮುತುವರ್ಜಿಯಿಂದ ಸ್ಥಾಪನೆಯಾದ ಪರಶುರಾಮ ಥೀಮ್ ಪಾರ್ಕಿನ ಬಗ್ಗೆ ಇಲ್ಲ ಸಲ್ಲದ ಸುಳ್ಳು ಆರೋಪಗಳನ್ನು ಮಾಡಿ ಬೈಲೂರು ಪರಿಸರ ಪ್ರವಾಸೋದ್ಯಮವಾಗಿ ಬೆಳೆಯುವ ಅವಕಾಶಕ್ಕೆ ಕಲ್ಲು ಹಾಕಿದ ಈ ಕಾಂಗ್ರೆಸಿನ ನಾಯಕರಿಂದ ಕಾರ್ಕಳದ ಜನತೆ ಪಾಠ ಕಲಿಯಬೇಕಿಲ್ಲ. ಶಾಸಕರೆ ಸ್ವತಃ ಈ ಪ್ರತಿಮೆಯನ್ನು ಸ್ಥಾಪಿಸುವ ಸಂದರ್ಭದಲ್ಲಿ ಪರಶುರಾಮ ಥೀಮ್ ಪಾರ್ಕ್ ಕೇವಲ ಪ್ರವಾಸೋದ್ಯಮದ ದೃಷ್ಟಿಯಿಂದ ಸ್ಥಾಪಿಸಲಾಗುತ್ತದೆ ಹೊರತು ಅದು ಆರಾಧನಾ ಕೇಂದ್ರವಲ್ಲವೆಂದು ಸ್ಪಷ್ಟಪಡಿಸಿರುತ್ತಾರೆ ಹಾಗೂ ಆ ವಿಗ್ರಹದ ಕೆಲವು ಕಾಮಾಗಾರಿಗಳು ಬಾಕಿ ಇದ್ದಗ್ಯೂ ಚುನಾವಣೆಯ ನೀತಿ ಸಂಹಿತೆಗಳು ಜಾರಿಯಾಗಿ ಥೀಮ್ ಪಾರ್ಕಿನ ಉದ್ಘಾಟನೆಗೆ ಸಮಸ್ಯೆಯಾಗಬಾರದೆಂಬ ದೃಷ್ಠಿಯಲ್ಲಿ ಉದ್ಘಾಟಿಸಿರುತ್ತಾರೆ ಹಾಗೂ ಚುನಾವಣಾ ನೀತಿ ಸಂಹಿತೆಯ ಅವಧಿ ಮುಗಿದು 3-4 ತಿಂಗಳೊಳಗೆ ಆ ಥೀಮ್ ಪಾರ್ಕಿನ ಬಾಕಿ ಉಳಿದ ಕಾಮಾಗಾರಿಗಳನ್ನು ಹಾಗೂ ವಿಗ್ರಹದ ಮುಂದುವರೆದ ಕೆಲಸಗಳನ್ನು ಪೂರ್ಣಗೊಳಿಸುವುದಾಗಿ ಉದ್ಘಾಟನಾ ಸಮಯದಲ್ಲಿ ಸ್ಪಷ್ಟವಾಗಿ ಹೇಳಿರುತ್ತಾರೆ. ಆದರೂ ಕಾಂಗ್ರೆಸಿನ ಕೆಲವು ವಿಘ್ನ ಸಂತೋಷಿಗಳು ಆ ಪರಶುರಾಮ ವಿಗ್ರಹದ ಸ್ಥಾಪನೆಯ ಬಗ್ಗೆ ಅಪಸ್ವರವನ್ನು ಎತ್ತಿ ಆ ಸಮಸ್ಯೆಯನ್ನು ಜೀವಂತವಾಗಿಟ್ಟು ತಮ್ಮ ರಾಜಕೀಯ ಬೇಳೆಯನ್ನು ಬೇಯಿಸಿಕೊಳ್ಳಲು ಪ್ರಯತ್ನಿಸುತ್ತಿರುವುದು ಕಂಡು ಬರುತ್ತದೆ.

ರಾಜಕೀಯದ ನಾಟಕಕ್ಕೋಸ್ಕರ ನಕಲಿ ಪ್ರತಿಭಟನೆ
ಜು. 12 ರಂದು ಪೆರ್ವಾಜೆ ನಾರಾಯಣಗುರು ಸಭಾಭವನದಲ್ಲಿ ಜಿಲ್ಲಾಧಿಕಾರಿಗಳ ಅದ್ಯಕ್ಷತೆಯಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಕಾರ್ಕಳ ಕ್ಷೇತ್ರದ ಜನಪ್ರತಿನಿಧಿಯ ನೆಲೆಯಲ್ಲಿ ಭಾಗವಹಿಸಿದ ಕಾರ್ಕಳ ಕ್ಷೇತ್ರದ ಶಾಸಕರ ಸಮ್ಮುಖದಲ್ಲಿ ಉದ್ದೇಶಪೂರ್ವಕವಾಗಿ ಪರಶುರಾಮ ಥೀಮ್ ಪಾರ್ಕಿನ ವಿಷಯವನ್ನು ಎತ್ತಿ ಜನಸ್ಪಂದನ ಕಾರ್ಯಕ್ರಮವನ್ನೇ ಹಾಳುಗೆಡವಿರುತ್ತಾರೆ. ಇನ್ನು ಕಾಂಗ್ರೆಸಿನ ನಾಯಕರುಗಳಿಗೆ ಜನರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಯಾವುದೇ ರೀತಿಯ ಮುತುವರ್ಜಿ ಇಲ್ಲದೆ ಕೇವಲ ರಾಜಕೀಯದ ಗಿಮಿಕ್ಕಿಗಾಗಿ ಕೀಳುಮಟ್ಟದ ಪ್ರತಿಭಟನೆಯ ಮಾಡಿರುತ್ತಾರೆ. ಕಾರ್ಕಳದ ಕೆಲವು ಕಾಂಗ್ರೆಸ್ ನಾಯಕರೆಂದು ಕರೆಸಿಕೊಳ್ಳುವ ಸ್ಥಾಪಿತ ಹಿತಾಸಕ್ತಿಗಳು ತಮಗೆ ತಾಕತ್ತು ಇದ್ದರೆ ಜನರ ಯಾವುದೇ ಸಮಸ್ಯೆಗಳಿದ್ದಲ್ಲಿ ಅದನ್ನು ಪರಿಹರಿಸುವ ಬಗ್ಗೆ ತಮ್ಮ ತಾಲೂಕು ನಾಯಕರೊಂದಿಗೆ ಅಥವಾ ಜಿಲ್ಲಾ ನಾಯಕರೊಂದಿಗೆ ವ್ಯವಹರಿಸಿ ಪರಿಹರಿಸಲು ಪ್ರಯತ್ನಿಸಲಿ. ರಾಜ್ಯದಲ್ಲಿ ತಮ್ಮ ಸರಕಾರವಿದ್ದರೂ ಕಳೆದ 14 ತಿಂಗಳಿಂದ ಕಾರ್ಕಳದ ಕ್ಷೇತ್ರದಲ್ಲಿ ಯಾವುದೇ ರೀತಿಯ ಮೂಲಭೂತ ಸೌಲಭ್ಯಗಳನ್ನು ಒದಗಿಸದೆ ಜನರನ್ನು ವಂಚಿಸುತ್ತಿರುವ ಕೆಲಸವನ್ನು ನಿಲ್ಲಿಸಲಿ ಹಾಗೂ ವ್ಯಥಾ ಸುಳ್ಳು ಆರೋಪಗಳನ್ನು ನಂಬುವ ಜನತೆ ಕಾರ್ಕಳದ ಪ್ರಬುದ್ದ ಮತದಾರರಲ್ಲ ಎನ್ನುವುದು ತಿಳಿದಿರಲಿ. ಕೇವಲ ರಾಜಕೀಯದ ನಾಟಕಕ್ಕೋಸ್ಕರ ನಕಲಿ ಪ್ರತಿಭಟನೆಗಳನ್ನು ಮಾಡುವುದನ್ನು ನಿಲ್ಲಿಸಿ ಕಾರ್ಕಳದ ಕ್ಷೇತ್ರದ ಶಾಸಕರೊಂದಿಗೆ ಕೈ ಜೋಡಿಸಿ ಕಾರ್ಕಳದ ಜನತೆಯ ಹಾಗೂ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಪ್ರಾಮಾಣಿಕವಾಗಿ ಪ್ರಯತ್ನಿಸಲಿ ಮಣಿರಾಜ್‌ ಶೆಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.









































































































error: Content is protected !!
Scroll to Top