ಪೆಟ್ರೋಲ್ಗೂ ಬದಲಾಯಿಸಬಹುದಾದ ಬೈಕ್
ಮುಂಬಯಿ : ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಭರಾಟೆ ಜೋರಾಗಿರುವಂತೆಯೇ ಈಗ ಮಾರುಕಟ್ಟೆಗೆ ಸಿಎನ್‌ಜಿಯಿಂದ ಓಡುವ ಬೈಕ್ ಬಂದಿದೆ. ಸಿಎನ್‌ಜಿ ಕಾರು ಇನ್ನಿತರ ವಾಹನಗಳು ಈಗಾಗಲೇ ಮಾರುಕಟ್ಟೆಯಲ್ಲಿ ಇದ್ದರೂ ಸಿಎನ್‌ಜಿಯಲ್ಲಿ ಓಡುವ ಬೈಕ್ ಮಾರುಕಟ್ಟೆಗೆ ಬಂದಿರುವುದು ಜಗತ್ತಿನಲ್ಲೀ ಇದೇ ಮೊದಲು.
ದ್ವಿಚಕ್ರ ವಾಹನ ತಯಾರಕ ಕಂಪನಿ ಬಜಾಜ್ ಆಟೊ ವಿಶ್ವದ ಮೊದಲ ಸಿಎನ್‌ಜಿ ಬೈಕ್ ‘ಬಜಾಜ್ ಫ್ರೀಡಂ 125’ ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. ಇದರ ಎಕ್ಸ್ ಶೋರೂಂ ಬೆಲೆ .95,000 ದಿಂದ 1. 10 ರೂ.ಲಕ್ಷದವರೆಗೆ ಇದೆ. ಬಜಾಜ್ ಫ್ರೀಡಂ ಬೈಕ್ 125ಸಿಸಿ ಎಂಜಿನ್ ಹೊಂದಿದ್ದು 9.5 ಪಿಎಸ್ ಪವರ್ ಮತ್ತು 9.7 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. 2 ಲೀಟರ್ ಪೆಟ್ರೋಲ್ ಟ್ಯಾಂಕ್ ಮತ್ತು ಸೀಟ್‌ನ ಕೆಳಗೆ 2 ಕೆಜಿ ಸಿಎನ್‌ಜಿ ಸಿಲಿಂಡರ್ ಹೊಂದಿದೆ. ಇದು CNGಯಲ್ಲಿ ಚಲಿಸುವಾಗ ಪ್ರತಿ ಕಿಲೋಗ್ರಾಂಗೆ 102 ಕಿಲೋಮೀಟರ್ ಮೈಲೇಜ್ ಮತ್ತು ಪೆಟ್ರೋಲ್‌ನಲ್ಲಿ ಚಲಿಸುವಾಗ 67 ಕಿಲೋಮೀಟರ್ ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಕೇವಲ ಒಂದು ಸ್ವಿಚ್ ಪ್ರೆಸ್ ಮಾಡುವ ಮೂಲಕ CNGಯಿಂದ ಪೆಟ್ರೋಲ್ ಮತ್ತು ಪೆಟ್ರೋಲ್‌ನಿಂದ CNGಗೆ ಬದಲಾವಣೆ ಮಾಡಿಕೊಳ್ಳಬಹುದು.
ಫ್ರೀಡಂ ಬೈಕ್ 147 ಕೆಜಿ ತೂಕವಿದ್ದು, 758 ಮಿಲಿಮೀಟರ್ ಉದ್ದದ ಸೀಟ್ ಹೊಂದಿದೆ. ನೋಡೋಕೆ ತುಂಬಾ ಸ್ಟೈಲಿಶ್ ಆಗಿರುವ ಫ್ರೀಡಂ ಬೈಕ್ ಸ್ಪೋರ್ಟಿ ಸ್ಟೈಲಿಂಗ್, ಪೂರ್ಣ ಡಿಜಿಟಲ್ ಸ್ಪೀಡೊ ಮೀಟರ್ ಜೊತೆ ಬ್ಲೂಟೂತ್ ಕನೆಕ್ಟಿವಿಟಿ, ಫಸ್ಟ್-ಇನ್-ಕ್ಲಾಸ್ ಲಿಂಕ್ಡ್ ಮೊನೊಶಾಕ್ ಸಸ್ಪೆನ್ಷನ್, ಎಲ್‌ಇಡಿ ಹೆಡ್‌ಲ್ಯಾಂಪ್, ಡ್ಯುಯಲ್ ಕಲರ್ ಸ್ಕೀಮ್ ಹೊಂದಿದೆ. ಸಿಎನ್‌ಜಿ ಬೈಕ್‌ಗಳ ಬುಕ್ಕಿಂಗ್ ಆರಂಭವಾಗಿದ್ದು, ಡೆಲಿವರಿಗಳು ಮೊದಲು ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಲ್ಲಿ ಪ್ರಾರಂಭವಾಗುತ್ತದೆ.
























