ಅಲ್ಲಲ್ಲಿ ಬಿರುಕು ಬಿಟ್ಟ ಚಾರ್ಮಾಡಿ ಘಾಟಿ ರಸ್ತೆ ತಡೆಗೋಡೆ : ಸಂಚಾರ ಸ್ಥಗಿತವಾಗುವ ಆತಂಕ

ಮಂಗಳೂರು: ಭಾರಿ ಮಳೆಯಿಂದಾಗಿ ಚಾರ್ಮಾಡಿ ಘಾಟಿಯ ತಡೆಗೋಡೆಯಲ್ಲಿ ಅಲ್ಲಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಪ್ರಮುಖ ಹೆದ್ದಾರಿಯಲ್ಲಿ ಸಂಚಾರವೇ ಸ್ಥಗಿತಗೊಳ್ಳುವ ಆತಂಕ ಎದುರಾಗಿದೆ. ಇದು ಬೆಂಗಳೂರು ಮತ್ತು ಮಂಗಳೂರು ಸಂಪರ್ಕಿಸುವ ಪ್ರಮುಖ ಹೆದ್ದಾರಿಗಳಲ್ಲಿ ಒಂದಾಗಿದ್ದು, ಸಂಚಾರ ಸ್ಥಗಿತಗೊಂಡರೆ ಕರಾವಳಿ ಜನರಿಗೆ ಬಹಳಷ್ಟು ಸಮಸ್ಯೆಯಾಗಲಿದೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ವ್ಯಾಪ್ತಿಯ ಚಾರ್ಮಾಡಿ ಘಾಟಿಯಲ್ಲಿ ಕಳೆದ 15 ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿಐದಾರು ಕಡೆ ಭೂಮಿ ಬಾಯ್ಬಿಟ್ಟಿದ್ದು, ರಸ್ತೆಯ ತಡೆಗೋಡೆ ಅಲ್ಲಲ್ಲಿ ಬಿರುಕು ಬಿಟ್ಟಿದೆ.
ಈ ಮಾರ್ಗದಲ್ಲಿ ನಿತ್ಯ ಹತ್ತಾರು ಅಂಬ್ಯುಲೆನ್ಸ್‌ಗಳು ರೋಗಿಗಳನ್ನು ಉಡುಪಿ ಹಾಗೂ ಮಂಗಳೂರಿಗೆ ಕರೆದೊಯ್ಯುತ್ತವೆ. ಹಣ್ಣು-ತರಕಾರಿಗಳ ಗಾಡಿಗಳು, ಕಾಲೇಜು ಮಕ್ಕಳು ಕೂಡ ಈ ಮಾರ್ಗವನ್ನೇ ಆಶ್ರಯಿಸಿದ್ದಾರೆ. ಆದರೆ ವರ್ಷದಿಂದ ವರ್ಷಕ್ಕೆ ಚಾರ್ಮಾಡಿ ತನ್ನ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಿದೆಯಾ ಎಂಬ ಅನುಮಾನ ಕಾಡುತ್ತಿದೆ.
2019ರಲ್ಲಿ ಸುರಿದ ಭಾರಿ ಮಳೆಯಿಂದಾಗಿ ಚಾರ್ಮಾಡಿ ಘಾಟಿಯ ರಸ್ತೆ ಸುಮಾರು 200-300 ಅಡಿ ಆಳಕ್ಕೆ ಕುಸಿದಿತ್ತು. ಅಷ್ಟು ಆಳದಿಂದ ಕಾಂಕ್ರೀಟ್ ಗೋಡೆ ನಿರ್ಮಿಸಿ ರಸ್ತೆಗೆ ಬಂದೋಬಸ್ತ್ ಮಾಡಲಾಗಿದೆ. ಆದರೆ ಆ ಕಾಂಕ್ರೀಟ್ ಗೋಡೆ ಕೂಡ ಜರುಗಿದ್ದು ರಸ್ತೆ ಬಾಯ್ಬಿಟ್ಟಿದೆ.
2019ರಲ್ಲಿ 8 ತಿಂಗಳು ಚಾರ್ಮಾಡಿ ಘಾಟಿಯನ್ನು ಬಂದ್ ಮಾಡಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಮಾಡಿದ್ದ ಕಾಮಗಾರಿ ಕಳಪೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಇದೀಗ ಚಾರ್ಮಾಡಿ ಘಾಟಿಯಲ್ಲಿ ಮೂರ್ನಾಲ್ಕು ಕಡೆ ಭೂಮಿ ಬಾಯ್ಬಿಟ್ಟಿದ್ದು ಸ್ಥಳೀಯರು ಹಾಗೂ ಪ್ರಯಾಣಿಕರು ಈ ಮಾರ್ಗದಲ್ಲಿ 10 ಚಕ್ರದ ಲಾರಿಗಳು, ಅದಕ್ಕಿಂತ ದೊಡ್ಡ ವಾಹನಗಳು ಹಾಗೂ ಭಾರಿ ಗಾತ್ರದ ವಾಹನಗಳಿಗೆ ಸಂಪೂರ್ಣ ಬ್ರೇಕ್ ಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

















































error: Content is protected !!
Scroll to Top