ಛಾಯಾಗ್ರಹಣದಿಂದ ನೆನಪುಗಳ ಮೆಲುಕು – ಪದ್ಮಪ್ರಸಾದ್‌ ಜೈನ್‌

ಕಾರ್ಕಳ : ಛಾಯಾಗ್ರಹಣ ಕೇವಲ ಉದ್ದಿಮೆಯಲ್ಲ. ಅದರಿಂದ ನೆನಪುಗಳ ಮೆಲುಕು ಸಾಧ್ಯವಾಗುವುದು ಎಂದು ಎಸ್‌ಕೆಪಿಎ ಜಿಲ್ಲಾಧ್ಯಕ್ಷ ಪದ್ಮಪ್ರಸಾದ್‌ ಜೈನ್‌ ಅಭಿಪ್ರಾಯಪಟ್ಟರು. ಪ್ರಸ್ತುತ ತಂತ್ರಜ್ಞಾನದಲ್ಲಾಗುವ ಹೊಸ ಆವಿಷ್ಕಾರ, ಸಂಶೋಧನೆಗೆ ಅನುಗುಣವಾಗಿ ಛಾಯಾಗ್ರಹಣ ಕ್ಷೇತ್ರದಲ್ಲೂ ಸಾಕಷ್ಟು ಬದಲಾವಣೆಯಾಗಿದೆ. ಬ್ಲ್ಯಾಕ್‌ ಆಂಡ್‌ ವೈಟ್‌ ಕ್ಯಾಮೆರಾದಿಂದ ಮಿರರ್‌ ಲೆಸ್‌ ಕ್ಯಾಮೆರಾದವರೆಗೆ ನಾವಿಂದು ಮುಂದುವರೆದಿದ್ದೇವೆ. ಈ ನಿಟ್ಟಿನಲ್ಲಿ ಬದಲಾಗುತ್ತಿರುವ ತಂತ್ರಜ್ಞಾನಕ್ಕೆ ಅನುಗುಣವಾಗಿ ಛಾಯಾಗ್ರಾಹಕರು ತಮ್ಮನ್ನು ಬದಲಾಯಿಸಿಕೊಳ್ಳಬೇಕೆಂದು ಅವರು ತಿಳಿಸಿದರು.
ಅವರು ಸೌತ್‌ ಕೆನರಾ ಫೋಟೋಗ್ರಾಫರ್ಸ್‌ ಅಸೋಸಿಯೇಶನ್‌ (ಎಸ್‌ಕೆಪಿಎ) ಕಾರ್ಕಳ ವಲಯ ಮತ್ತು ಕ್ಯಾನನ್‌ ಕಂಪೆನಿ ವತಿಯಿಂದ ಹೊಟೇಲ್‌ ಮಯೂರ ಸಭಾಂಗಣದಲ್ಲಿ ನಡೆದ ಛಾಯಾಗ್ರಹಣ ಕ್ಷೇತ್ರದಲ್ಲಿ ತಂತ್ರಜ್ಞಾನ ವಿಷಯಕ್ಕೆ ಸಂಬಂಧಿಸಿದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ನಿರಂತರ ಕಲಿಕೆ
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಖ್ಯಾತ ತರಬೇತುದಾರ, ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತ ಛಾಯಾಗ್ರಾಹಕ ಸಂದೀಪ್‌ ಹೊಳ್ಳ ಮಾತನಾಡಿ, ಛಾಯಾಗ್ರಹಣ ಒಂದು ನಿರಂತರ ಕಲಿಕೆಗೆ ಅವಕಾಶವಿರುವ ಕ್ಷೇತ್ರ. ಛಾಯಾಗ್ರಾಹಕರು ತಮ್ಮ ಜ್ಞಾನ ಮತ್ತು ಸೃಜನಶೀಲತೆಯ ಮೂಲಕ ಉತ್ತಮ ಬದುಕು ರೂಪಿಸಿಕೊಳ್ಳಬಹುದು ಎಂದರು.
ಎಸ್‌ಕೆಪಿಎ ಕಾರ್ಕಳ ವಲಯ ಅಧ್ಯಕ್ಷ ಸುಶೀಲ್‌ ಕುಮಾರ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕ್ಯಾನನ್‌ ಬಿಸಿನೆಸ್ ಮ್ಯಾನೇಜರ್‌ ಅಜಯ್‌, ಎಸ್‌ಕೆಪಿಎ ಜಿಲ್ಲಾ ಛಾಯಾ ಕಾರ್ಯದರ್ಶಿ ರವಿ ಕೋಟ್ಯಾನ್‌ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎಸ್‌ಕೆಪಿಎ ಕಾರ್ಕಳ ವಲಯ ಉಪಾಧ್ಯಕ್ಷ ರೋನಿ ಕ್ಯಾಸ್ತಲಿನೋ ಕಾರ್ಯಕ್ರಮ ನಿರೂಪಿಸಿ, ಕಾರ್ಯದರ್ಶಿ ಪ್ರಸನ್ನ ಹೆಗ್ಡೆ ಬಜಗೋಳಿ ವಂದಿಸಿದರು.































































































































error: Content is protected !!
Scroll to Top