ಯಾವುದೇ ವ್ಯಕ್ತಿಯ ವಿರುದ್ಧ ನ್ಯಾಯಾಲಯದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾದ ಸಂದರ್ಭದಲ್ಲಿ ನ್ಯಾಯಾಧೀಶರು ಆಪಾದಿತ ವ್ಯಕ್ತಿಗೆ ನಿಗಧಿತ ದಿನಾಂಕದಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಿ ಸಮನ್ಸ್ ಜ್ಯಾರಿಗೊಳಿಸುವಂತೆ ಆದೇಶಿಸುತ್ತಾರೆ. ನ್ಯಾಯಾಲಯದಿಂದ ಸಮನ್ಸ್ ಪಡೆದ ನಂತರ ಆರೋಪಿಯು ಸಮನ್ಸ್ನಲ್ಲಿ ತಿಳಿಸಿದ ದಿನಾಂಕದಂದು ತಾನು ಖುದ್ದಾಗಿ ಅಥವಾ ತನ್ನ ವಕೀಲರ ಮೂಲಕ ನ್ಯಾಯಾಲಯಕ್ಕೆ ಹಾಜರಾಗಬೇಕಾಗುತ್ತದೆ. ಈ ರೀತಿಯಾಗಿ ನ್ಯಾಯಾಲಯಕ್ಕೆ ಹಾಜರಾಗುವ ಸಂದರ್ಭದಲ್ಲಿ ಆರೋಪಿತ ವ್ಯಕ್ತಿಯು ನ್ಯಾಯಾಧೀಶರ ಸಮಕ್ಷಮ ತನ್ನ ಮೇಲಿನ ಆರೋಪವನ್ನು ಒಪ್ಪಿಕೊಂಡಲ್ಲಿ ನ್ಯಾಯಾಧೀಶರು ಆತನಿಗೆ ಕಾನೂನಿನ ನಿಯಮಾನುಸಾರದ ಪ್ರಕಾರದ ಶಿಕ್ಷೆಯನ್ನು (ಜೈಲು ಶಿಕ್ಷೆ ಅಥವಾ ದಂಡನೆ) ಅನುಭವಿಸುವಂತೆ ಸೂಕ್ತ ಆದೇಶ ಮಾಡಬಹುದಾಗಿದೆ. ಒಂದು ವೇಳೆ ನ್ಯಾಯಾಲಯಕ್ಕೆ ಹಾಜರಾಗುವ ವ್ಯಕ್ತಿಯು ತನ್ನ ಮೇಲಿನ ಆಪಾದನೆಯನ್ನು ನಿರಾಕರಿಸಿ ತಾನು ನಿರಪರಾಧಿ ಎಂಬುದಾಗಿ ನ್ಯಾಯಾಲಯಕ್ಕೆ ತಿಳಿಸಿದ್ದಲ್ಲಿ ನ್ಯಾಯಾಲಯವು ಆತನ ವಿರುದ್ಧದ ಆಪಾದನೆಯ ನೈಜತ್ವದ ಕುರಿತು ತನಿಖೆಗಾಗಿ ಆರೋಪಿಗೆ ಅವಕಾಶ ನೀಡಿ ಪ್ರಕರಣವನ್ನು ಮುಂದುವರೆಸಿ ದಿನಾಂಕವನ್ನು ನಿಗಧಿಪಡಿಸಬೇಕಾಗುತ್ತದೆ. ಈ ರೀತಿಯಾಗಿ ನ್ಯಾಯಾಲಯವು ಪ್ರಕರಣದ ವಿಚಾರಣೆ ನಡೆಸುವ ಸಂದರ್ಭದಲ್ಲಿ ಸಾಮಾನ್ಯವಾಗಿ ಆರೋಪಿ ನ್ಯಾಯಾಲಯದ ಸಮಕ್ಷಮ ಖುದ್ದಾಗಿ ಹಾಜರಿರಬೇಕಾಗುತ್ತದೆ.
ಕೆಲವು ವಿಶೇಷ ಸಂದರ್ಭಗಳಲ್ಲಿ ನ್ಯಾಯಾಲಯದಲ್ಲಿನ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಆರೋಪಿಯು ತನಗೆ ಯಾವುದಾದರೂ ಸಕಾರಣದಿಂದಾಗಿ ನ್ಯಾಯಾಲಯದಲ್ಲಿ ಖುದ್ದಾಗಿ ಹಾಜರಾಗಲು ಅಸಾಧ್ಯ ಎಂಬುದಾಗಿ ಮನವಿ ಮಾಡಿಕೊಂಡಲ್ಲಿ ಆತನ ಮನವಿಯ ಮೇರೆಗೆ ನ್ಯಾಯಾಲಯಕ್ಕೆ ಖುದ್ದಾಗಿ ಹಾಜರಾಗುವ ವಿಚಾರದಲ್ಲಿ ಆತನ ಪ್ರಾಯ, ಆರೋಗ್ಯದ ಸ್ಥಿತಿಗತಿ, ಸ್ಥಾನಮಾನ, ಧಾರ್ಮಿಕ ಪದ್ಧತಿ, ಆರೋಪದ ಗಹನತೆ ಮತ್ತಿತರ ಸಕಾರಣಗಳನ್ನು ಪರಿಗಣಿಸಿ ಆತನಿಗೆ ನ್ಯಾಯಾಲಯಕ್ಕೆ ಖುದ್ದು ಹಾಜರಾಗುವ ವಿಚಾರದಲ್ಲಿ ವಿನಾಯಿತಿಯನ್ನು ನೀಡುವ ಅಧಿಕಾರವನ್ನು ನ್ಯಾಯಾಲಯವು ಹೊಂದಿರುತ್ತದೆ. ಈ ಸಂದರ್ಭದಲ್ಲಿ ನ್ಯಾಯಾಲಯವು ಸೂಕ್ತ ಕಾರಣ ನೀಡಿ, ತನ್ನ ವಿವೇಚನಾಧಿಕಾರವನ್ನು ಚಲಾಯಿಸಿ ಆದೇಶವನ್ನು ಮಾಡಬೇಕಾಗುತ್ತದೆ. ಈ ರೀತಿಯಾಗಿ ಆರೋಪಿ ತನ್ನ ಖುದ್ದು ಹಾಜರಾತಿಯಿಂದ ವಿನಾಯಿತಿ ಹೊಂದಿದ ಸಂದರ್ಭದಲ್ಲಿ ನ್ಯಾಯಾಲಯವು ಕೇಳುವ ಪ್ರಶ್ನೆಗೆ ಆರೋಪಿಯ ವಕೀಲರು ಉತ್ತರಿಸಬಹುದಾಗಿರುತ್ತದೆ. ಈ ರೀತಿಯಾಗಿ ಆರೋಪಿಯ ಪರವಾಗಿ ಆತನ ವಕೀಲರು ನ್ಯಾಯಾಲಯಕ್ಕೆ ನೀಡುವ ಹೇಳಿಕೆಗೆ ಆರೋಪಿಯು ಬದ್ಧನಾಗಿರುತ್ತಾನೆ. ಆದರೆ, ನ್ಯಾಯಾಲಯದಲ್ಲಿನ ತನ್ನ ಮೇಲಿನ ಪ್ರಕರಣದ ವಿಚಾರಣೆಯನ್ನು ನಿಧಾನಗೊಳಿಸುವ ಅಥವಾ ನ್ಯಾಯಾಲಯದ ಸಮಯವನ್ನು ಹಾಳು ಮಾಡುವ ಉದ್ದೇಶದಿಂದ ಆರೋಪಿ ಮೇಲ್ಕಾಣಿಸಿದ ರೀತಿಯಲ್ಲಿನ ತನ್ನ ಖುದ್ದು ಹಾಜರಾತಿಯ ವಿನಾಯಿತಿ ಅರ್ಜಿ ಸಲ್ಲಿಸಿದ್ದಲ್ಲಿ ನ್ಯಾಯಾಲಯವು ಅಂತಹ ಅರ್ಜಿಯನ್ನು ತಿರಸ್ಕರಿಸಿ ಆರೋಪಿಯ ವಿರುದ್ಧ ಬಂಧನ ವಾರಂಟ್ ಕಳುಹಿಸಬಹುದು.




















