ಗುರು-ಶಿಷ್ಯರ ಕಚ್ಚಾಟಕ್ಕೆ ಕಾರಣವಾದ ಎಂಎಲ್‌ಸಿ ಚುನಾವಣೆ

ಉಡುಪಿ: ವಿಧಾನ ಪರಿಷತ್‌ ಚುನಾವಣೆ ಕೂಡ ಬಿಜೆಪಿಗೆ ಕಗ್ಗಂಟಾಗಿ ಪರಿಣಮಿಸಿದೆ. ಟಿಕೆಟ್‌ ಸಿಗದೆ ಅಸಮಾಧಾನಗೊಂಡಿರುವ ಮಾಜಿ ಶಾಸಕ, ಬಿಜೆಪಿಯ ನಿಷ್ಠಾವಂತ ನಾಯಕ ಕೆ.ರಘುಪತಿ ಭಟ್‌ ಅಂತಿಮವಾಗಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸುವುದರೊಂದಿಗೆ ಉಡುಪಿ ಬಿಜೆಪಿಯಲ್ಲೂ ಬಿರುಕು ಮೂಡಿದೆ. ಅದರಲ್ಲೂ ರಾಜಕೀಯದಲ್ಲಿ ತನ್ನನ್ನು ಬೆಳೆಸಿದ ರಘುಪತಿ ಭಟ್‌ಗೆ ಶಾಸಕ ಯಶ್‌ಪಾಲ್‌ ಸುವರ್ಣ ತಿರುಗಿ ಬೀಳುವ ಪರಿಸ್ಥಿತಿ ಸೃಷ್ಟಿಸಿದೆ.

ರಘುಪತಿ ಭಟ್‌ ಮತ್ತು ಯಶ್‌ಪಾಲ್‌ ಸುವರ್ಣ ಗುರು-ಶಿಷ್ಯರೆಂದೇ ಅರಿಯಲ್ಪಡುವವರು. ರಘುಪತಿ ಭಟ್‌ ಅವರ ಗರಡಿಯಲ್ಲಿ ರಾಜಕೀಯ ಪಟ್ಟುಗಳನ್ನು ಕಲಿತವರು ಯಶ್‌ಪಾಲ್‌ ಸುವರ್ಣ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಟಿಕೆಟ್‌ ನಿರಾಕರಿಸಿದಾಗಲೂ ತನ್ನ ಶಿಷ್ಯನಿಗೆ ಟಿಕೆಟ್‌ ಸಿಕ್ಕಿದೆ ಎಂದು ರಘುಪತಿ ಭಟ್‌ ಸಮಾಧಾನಗೊಂಡಿದ್ದರು. ಮಾತ್ರವಲ್ಲದೆ ಯಶ್‌ಪಾಲ್‌ ಸುವರ್ಣ ಗೆಲುವಿಗೂ ಸಾಕಷ್ಟು ಶ್ರಮಿಸಿದ್ದರು.

ಒಳಗೆ ಎಷ್ಟೇ ಅಸಮಾಧಾನವಿದ್ದರೂ ರಘುಪತಿ ಭಟ್‌ ಪಕ್ಷದ ವಿರುದ್ಧ ಹೋಗಿರಲಿಲ್ಲ. ಮುಂದೆ ಎಂಎಲ್‌ಸಿ ಮಾಡುವ ಭರವಸೆ ಪಕ್ಷ ಅವರಿಗೆ ಕೊಟ್ಟಿತ್ತು ಎನ್ನಲಾಗುತ್ತಿದೆ. ಆದರೆ ಇದೀಗ ಜೂ.3ರಂದು ನಡೆಯಲಿರುವ ನೈರುತ್ಯ ಪದವೀಧರ ಕ್ಷೇತ್ರಕ್ಕೆ ಬಿಜೆಪಿ ಬೇರೆ ಅಭ್ಯರ್ಥಿಯನ್ನು ಕಣಕ್ಕಿಳಿಸಿದಾಗ ಎಂಎಲ್‌ಸಿಯಾಗುವ ರಘುಪತಿ ಭಟ್‌ ಅವರ ಕನಸು ಛಿದ್ರವಾಗಿದೆ. ಹೀಗಾಗಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಇದು ಬಿಜೆಪಿಯಲ್ಲಿ ರಘುಪತಿ ಭಟ್‌ ಬಣ ಮತ್ತು ಯಶ್‌ಪಾಲ್‌ ಸುವರ್ಣ ಬಣ ಎಂದು ಎರಡು ಬಣ ಮೂಡಲು ಕಾರಣವಾಗಿದೆ. ಈಗ ಅವರವರೇ ಪರಸ್ಪರ ಟೀಕೆಗಳನ್ನು ಮಾಡುತ್ತಿದ್ದಾರೆ.

ರಘುಪತಿ ಭಟ್ ಹಾಗೂ ಯಶ್​ಪಾಲ್ ಸುವರ್ಣ ಬೆಂಬಲಿಗರ ನಡುವಣ ವಾಕ್ಸಮರ ತಾರಕಕ್ಕೇರಿದೆ. ಎರಡು ದಿನಗಳ ಒಳಗೆ ಸ್ಪಷ್ಟೀಕರಣ ನೀಡುವಂತೆ ರಾಜ್ಯ ಬಿಜೆಪಿ ಶಿಸ್ತು ಸಮಿತಿಯಿಂದ ಗುರುವಾರ ರಘುಪತಿ ಭಟ್​ಗೆ ನೋಟಿಸ್ ಜಾರಿ ಮಾಡಲಾಗಿತ್ತು. ಇದರ ಬೆನ್ನಲ್ಲೇ ಇದೀಗ ಯಶ್​ಪಾಲ್ ಸುವರ್ಣ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ರಘುಪತಿ ಭಟ್ ಬೆಂಬಲಿಗರು ಅಭಿಯಾನ ಆರಂಭಿಸಿದ್ದಾರೆ.

ರಘುಪತಿ ಭಟ್​​ಗೆ ಎಂಎಲ್‌ಸಿ ಟಿಕೆಟ್ ತಪ್ಪಿಸಿದ್ದೇ ಯಶ್​​ಪಾಲ್ ಸುವರ್ಣ, ನೈರುತ್ಯ ಪದವೀಧರ ಕ್ಷೇತ್ರದಿಂದ ಟಿಕೆಟ್ ನೀಡದಂತೆ ಹೈಕಮಾಂಡ್‌​ಗೆ ಮನವಿ ಮಾಡಿದವರು ಯಶ್​ಪಾಲ್. ಈ ಮೂಲಕ ತನ್ನ ರಾಜಕೀಯ ಗುರುವಿಗೇ ಯಶ್​​​ಪಾಲ್ ಖೆಡ್ಡಾ ತೋಡಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟರ್​​ಗಳನ್ನು ಹರಿಯಬಿಡಲಾಗಿದೆ.

ರಘುಪತಿ ಭಟ್ ಮತ್ತು ಅವರ ಬೆಂಬಲಿಗರಿಗೆ ತಿರುಗೇಟು ನೀಡಿರುವ ಯಶ್​ಪಾಲ್ ಸುವರ್ಣ, ರಘುಪತಿ ಭಟ್​​ ಕಳೆದ 25 ವರ್ಷಗಳಿಂದ ವಿವಿಧ ಹುದ್ದೆಗಳನ್ನು ಅನುಭವಿಸಿದ್ದಾರೆ. 55 ವರ್ಷ ವಯಸ್ಸಿನ ಒಳಗೆಯೇ ಪಕ್ಷದಲ್ಲಿ ಅತಿಹೆಚ್ಚು ಅಧಿಕಾರ ಅನುಭವಿಸಿದ್ದಾರೆ. ನಮ್ಮಲ್ಲಿ ವ್ಯಕ್ತಿಗಿಂತ ಪಕ್ಷ ದೊಡ್ಡದು ಎಂದು ಹೇಳಿದ್ದಾರೆ. ಈ ಕುರಿತು ಪೋಸ್ಟರ್​​ಗಳೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

2023 ರ ವಿಧಾನಸಭೆ ಚುನಾವಣೆಯಲ್ಲಿಯೂ ಭಟ್​ಗೆ ಟಿಕೆಟ್ ತಪ್ಪಿಸಲಾಗಿತ್ತು. ಈಗ ಎಂಎಲ್ಸಿ ಟಿಕೆಟ್ ಸಿಗದಂತೆ‌ ಮಾಡುವಲ್ಲಿ ಯಶ್​ಪಾಲ್ ಯಶಸ್ವಿಯಾಗಿದ್ದಾರೆ. ರಘುಪತಿ ಭಟ್ ಪಕ್ಷದಿಂದ ಬಹುತೇಕ ಮೂಲೆಗುಂಪು ಸಾಧ್ಯತೆ ಎಂಬ ಕುರಿತೂ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ.

ರಘುಪತಿ ಭಟ್ ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಟಿಕೆಟ್​​ ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ, ಪಕ್ಷವು ಈ ಕ್ಷೇತ್ರದಿಂದ ಶಿವಮೊಗ್ಗದ ಡಾ. ಧನಂಜಯ ಸರ್ಜಿ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿತ್ತು. ಅಲ್ಲದೆ, ಶಿಕ್ಷಕರ ಕ್ಷೇತ್ರದ ಟಿಕೆಟ್ ಅನ್ನು ಜೆಡಿಎಸ್ ಪಕ್ಷದ ಚಿಕ್ಕಮಗಳೂರು ಅಭ್ಯರ್ಥಿಗೆ ನೀಡಿದೆ. ಇದು ರಘುಪತಿ ಭಟ್ ಅವರ ಅಸಮಾಧಾನಕ್ಕೆ ಕಾರಣವಾಗಿದೆ. ಹೀಗಾಗಿ ಅವರು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.































































































































error: Content is protected !!
Scroll to Top