ಎಂಎಲ್‌ಸಿ ಚುನಾವಣೆ, ಲೋಕಸಭೆ ಚುನಾವಣೆ ಮತ ಎಣಿಕೆ ಕಾರಣ
ಬೆಂಗಳೂರು: ವಿಧಾನ ಪರಿಷತ್ ಚುನಾವಣೆ ಮತ್ತು ಲೋಕಸಭೆ ಚುನಾವಣೆಯ ಮತ ಎಣಿಕೆ ಒಟ್ಟೊಟ್ಟಿದೆ ಬಂದ ಕಾರಣ ರಾಜ್ಯದಲ್ಲಿ ಆರುದಿನ ಮದ್ಯ ಮಾರಾಟ ನಿಷೇಧ ಜಾರಿಗೆ ಬರಲಿದೆ. ಬೆಂಗಳೂರು ವ್ಯಾಪ್ತಿಯಲ್ಲಿ ಬರೋಬ್ಬರಿ ಆರು ದಿನ ಮದ್ಯ ಮಾರಾಟ ಬಂದ್ ಆಗಲಿದೆ. ಜೂನ್ ಮೊದಲ ವಾರ ಮದ್ಯಪ್ರಿಯರಿಗೆ ಮದ್ಯ ಸಿಗುವುದಿಲ್ಲ. ಜೂನ್ 1 ರಿಂದ 6ರ ವರೆಗೆ ವೈನ್‌ಶಾಪ್, ಎಂಆರ್‌ಪಿ ಔಟ್‌ಲೇಟ್‌ಗಳು ಬಂದ್ ಆಗಲಿವೆ.
ವಿಧಾನ ಪರಿಷತ್ ಚುನಾವಣೆ ಮತ್ತು ಲೋಕಸಭಾ ಚುನಾವಣೆಯ ಮತ ಎಣಿಕೆ ಇರುವುದರಿಂದ ಬೆಂಗಳೂರು ಜಿಲ್ಲಾಡಳಿತ ಮದ್ಯ ಮಾರಾಟ ಬಂದ್ ಮಾಡುವಂತೆ ಆದೇಶ ನೀಡಿದೆ.
ಜೂನ್ 3 ರಂದು ಪದವೀಧರ ಕ್ಷೇತ್ರ ಚುನಾವಣೆಗೆ ಮತದಾನ ನಡೆಯುವುದರಿಂದ ಜೂನ್ 1ರ ಸಂಜೆ 4 ಗಂಟೆಯಿಂದಲೇ ಬಾರ್, ವೈನ್ ಶಾಪ್ ಬಂದ್ ಆಗಲಿದ್ದು, ಜೂನ್ 3 ರವರೆಗೆ ಬಂದ್ ಇಡಬೇಕಾಗುತ್ತೆ. ಜೂನ್ 4 ರಂದು ದೇಶದ್ಯಾಂತ ಲೋಕಸಭಾ ಚುನಾವಣೆಯ ಮತ ಎಣಿಕೆ ನಡೆಯಲಿದೆ. ಹಾಗಾಗಿ ಅಂದೂ ಸಹ ಮದ್ಯ ಮಾರಾಟ ಸಂಪೂರ್ಣ ಬಂದ್ ಆಗಲಿದೆ.
ಜೂನ್ 6 ರಂದು ಎಂಎಲ್‌ಸಿ ಮತ ಎಣಿಕೆ ಇರೋದ್ರಿಂದ ಅಂದೂ ಸಹ ಬಾರ್ ಬಂದ್ ಮಾಡುವಂತೆ ಬೆಂಗಳೂರು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ. ಹೀಗಾಗಿ ಜೂನ್ ತಿಂಗಳ ಮೊದಲ ವಾರ ಮದ್ಯ ಪ್ರಿಯರಿಗೆ ಎಣ್ಣೆ ಸಿಗುವುದು ಕಷ್ಟವಾಗಿದೆ.































































