ಬಾರಾಮುಲ್ಲಾದಲ್ಲಿ ದಾಖಲೆಯ ಮತ ಚಲಾವಣೆ
ಹೊಸದಿಲ್ಲಿ: ಲೋಕಸಭಾ ಚುನಾವಣೆಯ 5ನೇ ಹಂತದಲ್ಲಿ ಶೇ.60.09ರಷ್ಟು ಮತದಾನವಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗ ಮಾಹಿತಿ ನೀಡಿದೆ.
ಸೋಮವಾರ ನಡೆದ ಮತದಾನ ಪ್ರಕ್ರಿಯೆ ಬಹುತೇಕ ಕಡೆ ಶಾಂತಿಯುತವಾಗಿತ್ತು. ಪಶ್ಚಿಮ ಬಂಗಾಳದ ಕೆಲವೆಡೆ ಮಾತ್ರ ಗಲಾಟೆ ನಡೆದಿದೆ. ರಾತ್ರಿ 11.30ರ ಹೊತ್ತಿಗೆ ಮತದಾನ ಪ್ರಮಾಣದ ಕುರಿತು ಟ್ವೀಟ್ ಮಾಡಿರುವ ಕೇಂದ್ರ ಚುನಾವಣಾ ಆಯೋಗ ಒಟ್ಟಾರೆ ಇಂದು ಶೇ.60.09ರಷ್ಟು ಮತದಾನವಾಗಿದೆ ಎಂದು ಹೇಳಿದೆ.
ಆರು ರಾಜ್ಯಗಳು ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳ 49 ಕ್ಷೇತ್ರಗಳಲ್ಲಿ ನಿನ್ನೆ ಮತದಾನವಾಗಿದ್ದು, ಈ ಹಿಂದಿನ ಹಂತಗಳಿಗೆ ಹೋಲಿಕೆ ಮಾಡಿದರೆ 5ನೇ ಹಂತದಲ್ಲಿ ಮತದಾನ ಪ್ರಮಾಣ ಕಡಿಮೆಯಾಗಿದೆ.
ಪಶ್ಚಿಮ ಬಂಗಾಳದಲ್ಲಿ ಐದನೇ ಹಂತದಲ್ಲಿ ಹೆಚ್ಚಿನ ಮತದಾನವಾಗಿದೆ. ರಾಜ್ಯದಲ್ಲಿ ಕೆಲವೆಡೆ ಹಿಂಸಾಚಾರ ಪ್ರಕರಣಗಳು ನಡೆದಿದ್ದರೂ ಶೇ.74.65ರಷ್ಟು ಮತದಾನ ದಾಖಲಾಗಿದೆ. ಲಡಾಖ್‌ನಲ್ಲಿ ಶೇ.69.62, ಜಾರ್ಖಂಡ್‌ನಲ್ಲಿ ಶೇ.63.07ರಷ್ಟು ಮತದಾನ ನಡೆದಿದೆ. ಮಹಾರಾಷ್ಟ್ರದಲ್ಲಿ ಕೇವಲ ಶೇ.54.29ರಷ್ಟು ಮತದಾನ ದಾಖಲಾಗಿದ್ದು, ಐದನೇ ಹಂತದಲ್ಲಿ ಕನಿಷ್ಠ ಮತದಾನ ನಡೆದ ರಾಜ್ಯ ಎನಿಸಿದೆ. ನಾಲ್ಕನೇ ಹಂತದಲ್ಲೂ ಮಹಾರಾಷ್ಟ್ರದಲ್ಲೂ ಕನಿಷ್ಠ ಮತದಾನ ದಾಖಲಾಗಿತ್ತು.
ಉತ್ತರ ಪ್ರದೇಶದಲ್ಲಿ ಶೇ.57.79, ಒಡಿಶಾದಲ್ಲಿ ಶೇ.67.59 ಮತದಾನ, ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಶೇ.56.73 ಮತ್ತು ಬಿಹಾರದಲ್ಲಿ ಶೇ.54.85ರಷ್ಟು ಮತದಾನ ದಾಖಲಾಗಿದೆ.
ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಉಗ್ರ ಪೀಡಿತ ಬಾರಾಮುಲ್ಲಾದಲ್ಲಿ ಇತಿಹಾಸದಲ್ಲೇ ಗರಿಷ್ಠ ಮತದಾನ ದಾಖಲಾಗಿದೆ. ಉಗ್ರರ ಎಚ್ಚರಿಕೆ ನಡುವೆಯೂ ಇಲ್ಲಿ ಮತದಾರರು ಮತಗಟ್ಟೆಗಳಿಗೆ ಆಗಮಿಸಿ ಮತದಾನ ಮಾಡಿದ್ದಾರೆ. ಸೋಮವಾರ ಸಂಜೆ ಮುಕ್ತಾಯವಾದ ಮತದಾನ ಪ್ರಕ್ರಿಯೆಯಲ್ಲಿ ಬಾರಾಲಮುಲ್ಲಾದಲ್ಲಿ ಬರೊಬ್ಬರಿ ಶೇ.59ರಷ್ಟು ಮತದಾನವಾಗಿದೆ. ಇದು ಬಾರಾಮುಲ್ಲಾ ಇತಿಹಾಸದಲ್ಲೇ ಗರಿಷ್ಟ ಮತದಾನ ಎಂದು ಹೇಳಲಾಗಿದೆ.
ಬಾರಾಮುಲ್ಲಾ ಲೋಕಸಭಾ ಕ್ಷೇತ್ರದಲ್ಲಿ 1967 ರಲ್ಲಿ ಮೊದಲ ಬಾರಿಗೆ ಸಂಸತ್ತಿಗೆ ಚುನಾವಣೆ ನಡೆದಾಗಿನಿಂದ ದಾಖಲೆಯ ಮತದಾನಕ್ಕೆ ಸಾಕ್ಷಿಯಾಗಿದೆ ಎಂದು ಕೇಂದ್ರಾಡಳಿತ ಪ್ರದೇಶದ ಮುಖ್ಯ ಚುನಾವಣಾಧಿಕಾರಿ ಪಿ.ಕೆ.ಪೋಲ್ ಶ್ರೀನಗರದಲ್ಲಿ ತಿಳಿಸಿದ್ದಾರೆ. ಈ ಹಿಂದೆ ಅಂದರೆ 1984ರಲ್ಲಿ ಬಾರಾಮುಲ್ಲಾದಲ್ಲಿ ಶೇ.58.90ರಷ್ಚು ಮತದಾನವಾಗಿತ್ತು. ಇದು ಈವರೆಗಿನ ಗರಿಷ್ಠ ಮತದಾನವಾಗಿತ್ತು.
























